ಬಳ್ಳಾರಿ ಅಗಸ್ಟ್ ,27: ಬಿಸಿಲೂರ ಪೋಸ್ಟ್, ಬಿಪಿ ನ್ಯೂಸ್,
ಅವಧಿ ಮುಗಿದರೂ ಕಾನೂನಾತ್ಮಕವಾಗಿ ದಾಖಲೆಗಳನ್ನು ಸರಿಪಡಿಸಿಕೊಳ್ಳದೇ ಶಾಲೆಯನ್ನು ಮುಂದುವರಿಸಲು ಹೊರಟಿದ್ದ ಶ್ರೀ ವಾಸವಿ ಎಜುಕೇಶನ್ ಟ್ರಸ್ಟ್ ಇವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಖಡಕ್ ಎಚ್ಚರಿಕೆ ಅಗಸ್ಟ್ 18 ರಂದು ನೋಟೀಸ್ ನೀಡುವ ಮೂಲಕ ಚಾಟಿ ಏಟು ನೀಡಿದ್ದಾರೆ.
ಎಲ್ಲಿದೆ ಸಮಸ್ಯೆ..?
ನಗರದ ಇನ್‍ಫ್ಯಾಂಟ್ರಿ ರಸ್ತೆಯಲ್ಲಿಯಲ್ಲಿರು ವ ಈ ಶಾಲೆಯು, 1986ರಲ್ಲಿ 2.08 ಎಕರೆ ಸ್ಥಳದಲ್ಲಿರುವ ಕಟ್ಟಡ ಸಹಿತವಾಗಿ ಶ್ರೀ ವಾಸವಿ ಎಜುಕೆಶನ್ ಟ್ರಸ್ಟ್ ಗೆ ಶಿಕ್ಷಣ ನಡೆಸಲೆಂದು ಆರ್ಯವೈಶ್ಯ ಅಸೋಸಿಯೇಷನ್ ಇವರು 30 ವರ್ಷಗಳ ಕಾಲ ಲೀಸ್(ಗುತ್ತಿಗೆ) ನೀಡಿ ಒಪ್ಪಂದ ಮಾಡಿಕೊಂಡಿದ್ದರು. ಮಕ್ಕಳ ಶೈಕ್ಷಣಿಕ ಹಾಗೂ ಬೌದ್ಧಿಕ ವಿಕಸನಕ್ಕೆ ಪೂರಕವಾಗಿ ಆರ್ಯವೈಶ್ಯ ಸಮಾಜದ ಗಣ್ಯಮಾನ್ಯರು ಈ ಒಪ್ಪಂದಕ್ಕೆ ಸಹಿ ಮಾಡಿದ್ದರು. ಒಪ್ಪಂದದ ಅವಧಿ 2016ಕ್ಕೆ ಕ್ಕೆ ಪೂರ್ಣಗೊಂಡಿದ್ದು, ಇದನ್ನು ಶ್ರೀ ವಾಸವಿ ಎಜುಕೇಶನ್ ಟ್ರಸ್ಟ್ ಇವರು ದಾಖಲೆಗಳನ್ನು ಕಾನೂನಾತ್ಮಕವಾಗಿ ಮುಂದುವರಿಸದೇ, ಸಮಾಧಾನಕ್ಕಾಗಿ ಆರ್ಯವೈಶ್ಯ ಅಸೋಷಿಯೇಷನ್ ಗೆ ಇದೇ ಜಾಗವನ್ನ ಮತ್ತೆ 30 ವರ್ಷಕ್ಕೆ ನವೀಕರಣ ಮಾಡುವಂತೆ ಶಾಲೆಯ ಆಡಳಿತ ಮಂಡಳಿಯವರು ಪತ್ರ ಬರೆದು, ಅದರ ಒಂದು ಪ್ರತಿಯನ್ನೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಗಮನಕ್ಕೆ ತಂದು ಶಾಲೆಯನ್ನು ಮುಂದುವರಿಸುತ್ತಿದ್ದರು. ಹೀಗೆ 7 ವರ್ಷಗಳು ಹಿಂದಿನ ಡಿಡಿಪಿಐ ಸಹಕಾರದೊಂದಿಗೆ ಮುಂದೂಡಿದ್ದಾರೆ. ಶೈಕ್ಷಣಿಕವಾಗಿ ಉಪಯೋಗವಾಗುವ ಈ ಸ್ಥಳವನ್ನು ವಾಸವಿ ಎಜುಕೇಶನ್ ಟ್ರಸ್ಟ್ ಇವರು ಅಗತ್ಯ ದಾಖಲೆ ಸಮೇತ ಶಾಲೆಯನ್ನು ಮುಂದುವರಿಸಬೇಕಿತ್ತು. ಆ ಮೂಲಕ ಆರ್ಯವೈಶ್ಯ ಅಸೋಷಿಯೇಷನ್ ನೊಂದಿಗೆ ವಿಶ್ವಾಸಾರ್ಹ ಹೆಜ್ಜೆಯನ್ನು ಶ್ರೀ ಎಜುಕೇಶನ್ ಟ್ರಸ್ಟ್ ಇಡಬೇಕಿತ್ತು. ಶಿಕ್ಷಣವೆನ್ನುವುದು ಒಂದು ಪವಿತ್ರ ಕಾರ್ಯವೆಂದು ಆರ್ಯವೈಶ್ಯ ಅಸೋಷಿಯೇಷನ್ ಸಹಕಾರ ನೀಡುತ್ತಲೇ ಬಂದಿತ್ತು.
ಡಯಾಲಿಸಿಸ್ ಮತ್ತು ಫಿಜಿಯೋ ಥೆರಪಿ ಕೇಂದ್ರ ಮತ್ತು ವಿವಾದ :
ಆರ್ಯವೈಶ್ಯ ಅಸೋಷಿಯೇಷನ್ ಇವರು ಶ್ರೀ ವಾಸವಿ ಎಜುಕೇಶನ್ ಟ್ರಸ್ಟ್ ನವರ ಶೈಕ್ಷಣಿಕ ಕಾರ್ಯಗಳಿಗೆ ತೊಂದರೆ ಯಾಗದಂತೆ ಮತ್ತು ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಸದರಿ ಸ್ಥಳದಲ್ಲಿ ಡಯಾಲಿಸಿಸ್ ಮತ್ತು ಫಿಜಿಯೋ ಥೆರಫಿ ಕೇಂದ್ರ ಆರಂಭಿಸಲು ಅಣಿಯಾಗಿದ್ದರು. ಒಟ್ಟು 96 ಸಾವಿರ ಚದುರ ಅಡಿ ಇರುವ ಜಾಗೆಯಲ್ಲಿ ಆರ್ಯವೈಶ್ಯ ಅಸೋಷಿಯೇಷನ್‍ನಿಂದ ಕೇವಲ 10 ಸಾವಿರ ಚದುರ ಅಡಿ ಜಾಗದಲ್ಲಿ 5 ಕೋಟಿ ವೆಚ್ಚದ ಡಯಾಲಿಸಿಸ್ ಮತ್ತು ಫಿಜಿಯೋ ಥೆರಪಿ ನಿರ್ಮಾಣಕ್ಕೆ ಮುಂದಾಗಿದ್ದರು. ಇದಕ್ಕಾಗಿ ಕಟ್ಟಡ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ ಕೈಗೊಂಡಿದ್ದರು. ಇದು ಬಳ್ಳಾರಿ ಮತ್ತು ನೆರೆಯ ಜಿಲ್ಲೆಗಳ ಬಡ ಜನರಿಗೆ ತುಂಬಾ ಅನುಕೂಲವಾಗುವ ದಿಸೆಯಲ್ಲಿ ಒಂದು ಸಾಮಾಜಿಕ ಕಾರ್ಯವೆಂದು ಭಾವಿಸಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಈ ಉದ್ದೇಶ ಈಡೇರಿಕೆಗೆ ಮುಂದಾದಾಗ ವಾಸವಿ ಎಜುಕೇಶನ್ ಟ್ರಸ್ಟ್ ಇವರು ಅಸಮಾಧಾನಗೊಂಡು, ಇದರ ಉದ್ದೇಶ ತಪ್ಪು ಎಂದು ಭಾವಿಸಿ ರಾಜ್ಯ ಹೈಕೋರ್ಟ್ ಗೆ ಮೊರೆಹೋಗಿದ್ದರು. ಅಲ್ಲದೆ ಆರ್ಯವೈಶ್ಯ ಅಸೋಷಿಯೇಷನ್ ವಿರುದ್ಧ ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದರು. ಇದು ಎರಡೂ ಸಂಘಟನೆಗಳಲ್ಲಿ ವ್ಯಾಜ್ಯ ಉಂಟಾಗಲು ಕಾರಣವಾಗಿದೆ.
ಹೈಕೊರ್ಟ್‍ಗೆ ಹೋಗಿದ್ದನ್ನು ತೀವ್ರವಾಗಿ ಖಂಡಿಸುತ್ತೇವೆ.
ಆರ್ಯವೈಶ್ಯ ಅಸೋಷಿಯೇಷನ್ ಕ್ರಮದ ವಿರುದ್ಧ ವಾಸವಿ ಎಜುಕೇಶನ್ ಟ್ರಸ್ಟ್ ಇವರು ರಾಜ್ಯ ಹೈಕೋರ್ಟ್ ಗೆ ಹೋಗಿರುವ ಕ್ರಮ ಸರಿಯಾದುದಲ್ಲ ಎನ್ನುವುದು ಆರ್ಯವೈಶ್ಯ ಅಸೋಷಿಯೇಷನ್ ನ ಅಭಿಪ್ರಾಯವಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಡಯಾಲಿಸಿಸ್ ಮತ್ತು ಫಿಜಿಯೋ ಥೆರಪಿ ಆರಂಭಿಸಲು ಹೊರಟಿದ್ದು ಸಮಾಜದ ಮುಂದಿನ ಪೀಳಿಗೆಯ ಅಭ್ಯುದಯಕ್ಕಾಗಿ. ಹೀಗಾಗಿ ವಾಸವಿ ಎಜುಕೇಶನ್ ಟ್ರಸ್ಟ್ ಇವರ ಕ್ರಮಕ್ಕೆ ಅಸಮಾಧಾನಗೊಂಡು ಪ್ರಧಾನಕಾರ್ಯದರ್ಶಿಗಳಾದ ಸೊಂತ ಗಿರಿಧರ್ ಅನಿವಾರ್ಯವಾಗಿ ಸಾರ್ವಜನಿಕವಾದ ಒಂದು ಪ್ರಕಟಣೆ ಹೊರಡಿಸುತ್ತಾರೆ. ವಾಸವಿ ಎಜುಕೇಶನ್ ಟ್ರಸ್ಟ್ ಇವರಿಗೆ ನೀಡಿದ್ದ ಕರಾರು ಒಪ್ಪಂದ ಈಗಾಗಲೇ ಪೂರ್ಣಗೊಂಡಿದೆ. ನಮ್ಮ ನಿಬಂಧನೆಗಳನ್ನು ಒಪ್ಪುವುದಾದರೆ ಶಾಲೆ ಮುಂದುವರಿಸಲು ಸಹಕರಿಸುತ್ತೇವೆ. ಇಲ್ಲದಿದ್ದಲ್ಲಿನಾವೇ ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಪ್ರಕಠಣೆಯಲ್ಲಿ ತಿಳಿಸಿದ್ದರು.
ಡಿಡಿಪಿಐ ಅಂಗಳಕ್ಕೆ :
ಕಾನೂನಾತ್ಮಕವಾಗಿ ಜಾಗದ ರಿನಿವಲ್(ನವೀಕರಣ) ಮಾಡಿಕೊಂಡಿರುವುದಿಲ್ಲ. ಪತ್ರಿಕೆಗಳಲ್ಲಿ 7 ವರ್ಷ ಯಾವ ಆಧಾರದ ಮೇಲೆ ಇಲಾಖೆಯವರು ಶಾಲೆ ನವೀಕರಣ ಮಾಡಿದರು.? ಭ್ರಷ್ಟ ಚಾರ ನಡೆದಿದೆಯಾ..? ಎಂದು ಪತ್ರಿಕೆಗಳಲ್ಲಿ ಬಂದಿದ್ದಕ್ಕೆ ಎಚ್ಷೆತ್ತು ಕೊಂಡ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ವಾಸವಿ ಎಜುಕೇಶನ್ ಟ್ರಸ್ಟ್ ಇವರಿಗೆ ಖಡಕ್ ವಾರ್ನಿಂಗ್ ನೀಡುತ್ತಾರೆ. ಇದೀಗ ಎಲ್ಲೆಡೆ ತೀವ್ರ ಚರ್ಚೆಗೆ ಈಡಾಗಿದೆ.
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಸರಿಯಲ್ಲ:
ಒಂದು ಶಿಕ್ಷಣ ಸಂಸ್ಥೆ ನಡೆಸಬೇಕಾದ ಯಾವುದೇ ಸಂಸ್ಥೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬಾರದು. ಇದರಿಂದ ಶಾಲೆಗೂ, ಸಂಸ್ಥೆಗೂ ಒಳಿತಾಗಲು ಸಾಧ್ಯವಿಲ್ಲ. ಮಕ್ಕಳು ಮತ್ತು ಪೋಷಕರಿಗೂ ಇದರ ಸ್ಪಷ್ಟತೆ ಸಿಗದೇ ಶಾಲೆಯಲ್ಲಿ ಮಕ್ಕಳ ದಾಖಲಾತಿಯ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯವಿರುತ್ತದೆ. ಇದನ್ನು ಮನಗಂಡಿರುವ ಸಾರ್ವನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಖಡಕ್ಕಾಗಿಯೇ ಎಚ್ಚರಿಕೆ ನೋಟೀಸ್ ನೀಡಿರುವುದು ವಾಸವಿ ಎಜುಕೇಶನ್ ಟ್ರಸ್ಟ್ ಗೆ ಹಿನ್ನಡೆಯಾದಂತಾಗಿದೆ.
ಗಂಡ ಹೆಂಡತಿ ನಡುವೆ ಕೂಸು ಬಡವಾಯಿತು ಎನ್ನುವ ಹಾಗೆ ಇದೀಗ ವಾಸವಿ ಎಜುಕೇಶನ್ ಟ್ರಸ್ಟ್ ಮತ್ತು ಅರ್ಯವೈಶ್ಯ ಅಸೊಷಿಯೇಷನ್ ನಡುವೆ ಮಕ್ಕಳ ಭವಿಷ್ಯಕ್ಕೆ ಯಾವಾಗ ಕುತ್ತು ಬರುತ್ತದೋ ಹೇಳಲಾಗದು. ಎರಡೂ ಸಂಘಟನೆಗಳು ಕಾನೂನು ಸಮರ ಆರಂಭಿಸಿವೆ.
ಏನದು ಖಡಕ್ ಎಚ್ಚರಿಕೆ?
ಏನಿದೆ ನೋಟೀಸ್ ನಲ್ಲಿ..?
- 30 ವರ್ಷಗಳವರೆಗೆ ಶಾಲಾ ನಿವೇಶನ, ಕಟ್ಟಡವನ್ನು, ಸಂಬಂಧಪಟ್ಟ ಭೂ, ಕಟ್ಟಡದ ಮಾಲಿಕರಿಂದ ಭೋಗ್ಯಕ್ಕೆ ಪಡೆದ ಬಗ್ಗೆ ಮುದ್ರಾಂಕ ಇಲಾಖೆಯ ಉಪ ನೋಂದಣಿ ಅಧಿಕಾರಿಗಳಿಂದ ನೊಂದಣಿ ಮಾಡಿಸಿಕೊಂಡಿರುವ ನೊಂದಾಯಿತವಾದ ದಾಖಲೆಯ ಪ್ರತಿಯನ್ನು ಈವರೆಗೂ ಕಛೇರಿಗೆ ಸಲ್ಲಿಸಿರುವುದಿಲ್ಲ.
- ದೃಡೀಕರಣ ಲೀಜ್ ಪ್ರತಿ ಸೇರಿದಂತೆ ಇತರೆ ಎಲ್ಲದಾಖಲೆಗಳನ್ನು ಈ ಪತ್ರ ತಲುಪಿದ ಒಂದು ವಾರದೊಳಗಾಗಿ ಕಛೇರಿಗೆ ಎಲ್ಲ ದಾಖಲೆಗಳನ್ನು ಸಲ್ಲಿಸಬೇಕು. ಇದನ್ನು ಎಸ್.ಎ.ಟಿ.ಎಸ್. ತಂತ್ರಾಂಶದಲ್ಲಿಯೂ ಅಪ್ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ.
- ಒಂದು ವೇಳೆ ಈ ದಾಖಲೆಯನ್ನು ಸಲ್ಲಿಸದೇ ಇದ್ದಲ್ಲಿ 2023-24ನೇ ಸಾಲಿನ ಶಾಲಾ ಮಾನ್ಯತೆಯನ್ನು ಅನ್‍ಲೈನ್‍ನಲ್ಲಿ ಸಲ್ಲಿಸುವ ಪ್ರಸ್ತಾವನೆಯನ್ನು ತಿರಸ್ಕರಿಸಲಾಗುತ್ತದೆ. ಈವರೆಗೂ ಈ ಕಛೇರಿಯಿಂದ ಸಲ್ಲಿಸಲ್ಪಟ್ಟ ಎಲ್ಲಾ ಪತ್ರವ್ಯವಹಾರಗಳ ಕುರಿತು ಸಂಪೂರ್ಣ ವಿವರಣೆಯೊಂದಿಗೆ, ಶಾಲೆಯ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ 1983ರಡಿಯಲ್ಲಿ ರಚಿತವಾಗಿರುವ ನಿಯಮಗಳ ಅನುಸಾರ ಶಾಲೆಯ ಮಾನ್ಯತೆ ಹಿಂಪಡೆಯಲು ಮತ್ತು ಅದೇ ಕಾಯ್ದೆಯ ಸೆಕ್ಷನ್ 34ರ ಪ್ರಕಾರ ಶಾಲಾ ನೋಂದಣಿಯನ್ನು ರದ್ದುಪಡಿಸಲು ಸಕ್ಷಮ ಪ್ರಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುತ್ತದೆ.
- ಶೈಕ್ಷಣಿಕ ಹಿತ ದೃಷ್ಟಿಯಿಂದ ವಿದ್ಯಾರ್ಥಿಗಳ ಭವಿಷ್ಯತ್ತಿಗೆ ತೊಂದರೆಯಾದಲ್ಲಿ ಅದಕ್ಕೆ ತಾವೇ ಹೊಣೆಗಾರರಾಗಿರುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ, ಆರ್ಯವೈಶ್ಯ ಅಸೋಷಿಯೇಷನ್ ಆರೋಗ್ಯದ ಹಿತದೃಷ್ಟಿಯಿಂದ ಡಯಾಲಿಸಿಸ್ ಮತ್ತು ಫಿಜಿಯೋ ಥೆರಪಿ ಕೇಂದ್ರ ಆರಂಭಿಸಲು ಅಡ್ಡಗಾಲು ಹಾಕುತ್ತಿರುವ ಶ್ರೀ ವಾಸವಿ ಎಜುಕೇಶನ್ ಟ್ರಸ್ಟ್ ಇವರು ಅತ್ತ ಶೈಕ್ಷಣಿಕ ಕ್ರಮಗಳನ್ನು ಕ್ರಮಬದ್ಧವಾಗಿ ಮುಂದುವರಿಸದೇ, ಇತ್ತ ಆರ್ಯವೈಶ್ಯ ಅಸೋಷಿಯೇಷನ್ ನ ಆರೋಗ್ಯ ಕೇಂದ್ರ ಆರಂಭಿಸಲು ಸಹಕಾರ ನೀಡದೇ ಕಾನೂನು ಸಮರ ಕೈಗೊಂಡಿದ್ದು ಚರ್ಚೆಗೆ ಗ್ರಾಸ ಒದಗಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದ ನೋಟೀಸ್‍ನಿಂದ ವಾಸವಿ ಎಜುಕೇಶನ್ ಟ್ರಸ್ಟ್ ಗೆ ಹಿನ್ನಡೆಯಾದಂತಾಗಿದೆ. ಕಾನೂನು ಮುಂದೆ ಏನು ಹೇಳುತ್ತದೆಯೋ ಕಾದು ನೋಡಬೇಕಿದೆ.
——-