ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ.

0
135

BP NEWS: ಬಳ್ಳಾರಿ: ಆಗಸ್ಟ್.29:
ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಐದು ತಾಲೂಕಿನಲ್ಲಿ ಕ್ಷೇತ್ರ ಭೇಟಿ ನಡೆಸಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತರು, ಬಳ್ಳಾರಿ ಜಿಪಂ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ತ್ರಿಲೋಕ ಚಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ ನಜೀರ್‍ಸಾಬ್ ಸಭಾಂಗಣದಲ್ಲಿ ಮಂಗಳವಾರದಂದು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಸ್ತಕ ಸಾಲಿಗೆ ಮುಂಗಾರು ಹಂಗಾಮಿನ ಬಿತ್ತನೆಗೆ 173897 ಹೆಕ್ಟೇರ್ ಕ್ಷೇತ್ರದ ಗುರಿ ಹೊಂದಿದ್ದು, ಅದರಲ್ಲಿ 108898 ಹೆಕ್ಟೇರ್ (ಶೇ.62.62) ಗುರಿ ಸಾಧನೆಯಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 599 ಮೀ.ಮೀ ಇದ್ದು, ಇಲ್ಲಿಯವರೆಗೆ ವಾಸ್ತವವಾಗಿ ಬಿದ್ದ ಮಳೆ 177 ಮೀ.ಮೀ ಆಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಅವರು ಸಭೆಗೆ ತಿಳಿಸಿದರು.
ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಪ್ರತಿ ತಾಲೂಕಿನ ಗ್ರಾಮವಾರು ಸಂಚರಿಸಬೇಕು. ಅಲ್ಲಿನ ರೈತರನ್ನು ಭೇಟಿ ಮಾಡಿ, ಬೆಳೆಗಳಿಗೆ ಸಂಬಂಧಿಸಿದಂತೆ ಸಲಹೆ ಸೂಚನೆ ನೀಡಬೇಕು. ಮಳೆಯ ಕೊರತೆಯಿಂದಾಗಿ ಬೆಳೆ ಒಣಗುತ್ತಿರುವುದರ ಬಗ್ಗೆ ಸಮೀಕ್ಷೆ ಮಾಡಬೇಕು. ಅದರ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಹಾಗೂ ಮುಂದಾಗುವ ಹಾನಿಗೆ ಈಗಲೇ ಬೆಳೆ ವಿಮೆ ಮಾಡಿಸುವಂತೆ ರೈತರನ್ನು ಪ್ರೇರೇಪಿಸಬೇಕು. ಜಿಲ್ಲೆಯ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆಯಾಗದಂತೆ ಕ್ರಮ ವಹಿಸಬೇಕು ಎಂದು ಪ್ರತಿಕ್ರಿಯಿಸಿದರು.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರಿಗೆ ಸರಬರಾಜು ಮಾಡಲಾಗುತ್ತಿರುವ ಕುಡಿಯುವ ನೀರಿನ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮಾಹಿತಿ ಪಡೆದುಕೊಂಡರಲ್ಲದೇ, ಶುದ್ಧತೆ ಕುರಿತು ಕಡ್ಡಾಯವಾಗಿ ನೀರಿನ ಪರೀಕ್ಷೆಗೆ ಒಳಪಡಿಸಿ ಕುಡಿಯಲು ಯೋಗ್ಯವಿದ್ದಲ್ಲಿ ಮಾತ್ರ ನೀರನ್ನು ಬಳಸಲು ನಿರ್ದೇಶನ ನೀಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಂಡೂರು ತಾಲೂಕಿನಲ್ಲಿ ಮಾತ್ರ ಕುಡಿಯುವ ನೀರಿನ ಅಭಾವ ಉಂಟಾಗುತ್ತದೆ. ಅದಕ್ಕಾಗಿ ಬೋರ್‍ವೆಲ್‍ಗಳ ಮೂಲಕ ಸರಬರಾಜು ಮಾಡಲಾಗುತ್ತದೆ. ಉಳಿದ ತಾಲೂಕುಗಳಲ್ಲಿ ಕಾಲುವೆಗಳಲ್ಲಿ ಈಗಾಗಲೇ ನೀರು ಹರಿಸಲಾಗಿದ್ದು, ಕೆರೆಗಳನ್ನು ಸ್ವಚ್ಛಗೊಳಿಸಿ ಕುಡಿಯುವ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ 1266 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ ಬಳ್ಳಾರಿ ನಗರದಲ್ಲಿ 152 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೆಎಂಆರ್‍ಇಸಿ ಅಡಿಯಲ್ಲಿ ನಗರದಲ್ಲಿ 50 ಕಟ್ಟಡಗಳಿಗೆ ಜಾಗ ಗುರುತಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್‍ಕುಮಾರ್ ಅವರು ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ತ್ರಿಲೋಕ ಚಂದ್ರ ಅವರು ಪ್ರತಿಕ್ರಿಯಿಸಿ, ನಗರದಲ್ಲಿನ ತೆಲುಗು ಮತ್ತು ಉರ್ದು ಶಾಲೆಗಳು ಒಳಗೊಂಡಂತೆ ಕಡಿಮೆ ವಿಧ್ಯಾರ್ಥಿಗಳ ಸಾಮಥ್ರ್ಯ ಹೊಂದಿರುವ 130 ಕಟ್ಟಡಗಳಲ್ಲಿ ಒಂದು ಕೊಠಡಿ ಕಾಯ್ದಿರಿಸಿ ಅದರಲ್ಲಿ ಕಾರ್ಯನಿರ್ವಹಿಸಲು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಎಂದು ಹೇಳಿದರು.
ಜಿಲ್ಲೆಯು ಎಸ್‍ಎಸ್‍ಎಲ್‍ಸಿ ವಾರ್ಷಿಕ ಫಲಿತಾಂಶದಲ್ಲಿ ಹಿಂದುಳಿದಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕಿದೆ. ಇದಕ್ಕೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಭವಿತ ಶಿಕ್ಷಕರನ್ನು ಗುರುತಿಸಿ, ಅವರ ಜೊತೆ ಸಭೆ ನಡೆಸಿ, ಫಲಿತಾಂಶದಲ್ಲಿ ಜಿಲ್ಲೆಯನ್ನು ಮುನ್ನೆಲೆಗೆ ತರಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಯ ಹಾಸ್ಟೆಲ್‍ಗಳಿಗೆ ಆಯಾ ಅಧಿಕಾರಿಗಳು ವಾರದಲ್ಲಿ ಭೇಟಿ ನೀಡಿ ಅಲ್ಲಿನ ಗುಣಮಟ್ಟ ಆಹಾರ, ಕಟ್ಟಡ, ಶೌಚಾಲಯ ಹಾಗೂ ಇತರೆ ಸಮಸ್ಯೆಗಳನ್ನು ವರದಿ ಮಾಡಿ, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರಿಗೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಖನಿಜ ಪ್ರತಿಷ್ಟಾನ(ಡಿಎಂಎಫ್)ದಿಂದ ಜಿಲ್ಲೆಯಲ್ಲಿ ಅನುಮೋದನೆಗೊಂಡ 6 ಕ್ರಿಯಾಯೋಜನೆಯಲ್ಲಿ ಇಲ್ಲಿಯವರೆಗೆ ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ನರೇಗಾ ಯೋಜನೆ, ಎನ್‍ಆರ್‍ಎಲ್‍ಎಂ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ವರದಿಯ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here