50 ವರ್ಷಗಳ ಕರ್ನಾಟಕ ರಾಜ್ಯೋತ್ಸವ ಸಂಭ್ರಮ; ಆದ್ದೂರಿ ಆಚರಣೆಗೆ ಜಿಲ್ಲಾಧಿಕಾರಿ ಪ್ರಶಾಂತ್ಕುಮಾರ್ ಮಿಶ್ರಾ ಕರೆ

0
68

BP NEWS: ಬಳ್ಳಾರಿ: ಅಕ್ಟೋಬರ್.28:
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಶೇಷ ರೀತಿಯಲ್ಲಿ ಆದ್ದೂರಿಯಾಗಿ ಆಚರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕರೆ ನೀಡಿದ್ದಾರೆ.
ನವೆಂಬರ್ 1 ರಂದು ಜಿಲ್ಲೆಯ ಎಲ್ಲಾ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಗಳನ್ನು ಬಿಡಿಸಿ, ಕರ್ನಾಟಕ ಸಂಭ್ರಮ-50 “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಘೋಷ ವಾಕ್ಯ ಬರೆಯಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಅಂದು ಬೆಳಿಗ್ಗೆ 9 ಗಂಟೆಗೆ ಆಕಾಶವಾಣಿ ಕೇಂದ್ರಗಳಲ್ಲಿ (ರೇಡಿಯೋ) ನಾಡ ಗೀತೆಯನ್ನು ಪ್ರಸಾರ ಮಾಡಲಾಗುವುದು. ಆ ಸಮಯದಲ್ಲಿ ಕನ್ನಡ ನಾಡಿನ ಸಮಸ್ತ ನಾಗರಿಕರು ಎದ್ದು ನಿಂತು ರಾಷ್ಟ್ರ ಗೀತೆಗೆ ಗೌರವ ಸಲ್ಲಿಸುವ ರೀತಿಯಲ್ಲಿ ನಾಡ ಗೀತೆಗೂ ಗೌರವ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.
ನಂತರ ಸಂಜೆ 5 ಗಂಟೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳ ಮೈದಾನಗಳಲ್ಲಿ ಕೆಂಪು ಗಾಳಿಪಟ ಉತ್ಸವ ಆಚರಿಸಬೇಕು. ಬಳಿಕ ಸಂಜೆ 7 ಗಂಟೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳ ಮನೆಗಳ ಮುಂದೆ, ಕಚೇರಿಗಳ ಮುಂದೆ ಹಾಗೂ ಅಂಗಡಿ-ಮಳಿಗೆಗಳ ಮುಂದೆ ಹಣತೆ (ದೀಪ) ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಿಸಬೇಕು ಎಂದು ಹೇಳಿದ್ದಾರೆ.
ಮೇಲ್ಕಂಡ ಎಲ್ಲಾ ಅಂಶಗಳನ್ನು ಚಾಚು ತಪ್ಪದೇ ಸೂಕ್ತ ಕ್ರಮ ವಹಿಸಲು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ರಮವಹಿಸಿ, ಸಂಘ-ಸಂಸ್ಥೆಗಳು, ಎಲ್ಲಾ ನಾಗರಿಕರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕನ್ನಡ ರಾಜ್ಯೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here