ನುಡಿದಂತೆ ನಡೆದವನು, ನಡೆದಂತೆ ನುಡಿದವನು ಅಂಬಿಗರ ಚೌಡಯ್ಯ: ಮೇಯರ್ ಬಿ.ಶ್ವೇತ

0
46

BP NEWS: ಬಳ್ಳಾರಿ: ಜನವರಿ.22:
ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲವಾಗಿ ಬೆಳಗಿದ ಶರಣನೆಂದರೆ ಅಂಬಿಗರ ಚೌಡಯ್ಯ. ಮಾತು ಕಟುವಾದರೂ ದಿಟವನ್ನೆ ನುಡಿದ ದಿಟ್ಟನೀತ. ನುಡಿದಂತೆ ನಡೆದವನು, ನಡೆದಂತೆ ನುಡಿದವನು ಅಂಬಿಗರ ಚೌಡಯ್ಯ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಬಿ.ಶ್ವೇತ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಬಿಡಿಎಎ ಫುಟ್‍ಬಾಲ್ ಮೈದಾನದ ವೇದಿಕೆ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿದ್ದ ತಾರತಮ್ಯ ನೀತಿಯ ವಿರುದ್ಧ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿದ ಅಂಬಿಗರ ಚೌಡಯ್ಯ ನಿಜ ಶರಣನು. ಸಮಾಜದ ಅನಾಚಾರ, ಢಂಬಾಚಾರಗಳನ್ನು ನಿರ್ಭಿತಿಯಿಂದ ಕಟುವಾಗಿ ಟೀಕಿಸಿದವನು. ತನ್ನ ವಚನಗಳನ್ನು ವೈಚಾರಿಕವಾಗಿ ನಿರೂಪಿಸಿ ಮಹಾಮಾನವತಾವಾದಿಯಾಗಿದ್ದಾನೆ ಎಂದು ತಿಳಿಸಿದರು.
ಲೇಖಕರಾದ ಡಾ.ತಿಪ್ಪೇಸ್ವಾಮಿ ಸಂಡೂರು ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಅಂಬಿಗರ ಚೌಡಯ್ಯ 12ನೇ ಶತಮಾನದ ಬಸವಣ್ಣನವರ ಅನುಯಾಯಿ ಶರಣ. ಸಾವಿರಾರು ವರ್ಷಗಳಿಂದ ಧರ್ಮ-ದೇವರುಗಳ ಬಗೆಗೆ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳನ್ನೆಲ್ಲ ಗುರು ಬಸವಣ್ಣನವರೊಂದಿಗೆ ಅಂಬಿಗರ ಚೌಡಯ್ಯ ಹೊಡೆದೋಡಿಸುತ್ತಲೇ ವಿಚಾರ ಪರ ವಾದ, ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದವರು ಎಂದು ಹೇಳಿದರು.
ಎಲ್ಲಾ ಶರಣರಂತೆ ಈತ ಕಾಯಕಯೋಗಿಯಾಗಿದ್ದು, ದೋಣಿ ನಡೆಸುವುದು ಅವನ ಕಾಯಕ. ಅಂಬಿಗ ಎಂದರೆ ದೋಣಿ ನಡೆಸುವವರು ಎಂದು ಹೇಳಲಾಗುತ್ತದೆ. ವಚನಕಾರ ಅಂಬಿಗರ ಚೌಡಯ್ಯ ಎಂಬ ಅಂಕಿತನಾಮದೊಂದಿಗೆ ಸುಮಾರು 278 ವಚನಗಳನ್ನು ಬರೆದರು. ಅವರ ಪದ್ಯಗಳು ಅವರ ಆಳವಾದ ಅನುಭವಗಳು ಮತ್ತು ಸಾಮಾಜಿಕ ಪ್ರಜ್ಞೆಯ ಪ್ರತಿಬಿಂಬವಾಗಿದ್ದು, ಅವುಗಳನ್ನು ಕೇಳುವ ಎಲ್ಲರ ಮೇಲೆ ಶಾಶ್ವತವಾದ ಪ್ರಭಾವವನ್ನು ಬಿಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂ.ನಾಗಭೂಷಣ ಬಾಪುರೆ ಅವರು ವಚನ ಗಾಯನಗಳನ್ನು ಪ್ರಸ್ತುತ ಪಡಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪಮೇಯರ್ ಬಿ.ಜಾನಕಿ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್, ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಗಂಗಾಮತ ಸಮಾಜದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತ್ಯೋತ್ಸವದ ಅಂಗವಾಗಿ ನಗರದ ಕನಕದುರ್ಗಮ್ಮ ದೇವಸ್ಥಾನ ಆವರಣದಿಂದ ಏರ್ಪಡಿಸಿದ್ದ ಮೆರವಣಿಗೆಯು ಸಂಭ್ರಮದಿಂದ ನಡೆಯಿತು.
ಮಹಾನಗರ ಪಾಲಿಕೆಯ ಮಹಾಪೌರರಾದ ಬಿ.ಶ್ವೇತ ಅವರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಪೂರ್ಣ ಕುಂಭ ಹೊತ್ತ ಮಹಿಳೆಯರು ಹಾಗೂ ವಿವಿಧ ಸಾಂಸ್ಕøತಿಕ ಕಲಾತಂಡಗಳು ಗಮನ ಸೆಳೆದವು.
ಮೆರವಣಿಗೆಯು ನಗರದ ಕನಕ ದುರ್ಗಮ್ಮ ದೇವಸ್ಥಾನದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಬಿ.ಡಿ.ಎ.ಎ ಫುಟ್‍ಬಾಲ್ ಮೈದಾನದ ವೇದಿಕೆ ಸಭಾಂಗಣಕ್ಕೆ ತಲುಪಿತು.

LEAVE A REPLY

Please enter your comment!
Please enter your name here