ಸಮಾನತೆ ತರುವಲ್ಲಿ ಸಂವಿಧಾನ ಮಹತ್ತರ ಪಾತ್ರ

0
76

BP NEWS: ಬಳ್ಳಾರಿ: ಫೆಬ್ರುವರಿ.20:

ಸಮಾಜದಲ್ಲಿ ಸಮಾನತೆ ತರಲು ಸಂವಿಧಾನವು ಪ್ರಮುಖ ಕಾರಣವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಸಂವಿಧಾನವನ್ನು ಅರಿಯಬೇಕು ಎಂದು ಭುಜಂಗ ನಗರ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಜಿ.ಪ್ರಕಾಶ ಗೌಡ ಅವರು ಹೇಳಿದರು.
ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ ಸಂಚರಿಸುತ್ತಿರುವ “ಸಂವಿಧಾನ ಜಾಗೃತಿ ಜಾಥಾ” ಕಾರ್ಯಕ್ರಮದ ಅಂಗವಾಗಿ ಸೋಮವಾರ ಭುಜಂಗ ನಗರ ಗ್ರಾಮದಲ್ಲಿ ಮೆರವಣಿಗೆಯ ಮೂಲಕ ಸಂಭ್ರಮದಿಂದ ಸ್ವಾಗತಿಸಿ ಬಳಿಕ ಅವರು ಮಾತನಾಡಿದರು.
ಬಳಿಕ, ಸಂಡೂರು ತಾಲ್ಲೂಕಿನ ತಾರಾ ನಗರ, ಭುಜಂಗ ನಗರ, ನರಸಿಂಗಾಪುರ, ದೇವಗಿರಿ ಹಾಗೂ ಕೃಷ್ಣಾನಗರ ಗ್ರಾಮ ಪಂಚಾಯಿತಿಗಳ ಮಾರ್ಗದಲ್ಲ್ಲಿ ಸಂಚರಿಸಿ, ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.
ಸಂವಿಧಾನ ರಚನಾ ಸಭೆ ಹಾಗೂ ಸಂವಿಧಾನದ ಕುರಿತ ವೀಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು ಮತ್ತು ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಜಾಥಾದ ಉದ್ದಕ್ಕೂ ಸಂವಿಧಾನ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿಕೆ ಮಾಡಲಾಯಿತು.
ವಿವಿಧೆಡೆ ಜಾಥಾವನ್ನು ಕಳಶ ಹಿಡಿದ ಮತ್ತು ಪೂರ್ಣ ಕುಂಭ ಹೊತ್ತ ಮಹಿಳೆಯರು, ನೇತಾರರ ವೇಷ ಭೂಷಣಗಳನ್ನು ಧರಿಸಿದ ವಿದ್ಯಾರ್ಥಿಗಳು, ಹಲಗೆ, ಮತ್ತು ಡೊಳ್ಳು ಕಲಾವಿದರು, ಕಂಸಾಳೆ ಹಾಗೂ ನಂದಿ ಕೋಲು ಕುಣಿತದ ಕಲಾವಿದರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಗೂ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು.
ದೋಣಿಮಲೈ ಗ್ರಾಮದಲ್ಲಿ ಶಾಲಾ ಮಕ್ಕಳ ಸಾಮೂಹಿಕ ನೃತ್ಯ ಮನಮೋಹಕವಾಗಿತ್ತು. ನಾರಾಯಣಪುರ ಗ್ರಾಮದಲ್ಲಿ ಗ್ರಾಮಸ್ಥರು ಡ್ರಮ್ಸ್ ಸೆಟ್ ಮೂಲಕ ವಿಶೇಷವಾಗಿ ಸ್ವಾಗತ ಕೋರಿದರು. ಗ್ರಾಮಸ್ಥರೊಂದಿಗೆ ವಿವಿಧ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಎನ್.ಕೆ.ವೆಂಕಟೇಶ ಅವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಡೊಳ್ಳು ಕುಣಿತದಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.
ಜಾಥಾ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here