ಮಕ್ಕಳ ಕಲ್ಯಾಣ ಸಮಿತಿಗೆ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾಗಿ ತ್ರಿವೇಣಿ ಪತ್ತಾರ್ ರಮೇಶ್ ನೇಮಕ.

0
56

BP NEWS Karnataka: ಬಳ್ಳಾರಿ: ಸೆಪ್ಟೆಂಬರ್.12: ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015,ತಿದ್ದುಪಡಿ ಕಾಯ್ದೆ 2021 ಹಾಗೂ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಾದರಿ ನಿಯಮಗಳು 2016,ತಿದ್ದುಪಡಿ ಮಾದರಿ ನಿಯಮಗಳು 2022 ರನ್ವಯ 03 ವರ್ಷಗಳ ಅವಧಿಗೆ ಕರ್ನಾಟಕ ರಾಜ್ಯಪಾಲ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,ಮಹಿಳಾ ಮತ್ತು ಕಲ್ಯಾಣ ಅಭಿವುದ್ದಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ, ಸರ್ಕಾರದ ಅಧೀನ ಕಾರ್ಯದರ್ಶಿ -೩, ಆರ್.ಲತಾ ಅವರು ಬಳ್ಳಾರಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ತ್ರಿವೇಣಿ ಪತ್ತಾರ್ ರಮೇಶ್ ಅವರಿಗೆ ಅಧ್ಯಕ್ಷರನ್ನಾಗಿ ಮತ್ತು ಚಟ್ಲ ವೆಂಕಟೇಶ,ಸಣ್ಣ ಕೇಶವ,ಚಂದ್ರಕಲಾ,ಎಫ್,ಗೌಸಿಯಾ ಇವರುಗಳನ್ನು ಸದಸ್ಯರನ್ನಾಗಿ ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರ ಜವಾಬ್ದಾರಿ ಮತ್ತು ಕರ್ತವ್ಯಗಳು:-

1.ಮಕ್ಕಳ ಕಲ್ಯಾಣ ಸಮಿತಿಯು ಕೇಂದ್ರ ಸರ್ಕಾರವು ಹೊರಡಿಸಿರುವ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015,ತಿದ್ದುಪಡಿ ಕಾಯ್ದೆ 2021 ಹಾಗೂ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಾದರಿ ನಿಯಮಗಳು 2016 ಹಾಗೂ ತಿದ್ದುಪಡಿ ಮಾದರಿ ನಿಯಮಗಳು 2022 ಅಡಿ ಕಾರ್ಯನಿರ್ವಹಿಸುವುದು.

2.ಪ್ರತಿ ಮಕ್ಕಳ ಕಲ್ಯಾಣ ಸಮಿತಿಯ ಕಾರ್ಯವ್ಯಾಪ್ತಿ ಇಲಾಖೆಯು ನಿರ್ದಿಷ್ಟ ಪಡಿಸಿರುವ ಆಯಾ ಜಿಲ್ಲೆಗೆ ಮಾತ್ರ ಸೀಮಿತವಾಗಿರುತ್ತದೆ.

3. ರಕ್ಷಣೆ ಮತ್ತು ಪೋಷಣೆಗೆ ಒಳಪಡುವ ಮಕ್ಕಳ ಪ್ರಕರಣಗಳನ್ನು ಮೇಲೆ ತಿಳಿಸಿದ ಕಾಯ್ದೆ ಮತ್ತು ನಿಯಮಗಳನ್ವಯ ನಿರ್ವಹಿಸುವುದು. ಮಕ್ಕಳಿಗೆ ಸಂಬಂಧಿಸಿದ ಇತರೆ ಕಾಯ್ದೆಗಳನ್ನು ನಿರ್ದಿಷ್ಟ ಪ್ರಕರಣಗಳಲ್ಲಿ ಸಂದರ್ಭಕ್ಕೆ ತಕ್ಕಂತೆ ಪರಿಶೀಲಿಸುವುದು.ಎಲ್ಲಾ ಸಂದರ್ಭಗಳಲ್ಲೂ ಮಗುವಿನ ಒಳಿತನ್ನು ಗಮನದಲ್ಲಿಟ್ಟುಕೊಳ್ಳತಕ್ಕದ್ದು.

4.ನಿಯಮ 16(3)ರಲ್ಲಿ ತಿಳಿಸಿರುವಂತೆ, ಸಭೆಗಳನ್ನು ಬಾಲಮಂದಿರದಲ್ಲಿ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ನಿಗದಿ ಪಡಿಸುವ ಸ್ಥಳದಲ್ಲಿ ನಡೆಸುವುದು. ಸಭಾ ಸ್ಥಳವನ್ನು ಅನಗತ್ಯವಾಗಿ ಬದಲಾಯಿಸಬಾರದು. ಬೇರೆ ಸ್ಥಳದಲ್ಲಿ ವಿಶೇಷ ಸಭೆ ನಡೆಸಬೇಕಾದ್ದಲ್ಲಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳೊಡನೆ ಸಮಾಲೋಚಿಸಿ ಮೊದಲೇ ನಿರ್ಧರಿಸಿ ಸೂಕ್ತ ಪ್ರಚಾರ ನೀಡಿ ಸಭೆ ಆಯೋಜಿಸುವುದು.

5.ನಿಯಮ 16(6) ರಲ್ಲಿ ತಿಳಿಸಿರುವಂತೆ, ದಿನದ 24*7 ಕನಿಷ್ಠ ಒಬ್ಬರು ಸದಸ್ಯರು ತುರ್ತು ಸಂದರ್ಭಗಳಲ್ಲಿ ನೇರವಾಗಿ ಅಥವಾ ದೂರವಾಣಿ ಮುಖಾಂತರ ಸ್ಥಳೀಯ ಪೊಲೀಸರು ಅಥವಾ ಮಕ್ಕಳ ವಿಶೇಷ ಪೊಲೀಸ್ ಘಟಕಕ್ಕೆ ಅಗತ್ಯ ನಿರ್ದೇಶನ ನೀಡಲು ಲಭ್ಯರಿರಬೇಕು.

6.ನಿಯಮ 16(7)ರನ್ವಯ ಸಮಿತಿಯು ಪ್ರತಿ ಕರ್ತವ್ಯ ನಿರತ ದಿನಗಳಲ್ಲಿ ಬೆಳಿಗ್ಗೆ 10:00 ರಿಂದ ಸಭೆಗಳನ್ನು ಕಡ್ಡಾಯವಾಗಿ ಆರಂಭಿಸಬೇಕು. ದಿನಕ್ಕೆ ಕನಿಷ್ಠ 06 ಗಂಟೆಗಳ ಕಾಲ ಉಪಸ್ಥಿತಿಗಳನ್ನು ನಡೆಸತಕ್ಕದ್ದು.

7.ಮಕ್ಕಳ ಕಲ್ಯಾಣ ಸಮಿತಿಯು ಶಾಸನಬದ್ಧ ಸಮಿತಿಯಾಗಿದ್ದು, ಸೆಕ್ಷನ್ 27(9) ರನ್ವಯ ಒಂದು ನ್ಯಾಯಾಪೀಠದಂತೆ ಕಾರ್ಯನಿರ್ವಹಿಸತಕ್ಕದ್ದು. ಸಮಿತಿ ಕಲಾಪಗಳು ಕ್ರಮವಾಗಿರತಕ್ಕದ್ದು. ಸಮಿತಿ ಪ್ರಾರಂಭದಲ್ಲಿ ಎಲ್ಲಾ ಸದಸ್ಯರು ಏಕಕಾಲಕ್ಕೆ ಹಾಜರಾಗಿ ಕಲಾಪ ಮುಗಿಯುವರೆಗೆ ಇರತಕ್ಕದ್ದು.

8.ಬಾಲನ್ಯಾಯ ಕಾಯ್ದೆಯ ಸೆಕ್ಷನ್ 28 ರಲ್ಲಿ ತಿಳಿಸಿರುವಂತೆ ಮಕ್ಕಳ ಪಾಲನಾ ಸಂಸ್ಥೆಗಳ ಭೇಟಿಯೂ ಸೇರಿದಂತೆ ತಿಂಗಳಲ್ಲಿ ಕನಿಷ್ಠ 20 ಉಪಸ್ಥಿತಿಗಳು ಕಡ್ಡಾಯವಾಗಿ ಇರತಕ್ಕದ್ದು. ಉಪಸ್ಥಿತಿಗಳನ್ನು ಹೆಚ್ಚಿಸುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯವಿದ್ದಲ್ಲಿ ಹೆಚ್ಚುವರಿ ಸಭೆ ನಿಗದಿಪಡಿಸುವುದು.

9.ನಿಯಮ 15(5) ಹಾಗೂ 89 (3)ರ ಅನುಸಾರ ಅಧ್ಯಕ್ಷರು ಮತ್ತು ಸದಸ್ಯರು ಮಕ್ಕಳ ರಕ್ಷಣಾ ನಿರ್ದೇಶನಾಲಯವು ನಿಯೋಜಿಸುವ ತರಬೇತಿಗಳಿಗೆ ಕಡ್ಡಾಯವಾಗಿ ಹಾಜಗಾಗುವುದು.

10.ನಿಯಮ 16(1)ರಂತೆ ಸಮಿತಿಯ ಸದಸ್ಯರು ರಾಜ್ಯ ಸರ್ಕಾರ ನಿಗದಿಪಡಿಸಿರುವ ಉಪಸ್ಥಿತಿ ಭತ್ಯೆ ಹಾಗೂ ಪ್ರಯಾಣ ದರಕ್ಕೆ ಅರ್ಹರಾಗಿರುತ್ತಾರೆ.

11.ನಿಯಮ 15(6)ರಲ್ಲಿ ತಿಳಿಸಿರುವಂತೆ, ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಸಂದರ್ಭಗಳಲ್ಲಿ ಕನಿಷ್ಠ ಒಂದು ತಿಂಗಳ ಮುಂಚಿತವಾಗಿ ರಾಜೀನಾಮೆ ತಿಳುವಳಿಕೆಯನ್ನು ರಾಜ್ಯ ಸರ್ಕಾರಕ್ಕೆ ನೇರವಾಗಿ ಸಲ್ಲಿಸುವುದು ಹಾಗೂ ಪ್ರತಿಯನ್ನು ನಿರ್ದೇಶಕರು, ಮಕ್ಕಳ ರಕ್ಷಣಾ ನಿರ್ದೇಶನಾಲಯ ಇವರಿಗೆ ಕಳುಹಿಸುವುದು.

12. ಸಮಿತಿಯು ಮಕ್ಕಳೊಡನೆ ಸಂಭಾಷಿಸುವಾಗ / ಪ್ರಕರಣಗಳನ್ನು ನಿರ್ವಹಿಸುವಾಗ ನಿಯಮ 16(9)ರಂತೆ ಮಕ್ಕಳ ಸ್ನೇಹಿಯಾಗಿರಬೇಕು. ಸಮಿತಿ ಸಭೆಗಳಲ್ಲಿ ಅಸಭ್ಯವಾದ ಮಾತುಗಳು / ಸಂಜ್ಞೆಗಳನ್ನು ಬಳಸತಕ್ಕದ್ದಲ್ಲ.ಮಕ್ಕಳ ಜಾತಿ, ಧರ್ಮ, ಲಿಂಗ ವರ್ಣ ಮತ್ತು ಪ್ರಭೇದಗಳನ್ನು ಆಧರಿಸಿ ಬೇಧ ತೋರಬಾರದು. ಅಂಗವಿಕಲತೆ ಅಥವಾ ಅಡ್ಡ ಹೆಸರಿನಲ್ಲಿ ಗುರುತಿಸಿ ಸಂಬೋಧಿಸಬಾರದು ಮಕ್ಕಳ ಹಕ್ಕುಗಳನ್ನು ಸದಾ ಗೌರವಿಸುವುದು.

13. ನಿಯಮ 17(i) ಸಮಿತಿಯು ಪ್ರತಿಯೊಂದು ಪ್ರಕರಣದ ಕೇಸ್ ಪೈಲ್‌ನ್ನು ಫಾರಂ 15ರ ಘೋಷ್ಕಾರೆಯೊಂದಿಗೆ ನಿರ್ವಹಿಸುವುದು.

14. ಸಮಿತಿಯ ಆಡಳಿತಾತ್ಮಕ ವಿಷಯಗಳನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ನಿರ್ವಹಿಸುವುದು.

15. ಬಾಲಕಿಯರ ಬಾಲಮಂದಿರಗಳಿಗೆ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಭೇಟಿ ನೀಡುವ ಅವಶ್ಯಕತೆ ಬಂದಲ್ಲಿ ಪುರುಷ ಸದಸ್ಯರು ಕಡ್ಡಾಯವಾಗಿ ಮಹಿಳಾ ಸದಸ್ಯರೊಂದಿಗೆ ಭೇಟಿ ನೀಡುವುದು.

16.ಸಮಿತಿಯು ತಮ್ಮ ಕರ್ತವ್ಯದ ಅವಧಿಯಲ್ಲಿ ಮಕ್ಕಳ ಮಾಹಿತಿಯನ್ನು ಗೌಪ್ಯವಾಗಿ ಇಡತಕ್ಕದ್ದು. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ, ಮಾಧ್ಯಮಗಳಿಗೆ ಬಿಡುಗಡೆ ಮಾಡುವಂತಿಲ್ಲ (ಸೆಕ್ಷನ್ 3(xi), 74)

17.ಸಮಿತಿಯ ಮುಂದೆ ಬಂದ ಮಕ್ಕಳನ್ನು ಪುನರ್ವಸತಿಗಾಗಿ ಆದ್ಯತೆ ಮೇಲೆ ಸರ್ಕಾರದ ಬಾಲಮಂದಿರಗಳಲ್ಲಿ ಅಥವಾ 2ನೇ ಆದ್ಯತೆ ಮೇರೆಗೆ ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾಗಿರುವ ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಅಥವಾ ಅರ್ಹ ಸಂಸ್ಥೆಗಳಲ್ಲಿ ಮಾತ್ರ ದಾಖಲು ಮಾಡಬೇಕು.

18.ಮಕ್ಕಳನ್ನು ಅಂತರ್ ಜಿಲ್ಲಾ ಹಾಗೂ ಅಂತರ್ ರಾಜ್ಯ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ನಿರ್ದಿಷ್ಟ ಅನುಷ್ಠಾನ ಮಾರ್ಗಸೂಚಿ (Standard Operating Procedure)ಅನ್ನು ಪಾಲಿಸತಕ್ಕದ್ದು.

19.ಸಮಿತಿಯ ಮಕ್ಕಳ ಸ್ನೇಹಿಯಾಗಿ, ಸಾಮರಸ್ಯವನ್ನು ಕಾಪಾಡಿಕೊಂಡು ಮಕ್ಕಳ ಪರಮೋಚ್ಚ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರವನ್ನು ಕೈಗೊಳ್ಳುವುದು.

20.ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಸಂದರ್ಭದಲ್ಲಿ ವೈಯುಕ್ತಿಕವಾಗಿ ಸಮಿತಿಯ ಯಾವುದೇ ಸದಸ್ಯರು ಆರ್ಥಿಕ ಅಥವಾ ಇನ್ಯಾವುದೇ ಆಮಿಷದಿಂದ ದೂರ ಉಳಿಯುವುದು.

21.ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಬಾಲಮಂದಿರಗಳ ಯಾವುದೇ ಆಡಳಿತಾತ್ಮಕ ಅಧಿಕಾರಗಳನ್ನು ಹೊಂದಿರುವುದಿಲ್ಲ.

22.ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಾದರಿ ನಿಯಮ 2016, ನಿಯಮ ಆಯ್ಕೆಗೊಂಡ ಯಾವುದೇ ಸದಸ್ಯರು ತಾವು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲಸದಿಂದಾಗಿ ಮಕ್ಕಳ ಕಲ್ಯಾಣ ಸಮಿತಿ/ಬಾಲನ್ಯಾಯ ಮಂಡಳಿಗಳ ಸದಸ್ಯರಾಗಿ ಕಾರ್ಯನಿರ್ವಹಿಸುವುದಕ್ಕೆ ಅಗತ್ಯವಿರುವಷ್ಟು ವೇಳೆ ಮತ್ತು ಗಮನ ನೀಡಲು ಸಾಧ್ಯವಿಲ್ಲದಿದ್ದಲ್ಲಿ, ಅಂತಹವರು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾಗುವಂತಿಲ್ಲ./ಬಾಲನ್ಯಾಯ ಮಂಡಳಿಗಳ
ಯಾವುದೇ ಮಕ್ಕಳ ಪೋಷಣಾ ಸಂಸ್ಥೆಯ ಜೊತೆಗೆ ನೇರವಾಗಿ ಅಥವಾ ಪರೋಕ್ಷವಾಗಿ ತಮ್ಮ ಅಧಿಕಾರ ಅವಧಿಯಲ್ಲಿ ಸಂಬಂಧ ಹೊಂದಿರುವಂತಿಲ್ಲ.
ಅಧಿಕಾರ ಅವಧಿಯಲ್ಲಿ ಯಾವುದೇ ರಾಜಕೀಯ ಪಕ್ಷದಲ್ಲಿ ಯಾವುದೇ ಅಧಿಕಾರ ಹೊಂದಿರುವಂತಿಲ್ಲ.
ದಿವಾಳಿ ಎಂದು ಘೋಷಿತವಾದಲ್ಲಿ ಸದಸ್ಯತ್ವನ್ನು ಕಳೆದುಕೊಳ್ಳುವರು.

23.ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015ರ ಸೆಕ್ಷನ್ 27 ರಲ್ಲಿ ತಿಳಿಸಿರುವಂತೆ ಈ ಮುಂದಿನ ಕಾರಣಗಳು ಎದುರಾದಲ್ಲಿ ವಿಚಾರಣೆ ನಡೆಸಿ ಸಮಿತಿಯ ಸದಸ್ಯತ್ವವನ್ನು ರದ್ದುಗೊಳಿಸಲಾಗುವುದು.
ಯಾವುದೇ ಸದಸ್ಯರು ತಮ್ಮ ಅಧಿಕಾರಗಳ ದುರುಪಯೋಗ ಮಾಡುತ್ತಿರುವುದು ಕಂಡು ಬಂದರೆ.
ಯಾವುದೇ ಸೂಕ್ತ ಕಾರಣಗಳನ್ನು ನೀಡದೆ ಸತತವಾಗಿ 03 ತಿಂಗಳುಗಳ ಕಾಲ ಮಂಡಳಿಯ ಸಭೆಗಳಿಗೆ ಗೈರು ಹಾಜರಾದಲ್ಲಿ.
ವರ್ಷದಲ್ಲಿ ನಡೆದ ಸಭೆಗಳಲ್ಲಿ 14 ಭಾಗ ಸಭೆಗಳಿಗೆ ಗೈರು ಹಾಜರಾದಲ್ಲಿ.ಅನೈತಿಕ ವ್ಯವಹಾರಗಳಲ್ಲಿ ಸಿಲುಕಿರುವುದು ಹಾಗೂ ಇಂತಹ ಆರೋಪವನ್ನು ತೊಡೆದು ಹಾಕದಿದ್ದಲ್ಲಿ ಅಥವಾ ಇಂತಹ ಆರೋಪದಿಂದ ಅವರನ್ನು ಸಂಪೂರ್ಣವಾಗಿ ಕ್ಷಮಿಸದಿದ್ದಲ್ಲಿ.ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಅಥವಾ ಜವಾಬ್ದಾರಿ ಹೊಂದಿರುವ ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಸ್ವಾಮಿತ್ವದ ಅಥವಾ ನಿರ್ವಹಿಸುವ ಯಾವುದೇ ಸೇವೆಯಿಂದ ವಜಾಗೊಳಿಸಿದಲ್ಲಿ.ಮಕ್ಕಳ ದುರುಪಯೋಗದಲ್ಲಿ ಭಾಗಿಯಾದ್ದಲ್ಲಿ ಅಥವಾ ಬಾಲಕಾರ್ಮಿಕರಿಂದ ದುಡಿಸಿಕೊಂಡಿದ್ದಲ್ಲಿ ಅಥವಾ ಇನ್ಯಾವುದೇ ಮಾನವ / ಮಕ್ಕಳ ಹಕ್ಕುಗಳ ಉಲ್ಲಂಘನೆ ಅಥವಾ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಲ್ಲ.ರಾಜ್ಯ ಸರ್ಕಾರದ ಗಮನಕ್ಕೆ ಸದರಿ ವ್ಯಕ್ತಿಯು ಸದಸ್ಯರಾಗಿ ಮುಂದುವರೆಯುವುದು ಅನಗತ್ಯವೆಂದು ಕಂಡು ಬಂದಲ್ಲಿ ಆಯ್ಕೆಗೊಂಡ ಯಾವುದೇ ಸದಸ್ಯರು ತಾವು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲಸದಿಂದಾಗಿ ಮಕ್ಕಳ ಕಲ್ಯಾಣ ಸಮಿತಿ/ಬಾಲನ್ಯಾಯ ಮಂಡಳಿಗಳ ಸದಸ್ಯರಾಗಿ ಕಾರ್ಯನಿರ್ವಹಿಸುವುದಕ್ಕೆ ಅಗತ್ಯವಿರುವಷ್ಟು ವೇಳೆ ಮತ್ತು ಗಮನ ನೀಡಲು ಸಾಧ್ಯವಿಲ್ಲದಿದ್ದಲ್ಲಿ, ಅಂತಹವರು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾಗುವಂತಿಲ್ಲ./ ಬಾಲನ್ಯಾಯ ಮಂಡಳಿಗಳ
ಯಾವುದೇ ಮಕ್ಕಳ ಪೋಷಣಾ ಸಂಸ್ಥೆಯ ಜೊತೆಗೆ ನೇರವಾಗಿ ಅಥವಾ ಪರೋಕ್ಷವಾಗಿ ತಮ್ಮ ಅಧಿಕಾರ ಅವಧಿಯಲ್ಲಿ ಸಂಬಂಧ ಹೊಂದಿರುವಂತಿಲ್ಲ.
ಅಧಿಕಾರ ಅವಧಿಯಲ್ಲಿ ಯಾವುದೇ ರಾಜಕೀಯ ಪಕ್ಷದಲ್ಲಿ ಯಾವುದೇ ಅಧಿಕಾರ ಹೊಂದಿರುವಂತಿಲ್ಲ.
ದಿವಾಳಿ ಎಂದು ಘೋಷಿತವಾದಲ್ಲಿ ಸದಸ್ಯತ್ವನ್ನು ಕಳೆದುಕೊಳ್ಳುವರು.
ವಿಚಾರಣೆ ನಡೆಸಿ ಸದಸ್ಯತ್ವದಿಂದ ತೆಗೆಯಲು ಅವಕಾಶ ವಿರುತ್ತದೆ.

24.ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಕ್ಕಳ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣೆ ಬಗ್ಗೆ ಕ್ರಮ ವಹಿಸುವುದು.

25.ಸೆಕ್ಷನ್ 27 (8),ನಿಯಮ 17(v-a) ರಲ್ಲಿ ತಿಳಿಸಿರುವಂತೆ,ಮಾಸಿಕ ವರದಿಯನ್ನು ನಮೂನೆ 16A ನಲ್ಲಿ ಪ್ರತಿ ಮಾಹೆ 5ನೇ ತಾರೀಖಿನೊಳಗೆ ಹಾಗೂ ತ್ರೈಮಾಸಿಕ ವರದಿಯನ್ನು ನಮೂನೆ 16ರಲ್ಲಿ ಜಿಲ್ಲಾ ದಂಡಾಧಿಕಾರಿಗಳಿಗೆ ಮತ್ತು ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ಸಲ್ಲಿಸಲು ಕ್ರಮಹಿಸತಕ್ಕದ್ದು.
ಇನ್ನುಳಿದಂತೆ,ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ)ಕಾಯ್ದೆ ಮತ್ತು ನಿಯಮಗಳಿಗೆ ಅನುಗುಣವಾಗಿ ಮಕ್ಕಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಕೊಂಡು ಕಾರ್ಯನಿರ್ವಹಿಸತಕ್ಕದ್ದು.