ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ವಿಶೇಷ ಕಾರ್ಯಕ್ರಮಗಳ ಆಯೋಜನೆ

0
112

BP NEWS: ಬಳ್ಳಾರಿ: ಸೆಪ್ಟೆಂಬರ್.27:
ಜಿಲ್ಲೆಯಲ್ಲಿ 2023-24ನೇ ಶೈಕ್ಷಣಿಕ ವರ್ಷಕ್ಕೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಶಾಲಾ ಶಿಕ್ಷಣ ಇಲಾಖೆಯಿಂದ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡು, ಜಿಲ್ಲೆಯನ್ನು ಮುಂಚೂಣಿಯಲ್ಲಿರಿಸಲು ವಿಶೇಷ ಆಸಕ್ತಿ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಎಂದು ಶಿಕ್ಷಕರಿಗೆ ನಿರ್ದೇಶನ ನೀಡಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸಂತ ಜಾನರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ 2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗಾಗಿ ಅತಿಥಿ ಶಿಕ್ಷಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬಳ್ಳಾರಿ ಜಿಲ್ಲೆಯು ಗಡಿನಾಡು ಪ್ರದೇಶವಾಗಿದ್ದು, ಅಧಿಕ ಖನಿಜ ಸಂಪನ್ಮೂಲಗಳಿಂದ ಕೂಡಿದೆ. ಜಿಲ್ಲೆಯಲ್ಲಿ ಡಿಎಂಎಫ್, ಸಿಎಸ್‍ಆರ್ ಅನುದಾನ ಹಾಗೂ ವಿಭಾಗ ಮಟ್ಟದಲ್ಲಿ ಕೆ.ಕೆ.ಆರ್.ಡಿ.ಬಿ ಅನುದಾನ ಬರುತ್ತಿದ್ದು, ಜಿಲ್ಲೆಯ ಮಕ್ಕಳು ಉತ್ತಮ ಕಲಿಕೆಯೊಂದಿಗೆ ಜ್ಞಾನದ ಗಣಿಯಾಗಿ ಹೊರಹೊಮ್ಮಿಸಿ ಜಿಲ್ಲೆಯನ್ನು ವಿದ್ಯಾಕೇಂದ್ರವನ್ನಾಗಿ ಮಾಡಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.


ಪ್ರತಿಬಿಂಬ:
ಪ್ರತಿಬಿಂಬ ಎಂಬ ನೂತನ ಕಾರ್ಯಕ್ರಮ ಜಾರಿ ಮಾಡಿ, ಪ್ರತಿ ತಿಂಗಳಿಗೆ ಎರಡು ಬಾರಿ ಘಟಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಹಾಗೂ ಘಟಕ ಪರೀಕ್ಷೆ ಮುಗಿದ 03 ದಿನದೊಳಗಾಗಿ ಮಕ್ಕಳು ಪಡೆದ ಅಂಕಗಳನ್ನು ಆನ್‍ಲೈನ್ ದತ್ತಾಂಶದಲ್ಲಿ ದಾಖಲು ಮಾಡಬೇಕು. ನಂತರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 14,101 ಮಕ್ಕಳಿಗೆ ಪ್ರತಿಬಿಂಬ ಯೋಜನೆಯಡಿ ಆರು(06) ವಿಷಯಗಳನ್ನು ಒಳಗೊಂಡ ಅಭ್ಯಾಸ ಪುಸ್ತಕಗಳ ಕಿಟ್‍ಗಳನ್ನು ಸಿಎಸ್‍ಆರ್ ಯೋಜನೆಯಡಿ ಸಂಡೂರಿನ ಕುಮಾರಸ್ವಾಮಿ ಮಿನರಲ್ ಮೈನ್ಸ್ ಕಂಪನಿಯಿಂದ ಮುದ್ರಿಸಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಹನುಮಕ್ಕ ಅವರು ಮಾತನಾಡಿ, ಜಿಲ್ಲೆ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ತರಬೇತಿ ನುರಿತ ಸಂಪನ್ಮೂಲ ಶಿಕ್ಷಕರಿಂದ ಕಾರ್ಯಾಗಾರ ನೀಡಲಾಗುತ್ತಿದೆ. ಜೊತೆಗೆ ಪ್ರತಿ ತಿಂಗಳು ಮೊದಲನೇ ಮತ್ತು ಮೂರನೇ ಶನಿವಾರದಂದು ಆನ್‍ಲೈನ್ ಮೂಲಕ ತರಬೇತಿಯನ್ನು ನೀಡಲು ಸಹಾ ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದು ತಿಳಿಸಿದರು.


ಫಲಿತಾಂಶ ಸುಧಾರಣೆಗಾಗಿ ನಕಲು ಮುಕ್ತ ಮತ್ತು ಪಾರದರ್ಶಕ ಪರೀಕ್ಷೆ ನಡೆಸಲು ಸಿದ್ದತೆ ಮಾಡಿಕೊಂಡಿದ್ದು, ಶೈಕ್ಷಣಿಕವಾಗಿ ಜಿಲ್ಲೆಯನ್ನು ಮುನ್ನಲೆಗೆ ತರಲು ಎಲ್ಲಾ ಕಾರ್ಯಕ್ರಮಗಳನ್ನು ಅನುಪಾಲನೆ ಮಾಡಿ, ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಬಳ್ಳಾರಿ ಪೂರ್ವ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಯಿಮುರ್ ರೆಹಮಾನ್, ಜಿಲ್ಲಾ ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿ ಎ.ಕೆ.ಸತ್ಯನಾರಾಯಣ, ವಿಷಯ ಪರಿವೀಕ್ಷಕ(ಸಮಾಜ ವಿಜ್ಞಾನ) ಎಚ್.ವೀರೇಶಪ್ಪ, ವಿಷಯ ಪರಿವೀಕ್ಷಕ (ಗಣಿತ) ಎಂ.ಬಸವರಾಜ, ಉರ್ದು ಶಿಕ್ಷಣ ಸಂಯೋಜಕ ಮೋಯಿನುದ್ದೇನ್, ಸಂತ ಜಾನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಾಂತ ಶೀಲನ್ ಹಾಗೂ 306 ಜನ ಅತಿಥಿ ಶಿಕ್ಷಕರು ಮತ್ತು ಪ್ರತಿ ವಿಷಯದ ಸಂಪನ್ಮೂಲ ಶಿಕ್ಷಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here