ದಾವಣಗೆರೆ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಚಿರತೆಯೊಂದು ದಾಳಿ ನಡೆಸಿದ ಘಟನೆ ಜಗಳೂರು ತಾಲೂಕಿನ ಮರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊನ್ನೂರಪ್ಪ ಎಂಬ ರೈತ ಚಿರತೆಯ ದಾಳಿಗೆ ಒಳಗಾದವರು. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಹಿಂದಿನಿಂದ ಬಂದ ಚಿರತೆ ಏಕಾಏಕಿ ಹಾರಿಬಿದ್ದು ದಾಳಿ ಮಾಡಿದೆ. ದಾಳಿಯಿಂದ ಅವರ ಕಾಲಿಗೆ ಗಾಯವಾಗಿದೆ. ಕೂಡಲೇ ಕಿರುಚಿದ ಪರಿಣಾಮ, ಪಕ್ಕದ ಜಮೀನಿನಲ್ಲಿದ್ದ ರೈತರು ನೆರವಿಗೆ ಧಾವಿಸಿದರು. ಈ ನಡುವೆ ಚಿರತೆ ಅಲ್ಲಿಂದ ಪರಾರಿಯಾಯಿತು. ಬಳಿಕ ಗಾಯಗೊಂಡ ಹೊನ್ನೂರಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
ಮತ್ತಷ್ಟು ಓದಿ: ರಾತ್ರೋರಾತ್ರಿ ಡಿಕೆಶಿ ನಗರ ಸುತ್ತಾಟ ರಸ್ತೆ ಗುಂಡಿ ದುರಸ್ತಿ ಪರಿಶೀಲನೆ
ಮಾಹಿತಿ ದೊರಕುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿ ಚಿರತೆಯ ಹೆಜ್ಜೆ ಗುರುತುಗಳನ್ನು ದೃಢಪಡಿಸಿದರು. ಕಳೆದ ಮೂರು ದಿನಗಳಿಂದ ದೊಣೆಹಳ್ಳಿ, ಕಾಮಗೇತನಹಳ್ಳಿ ಮತ್ತು ಮುಸ್ಟೂರು ಪ್ರದೇಶಗಳ ಜಮೀನುಗಳಲ್ಲಿ ಚಿರತೆಯ ಸಂಚಾರದಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಈಗ ರೈತನ ಮೇಲೆ ದಾಳಿ ನಡೆದಿರುವುದರಿಂದ ಆತಂಕ ಇನ್ನಷ್ಟು ಹೆಚ್ಚಾಗಿದೆ. ಚಿರತೆಯನ್ನು ಸೆರೆ ಹಿಡಿಯುವಂತೆ ರೈತರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
