
ಪುಸ್ತಕ ವಿಮರ್ಶೆ: ಅಕ್ಷತಾ ಕೊಪ್ಪಳ
ಡಾ. ಎಚ್. ನಾಗ ಹುಬ್ಳಿ ಅವರು ಅನುವಾದಿಸಿರುವ ‘ವಿದ್ಯಾವಂತ ವೇಶ್ಯೆಯ ಆತ್ಮಕಥೆ’ ಕೃತಿ ಮಾನದಾ ದೇವಿ ಅವರು ಬರೆದಿರುವ ಅವರದೇ ಆತ್ಮಕತೆಯಾಗಿದೆ. ಈ ಪುಸ್ತಕದಲ್ಲಿ ಮಾನದಾ
ದೇವಿಯವರು ತಮ್ಮ ಜೀವನದಲ್ಲಿ ಆಗುವಂತಹ ಅನುಭವಗಳು ಹಾಗೂ ತಾನು ಎದುರಿಸಿದ ಸಂಕಟಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.
ಮಾನದಾ ದೇವಿ ಶ್ರೀಮಂತ ಕುಟುಂಬದಲ್ಲಿ ಜನಿಸಿ, ತಾಯಿಯನ್ನು ಕಳೆದುಕೊಂಡ ನಂತರ ತಂದೆಯ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾಳೆ. ಆ ಸಂದರ್ಭದಲ್ಲಿ ಸ್ನೇಹಿತರ ಜೊತೆ ಸೇರಿ ವಯೋಸಹಜ ಭಾವನೆಗಳಿಗೆ ಒಳಗಾಗಿ ರಮೇಶ್ ಜೊತೆ ಮನೆ ಬಿಟ್ಟು ಹೋಗುತ್ತಾಳೆ. ಆದರೆ ಅವನಿಂದ ಮೋಸಗೊಂಡು ಅವಳ ಬದುಕು ಮತ್ತಷ್ಟು ಕಷ್ಟಕರವಾಗುತ್ತದೆ.
ನಂತರ ಮಾನದಾ ಒಂದು ಆಶ್ರಮ ಸೇರಿ ಬದುಕನ್ನು ಸರಿಪಡಿಸಿಕೊಳ್ಳಲು ಯತ್ನಿಸುತ್ತಾಳೆ. ಆದರೆ ಅಲ್ಲಿಯೂ ಅವಳಿಗೆ ಸರಿಯಾದ ನೆಲೆ ಸಿಗುವುದಿಲ್ಲ. ತನ್ನ ದುರ್ಬಲತೆಯಿಂದ ಮತ್ತೆ ತಪ್ಪು ದಾರಿಯಲ್ಲಿ ಸಾಗುತ್ತಾಳೆ. ಬಳಿಕ ಕಲ್ಕತ್ತಾದಲ್ಲಿನ ಒಂದು ಆಶ್ರಮಕ್ಕೆ ಕಳುಹಿಸಲ್ಪಡುತ್ತಾಳೆ. ಅಲ್ಲಿ ಹೊಸ ಸ್ನೇಹಿತರ ಪರಿಚಯವಾಗುತ್ತದೆ, ಆದರೆ ಪರಿಸ್ಥಿತಿಗಳು ಬದಲಾಗುವುದಿಲ್ಲ. ಮೇಲಾಧಿಕಾರಿಗಳ ಕಿರುಕುಳದಿಂದ ಆಶ್ರಮವನ್ನು ತೊರೆಯಲು ನಿರ್ಧರಿಸುತ್ತಾರೆ. ಕೊನೆಗೆ ಸ್ನೇಹಿತೆಯ ಪರಿಚಯದಿಂದ ಒಂದು ವೇಶ್ಯೆಯ ಮನೆಗೆ ಸೇರಿ, ವೇಶ್ಯಾವೃತ್ತಿಯ ಜೀವನವನ್ನು ಆರಂಭಿಸುತ್ತಾಳೆ. ಅಲ್ಲಿ ಅವಳು ಎದುರಿಸುವ ಕಷ್ಟಗಳು, ನೋವುಗಳು ಮತ್ತು ಅನುಭವಗಳನ್ನು ಈ ಕೃತಿಯಲ್ಲಿ ವಿವರವಾಗಿ ಹೇಳಲಾಗಿದೆ.
ಈ ಪುಸ್ತಕವು ಜೀವನದಲ್ಲಿ ತೆಗೆದುಕೊಳ್ಳುವ ಒಂದು ತಪ್ಪು ನಿರ್ಧಾರದಿಂದ ಎಷ್ಟು ದೊಡ್ಡ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಸುತ್ತದೆ.
ಹೆಣ್ಣು ಜೀವನ ತುಂಬಾ ಸೂಕ್ಷ್ಮವಾಗಿದೆ. ಒಂದು ಸಣ್ಣ ತಪ್ಪನ್ನೇ ಸಮಾಜ ದೊಡ್ಡದಾಗಿ ನೋಡುತ್ತದೆ. ಆದರೆ ಗಂಡಸಿಗೆ ಅದೇ ರೀತಿಯ ನಿಯಮಗಳು ಕಡಿಮೆ. ಈ ವಿಷಯವನ್ನೂ ಈ ಕೃತಿ ಸ್ಪಷ್ಟವಾಗಿ ತೋರಿಸುತ್ತದೆ. “ಆಸೆಗಾಗಿ ಮುಟ್ಟಿದವನು ರಸಿಕನೆನ್ನುವ ಸಮಾಜ ಹಸಿವಿಗಾಗಿ ಮುಟ್ಟಿಸಿಕೊಂಡವಳನ್ನು ವೇಶ್ಯೆ ಎನ್ನುತ್ತದೆ” ಅನ್ನುವ ಕಟು ಸತ್ಯವನ್ನು ಈ ಕೃತಿ ಬಿಚ್ಚಿಡುತ್ತಾ ಸಾಗುತ್ತದೆ.
ಒಟ್ಟಾರೆ, ‘ವಿದ್ಯಾವಂತ ವೇಶ್ಯೆಯ ಆತ್ಮಕಥೆ’ ಒಂದು ಸರಳ ಕಥೆಯಲ್ಲ; ಇದು ಬದುಕಿನ ಪಾಠ ಹೇಳುವ ಕೃತಿ. ವಿಶೇಷವಾಗಿ ಯುವತಿಯರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಚೆನ್ನಾಗಿ ಯೋಚಿಸಬೇಕು ಎಂಬ ಸಂದೇಶವನ್ನು ನೀಡುತ್ತದೆ.





