BP NEWS: ಬಳ್ಳಾರಿ: ನವೆಂಬರ್.07:
ಬಾಲ್ಯದಲ್ಲಿಯೇ ಸಂವಿಧಾನ, ಪ್ರಜಾಪ್ರಭುತ್ವ, ನಾಯಕತ್ವವನ್ನು ಅರಿತುಕೊಳ್ಳುವುದು ಮತ್ತು ವ್ಯವಸ್ಥೆಯನ್ನು ಪ್ರಶ್ನಿಸುವದನ್ನು ಇಂದಿನ ಮಕ್ಕಳಿಗೆ ಕಲಿಸುವ ಅವಶ್ಯಕತೆ ಇದೆ, ಮಕ್ಕಳು ತಮ್ಮ ಹಕ್ಕುಗಳನ್ನು ಪ್ರಶ್ನಿಸುವ ಪ್ರಯತ್ನಗಳನ್ನು ಮಾಡಬೇಕು ಎಂದು ಬಳ್ಳಾರಿ ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಡಗಿನ ಬಸಪ್ಪ ಅವರು ಹೇಳಿದರು.
ನಗರದ ಬಿಡಿಡಿಎಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಮಕ್ಕಳ ಸಂಸತ್-2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ತಾಲೂಕಿನ ಗ್ರಾಮೀಣಾ ಭಾಗದಿಂದ ಮಕ್ಕಳು ಈ ಸಂಸತ್ ಸಭೆಯಲ್ಲಿ ಭಾಗವಹಿಸುತ್ತಿರುವುದು ಖುಷಿಯ ವಿಚಾರ, ಮಕ್ಕಳು ಭಾಗವಹಿಸುವಿಕೆ ಹಾಗೂ ಪ್ರಶ್ನಿಸುವಿಕೆಗೆ ಇದೊಂದು ಉತ್ತಮ ಅವಕಾಶವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸದಸ್ಯ ಹೆಚ್.ಸಿ ರಾಘವೇಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ತಿಂಗಳಲ್ಲಿ ರಾಜ್ಯ ಮಟ್ಟದಲ್ಲಿ ಆಯೋಜಿಸುವ ರಾಜ್ಯ ಮಕ್ಕಳ ಸಂಸತ್‍ಗೆ ರಾಜ್ಯದ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ, ಅಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಕ್ಕಳು ಭಾಗವಹಿಸಿ ತಮ್ಮ ಅಹವಾಲು, ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ರಾಜ್ಯದ ಮುಖ್ಯಮಂತಿಗಳ ಜೊತೆ ಸಂವಾದ ಏರ್ಪಡಿಸುವ ಉದ್ದೇಶದಿಂದ ಈ ಸಂಸತ್‍ನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಸಂಸತ್ ಆಯೋಜಿಸಿ ರಾಜ್ಯ ಮಟ್ಟದ ಆಯೋಜನೆಗೆ ಪೂರ್ವ ತಯಾರಿ ಆರಂಭಿಸಲಾಗಿದೆ ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ತಾಲೂಕುಗಳಿಂದ ಮಕ್ಕಳ ಹಕ್ಕುಗಳ ಸಂಘದಿಂದ ಮಕ್ಕಳ ಪ್ರತಿನಿಧಿಗಳು ಆಗಮಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಮಕ್ಕಳು ತಮ್ಮ ಅಹವಾಲುಗಳನ್ನು ನಿರ್ಭೀತಿಯಿಂದ ಮಂಡಿಸಿ, ಹಕ್ಕುಗಳ ಉಲ್ಲಂಘನೆಯಾಗದಂತೆ ಸದಾ ಜಾಗೃತಿಯಿಂದ ಇರಬೇಕು. ನಿಮ್ಮ ಸಹಾಯಕ್ಕಿರುವ ಮಕ್ಕಳ ಸಹಾಯವಾಣಿ 1098 ಮತ್ತು ಪೊಲೀಸ್ ಸಹಾಯವಾಣಿ 112 ಬಳಸಲು ಕರೆ ನೀಡಿದರು.
ಮಕ್ಕಳ ಸಂಸತ್‍ನಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಚನ್ನಬಸಪ್ಪ, ಸ್ಥಳೀಯ ವಲ್ರ್ಡ್ ವಿಷನ್ ಸಂಸ್ಥೆಯ ಪ್ರೇಮಲತಾ, ರೀಡ್ಸ್ ಸಂಸ್ಥೆಯ ತಿಪ್ಪೇಶಪ್ಪ , ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸ್ವಸಹಾಯಸಂಘ(ರಿ)ನ ಪ್ರತಿನಿಧಿ ಶ್ವೇತಾ ಹಾಗೂ ಜಿಲ್ಲೆಯ ವಿವಿಧ ತಾಲೂಕಿನಿಂದ 56 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಚಿಕ್ಕ ಮಕ್ಕಳಿಂದ ಬಂದ ದೊಡ್ಡ ದೊಡ್ಡ ಪ್ರಶ್ನೆಗಳು ನೋಡುಗರಲ್ಲಿ ಆಶ್ಚರ್ಯ ಮೂಡಿಸಿದವು.
ಚಿಕ್ಕ ಮಕ್ಕಳು-ದೊಡ್ಡ ಪ್ರಶ್ನೆಗಳು:
ಮಕ್ಕಳು ಸಂಸತ್ತಿನ ಚರ್ಚೆಯಲ್ಲಿ ಸುದೀರ್ಘ 3 ಗಂಟೆಗಳ ಕಾಲ ಭಾಗವಹಿಸಿ, ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ಮಕ್ಕಳ ದೌರ್ಜನ್ಯ ಪ್ರಕರಣಗಳು, ಹವಾಮಾನ ವೈಪರಿತ್ಯದಿಂದ ಮಕ್ಕಳ ಮೇಲಾಗುವ ಪರಿಣಾಮಗಳು ಸೇರಿದಂತೆ ಮಕ್ಕಳ ಆರೋಗ್ಯ, ಕೋವಿಡ್ ನಂತರ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಮಕ್ಕಳ ಅಪೌಷ್ಟಿಕತೆ ಕೊನೆಗಾಣಿಸುವುದು ಕುರಿತು ವಿಸ್ತøತ ಚರ್ಚೆ ನಡೆಸಿದರು.
ವಿಜೇತರು:
ಇಂದು ನಡೆದ ಜಿಲ್ಲಾ ಮಟ್ಟದ ಮಕ್ಕಳ ಸಂಸತ್‍ನಲ್ಲಿ ಬಳ್ಳಾರಿ ಜಿಲ್ಲೆಯಿಂದ ರಾಜ್ಯ ಮಟ್ಟದ ಮಕ್ಕಳ ಸಂಸತ್‍ಗೆ ಸಿರುಗುಪ್ಪ ತಾಲೂಕಿನ ರಾರಾವಿ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ಸಿ.ಶಾಂತಿ ಹಾಗೂ ಬಳ್ಳಾರಿ ತಾಲೂಕಿನ ಬಸರಕೋಡು ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಡಿ.ಮಹಾಂತೇಶ್ ಆಯ್ಕೆಯಾಗಿದ್ದಾರೆ.
ಹಿನ್ನಲೆ:
ಕರ್ನಾಟಕದ ವಿವಿಧ ಭಾಗಗಳಲ್ಲಿರುವ ಮಕ್ಕಳ ಸಮಸ್ಯೆಗಳೇನು? ಮಕ್ಕಳ ನಿಜವಾದ ಬೇಡಿಕೆಗಳೇನು? ಮಕ್ಕಳ ಸಮಸ್ಯೆ, ಬೇಡಿಕೆಗಳನ್ನು ಸರ್ಕಾರ ತುರ್ತಾಗಿ ಪರಿಶೀಲಿಸಬೇಕಾಗಿದೆ? ಇವೇ ಮೊದಲಾದ ವಿಚಾರಗಳ ಕುರಿತು ಮಕ್ಕಳೊಡನೆ ಸಮಾಲೋಚಿಸಿ ಮಕ್ಕಳೇ ಅವರನ್ನು ಕಾಡುತ್ತಿರುವ ಸಮಸ್ಯೆಗಳನ್ನು ಗುರುತಿಸಿ ಮಾಡಿದ ಪಟ್ಟಿಯನ್ನು ಸರ್ಕಾರಕ್ಕೆ ತಲುಪಿಸಿ, ಮಕ್ಕಳ ಸಮಸ್ಯೆಗಳಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚರ್ಚಿಸಿ, ಆಗ್ರಹಿಸಲು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರವು “ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್” ಹಾಗೂ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಮಕ್ಕಳ ಸಮಾಲೋಚನೆಯನ್ನು ರಾಜ್ಯಮಟ್ಟದಲ್ಲಿ ಆಯೋಜಿಸುತ್ತಿದೆ.
ಜಿಲ್ಲಾ ಮಟ್ಟದ ಮಕ್ಕಳ ಸಂಸತ್-23, ಈ ಹಿನ್ನೆಲೆಯಲ್ಲಿ ನಮ್ಮ ಬಳ್ಳಾರಿ ಜಿಲ್ಲೆಯಿಂದ ಇಬ್ಬರು ಮಕ್ಕಳನ್ನು ಜಿಲ್ಲಾ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿ ರಾಜ್ಯ ಮಟ್ಟಕ್ಕೆ ಕಳುಹಿಬೇಕಾಗಿದೆ. ಇದರ ಪೂರ್ವಭಾವಿ ಸಭೆಯಲ್ಲಿಂದು 5 ತಾಲೂಕಿನಿಂದ ಆಗಮಿಸಿದ ಮಕ್ಕಳ ಪ್ರತಿನಿಧಿಗಳ ಸಮಾನ ಮನಸ್ಕರ ಗುಂಪು ಇಬ್ಬರನ್ನು ಆಯ್ಕೆಮಾಡಲಾಯಿತು.