BP NEWS: ಬಳ್ಳಾರಿ: ಅಕ್ಟೋಬರ್.26:
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಎರಡನೇ ಜಿಲ್ಲಾ ಮಟ್ಟದ ಜನತಾ ದರ್ಶನವು ಪ್ರಥಮ ಬಾರಿಗೆ ಬಳ್ಳಾರಿ ತಾಲ್ಲೂಕಿನ ಗ್ರಾಮೀಣ ಭಾಗದ ಮೋಕಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಯಿತು.
ಮೋಕಾ ಗ್ರಾಮ ಪಂಚಾಯತಿ ಅಧ್ಯಕ್ಷೆ ಹೀರಾಳ್ ಫಕೀರಮ್ಮ ಹಾಗೂ ಗಣ್ಯರೆಲ್ಲರೂ ಸೇರಿ ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಸರ್ಕಾರದ ನಿರ್ದೇಶನದಂತೆ, ಜಿಲ್ಲಾ ಮಟ್ಟದ ಜನತಾ ದರ್ಶನ ಆಯೋಜಿಸಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವುದು ಇದರ ಉದ್ದೇಶವಾಗಿದೆ ಎಂದರು.
ರೈತರು ಸೇರಿದಂತೆ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬಹುದು ಹಾಗೂ ಅಧಿಕಾರಿಗಳಿಂದ ಸೂಕ್ತ ಪರಿಹಾರ ಪಡೆದುಕೊಳ್ಳಬಹುದು. ವಿವಿಧ ಎಲ್ಲ ಇಲಾಖೆಗಳ ಕೌಂಟರ್‍ಗಳನ್ನು ತೆರೆಯಲಾಗಿದ್ದು, ಜನರು ತಮ್ಮ ಅಹವಾಲು ಅರ್ಜಿಯನ್ನು ಸಲ್ಲಿಸಿ, ರಶೀದಿಯನ್ನು ತಪ್ಪದೇ ಪಡೆಯಬೇಕು. ಸ್ಥಳದಲ್ಲೇ ಬಗೆಹರಿಸಲು ಸಾಧ್ಯವಾಗದಿದ್ದರೆ ಜನರ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ವರ್ಗಾವಣೆ ಮಾಡಿ ಕಾನೂನಾತ್ಮಕವಾಗಿ ಪರಿಹರಿಸಿಕೊಡಲಾಗುವುದು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜನತಾ ದರ್ಶನ ಕಾರ್ಯಕ್ರಮ ಮೂಲಕ ಸರ್ಕಾರವು ಮನೆ ಬಾಗಿಲಿಗೆ ಹೋಗಿ ಜನರು ಅಹವಾಲುಗಳನ್ನು ಸ್ವೀಕರಿಸಿ ಪರಿಹಾರ ಒದಗಿಸುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಎರಡು ಜನತಾ ದರ್ಶನ ಕಾರ್ಯಕ್ರಮ ಆಗಿದೆ. ಇಲ್ಲಿಯವರೆಗೆ ಒಟ್ಟು 438 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 311 ಅರ್ಜಿಗಳಿಗೆ ಪರಿಹಾರ ಒದಗಿಸಲಾಗಿದೆ ಹಾಗೂ ಇನ್ನೂ 127 ಅರ್ಜಿಗಳು ಬಾಕಿ ಇವೆ ಎಂದು ತಿಳಿಸಿದರು.
ಒಟ್ಟು 111 ಅರ್ಜಿ ಸಲ್ಲಿಕೆ:
ಮೋಕಾ ಗ್ರಾಮದಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ, ಒಟ್ಟು 111 ಅರ್ಜಿ ಸಲ್ಲಿಕೆಯಾದವು.
ಕಂದಾಯ ಇಲಾಖೆ 27, ಭೂ ದಾಖಲೆ ನಿರ್ದೇಶಕರ ಕಚೇರಿ 02, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 46, ಗಣಿ ಮತ್ತು ಭೂ ವಿಜ್ಞಾನ 01, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ 02, ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ವಿಭಾಗ 01, ಬಳ್ಳಾರಿ ಮಹಾನಗರ ಪಾಲಿಕೆ 02, ನಗರ ನೀರು ಸರಬರಾಜು ಮತ್ತು ನೈರ್ಮಲ್ಯ 01, ಶಿಕ್ಷಣ ಇಲಾಖೆ 04, ಸಮಾಜ ಕಲ್ಯಾಣ 02, ಆರೋಗ್ಯ ಇಲಾಖೆ 03, ವಿಮ್ಸ್ 01, ಲೋಕೋಪಯೋಗಿ ಇಲಾಖೆ 02, ನೀರಾವರಿ ನಿಗಮ ಮತ್ತು ಸಣ್ಣ ನೀರಾವರಿ 02, ವಿಶೇಷಚೇತನರ ಕಲ್ಯಾಣ ಇಲಾಖೆ 04, ಕನ್ನಡ ಮತ್ತು ಸಂಸ್ಕøತಿ ಇಲಾಖೆ 02, ಕಾರ್ಮಿಕ ಇಲಾಖೆ 01, ಪೊಲೀಸ್ ಇಲಾಖೆ 01, ಜೆಸ್ಕಾಂ 06, ಮಾಲಿನ್ಯ ನಿಯಂತ್ರಣ ಮಂಡಳಿ 01 ಸೇರಿದಂತೆ ಒಟ್ಟು 111 ಅರ್ಜಿ ಸ್ವೀಕಾರಗೊಂಡವು.
ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅಹವಾಲು ಸಲ್ಲಿಸಲು ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಲು 15 ಮಳಿಗೆಗಳನ್ನು ಹಾಕಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್, ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿಕುಮಾರ್, ಅಬಕಾರಿ ಅಧೀಕ್ಷಕ ಮಂಜುನಾಥ, ತಹಶೀಲ್ದಾರ ಗುರುರಾಜ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಗ್ಯಾರಂಟಿ ಯೋಜನೆಗಳ ಕುರಿತು ಚಿಗುರು ಕಲಾ ತಂಡದಿಂದ ಗಾಯನ ಪ್ರಸ್ತುತ ಪಡಿಸಿದರು.
ರೈತರಿಗೆ ಪಟ್ಟಾ ವಿತರಣೆ:
ವ್ಯಕ್ತಿಗತ ಮತ್ತು ಗ್ರಾಮ ಸೇವೆಗಾಗಿ ನೀಡಿದ ಇನಾಂ ಭೂಮಿಗಳನ್ನು ರೈತವಾರಿ ಪಟ್ಟಾ ಭೂಮಿಗಳನ್ನಾಗಿ ಪರಿವರ್ತಿಸಿದ ದೃಢೀಕರಣ ಪತ್ರವನ್ನು ಬ್ಯಾಲಚಿಂತಿ ಗ್ರಾಮದ ಕೆ.ರಂಗಮ್ಮ, ಅಗಸರ ಮಲ್ಲಿಕಾರ್ಜುನ, ಕೆ.ಹನುಮಂತಪ್ಪ ಮತ್ತು ದಾಸರ ನಾಗೇನಹಳ್ಳಿ ಗ್ರಾಮದ ದೊಡ್ಡ ರುದ್ರಪ್ಪ, ಎಸ್.ಕೆಂಚಮ್ಮ, ಸಿ.ಯಾರ್ರೆಪ್ಪ, ಪಂಪನಗೌಡ ಸೇರಿದಂತೆ ಹತ್ತು ಫಲಾನುಭವಿಗಳಿಗೆ ವೇದಿಕೆ ಮೇಲೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಇತರ ಅಧಿಕಾರಿಗಳು ವಿತರಿಸಿದರು.
ಸಾರ್ವಜನಿಕರಿಂದ ಅಹವಾಲು ಸಲ್ಲಿಕೆ:
1. ನಮಗೆ ವಾಸಿಸಲು ಮನೆಯಿಲ್ಲ, ಕಳೆದ 15 ವರ್ಷಗಳಿಂದ ಶೆಡ್ ಒಂದರಲ್ಲಿ ವಾಸಿಸುತ್ತಿದ್ದೇವೆ. ವಸತಿ ಸೌಲಭ್ಯಕ್ಕಾಗಿ ಆಶ್ರಯ ಯೋಜನೆಯಡಿ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದ್ದೇನೆ, ಆದರೆ ಪ್ರಯೋಜನವಾಗಿಲ್ಲ. ಮಳೆ ಬಂದರೆ ನೀರು ಬರುತ್ತದೆ ಎಂದು ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಸಮಸ್ಯೆಯನ್ನು ಕೊಳಗಲ್ಲು ಗ್ರಾಮದ ವಿಕಲಚೇತನ ಎರ್ರಿಸ್ವಾಮಿ ಹೇಳಿಕೊಂಡರು. ಜಿಲ್ಲಾಧಿಕಾರಿಗಳು ಅತಿ ಶೀಘ್ರದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.
2. ಸುಮಾರು ಎಪ್ಪತ್ತು ವರ್ಷಗಳಿಂದ ಹೊಲ ಗದ್ದೆಗಳಿಗೆ ಹೋಗಲು ಬಳಕೆ ಮಾಡುತ್ತಿದ್ದ ಗುಡದೂರು ರಸ್ತೆಗೆ ಅಡ್ಡಲಾಗಿ ಬೇಲಿ ಹಾಕಿದ್ದು, ಇದರಿಂದ ಗ್ರಾಮದಲ್ಲಿನ ರೈತರು ಸಾರ್ವಜನಿಕರು ತಮ್ಮ ತಮ್ಮ ಹೊಲ ಗದ್ದೆಗಳಿಗೆ ಹೋಗಲು ರಸ್ತೆ ಇಲ್ಲದೆ ಪರದಾಡುವಂತಾಗಿದೆ. ಕೂಡಲೇ ಬೇಲಿಯನ್ನು ತೆರವುಗೊಳಿಸಬೇಕು ಎಂದು ಕರ್ಚೇಡು ಗ್ರಾಮದ ಗ್ರಾಮಸ್ಥರು ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.