ಬಳ್ಳಾರಿ ತಾಲೂಕು ಪಂಚಾಯಿತಿಯಲ್ಲಿ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನದಡಿ ಮಣ್ಣು ಸಂಗ್ರಹಣೆ

0
80

BP NEWS: ಬಳ್ಳಾರಿ: ಆಗಸ್ಟ್.19:
ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಬಳ್ಳಾರಿ ತಾಲೂಕು ಪಂಚಾಯಿತಿಯಲ್ಲಿ ಶನಿವಾರ “ನನ್ನ ಮಣ್ಣು ನನ್ನ ದೇಶ” ಅಭಿಯಾನದಡಿ ಮಣ್ಣು ಸಂಗ್ರಹಣೆ ಕಾರ್ಯಕ್ರಮ ನಡೆಯಿತು.


ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿ ಗಿರಿಜಾ ಶಂಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ಆಮೃತ ಮಹೋತ್ಸವ ಹಿನ್ನಲೆಯಲ್ಲಿ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ವೀರ ಪುರುಷ ಹಾಗೂ ಮಹಿಳೆಯರನ್ನು ಗೌರವಿಸುವ ಉದ್ದೇಶದಿಂದ ಪ್ರಧಾನಿಯವರ ಆಶಯದಂತೆ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ನಡೆಯುತ್ತಿದೆ. ಇದಕ್ಕೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ಮಣ್ಣು ಸಂಗ್ರಹಿಸಲಾಗಿದೆ ಎಂದರು.


ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಮಡಗಿನ ಬಸಪ್ಪ ಅವರು ಮಾತನಾಡಿ, ಮಣ್ಣು ಅಮೃತಕ್ಕೆ ಸಮಾನ. ನನ್ನ ಮಣ್ಣು ನನ್ನ ದೇಶ (ಮೇರಿ ಮಟ್ಟಿ ಮೇರಿ ದೇಶ) ಅಭಿಯಾನಕ್ಕೆ 25 ಗ್ರಾಮ ಪಂಚಾಯತಿಗಳಿಂದ ಸಂಗ್ರಹಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಂದ ಮಣ್ಣನ್ನು ತಾಲೂಕು ಪಂಚಾಯತಿಯಲ್ಲಿನ ಕಳಸದಲ್ಲಿ ಶೇಖರಿಸಲಾಗಿದೆ.
ತಾಲೂಕು ಮಟ್ಟದಲ್ಲಿ ವಿವಿಧ ಗ್ರಾಮ ಪಂಚಾಯತಿಗಳಿಂದ ತಂದ ಮಣ್ಣನ್ನು ಸ್ವೀಕರಿಸಿ ಒಟ್ಟುಗೂಡಿಸಿ ಸರ್ವಾಲಂಕೃತ ಕಳಸದ ವ್ಯವಸ್ಥೆಯನ್ನು ಮಾಡಿ ಆ ಕಳಸವನ್ನು ನೆಹರು ಯುವ ಕೇಂದ್ರಕ್ಕೆ ಹಸ್ತಾಂತರಿಸಲಾಗುವುದು. ನೆಹರು ಯುವ ಕೇಂದ್ರದವರು ಒಟ್ಟೂಗೂಡಿಸಿದ ಮಣ್ಣಿನ ಕಳಶವನ್ನು ರಾಷ್ಟ್ರ ರಾಜಧಾನಿಗೆ ಕಳುಹಿಸುವರು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಜಿಪಂ ಸಹಾಯಕ ನಿರ್ದೇಶಕ ಹಿರೇಮಠ, ಜಿಲ್ಲಾ ಐಇಸಿ ಸಂಯೋಜಕ ನಟರಾಜ್, ಪಿಆರ್‍ಇಡಿ ಕೊಟ್ರಬಸಪ್ಪ ಗ್ರಾಮೀಣ ಉದೋಗ್ಯ ಸಹಾಯಕ ನಿರ್ದೇಶಕ ಆರ್.ಕೆ.ಬಸವರಾಜ್, ಪಂಚಾಯತ್‍ರಾಜ್ ಇಲಾಖೆ ಅಧಿಕಾರಿ ಮಹಮ್ಮದ್ ಗೌಸ್ ರಿಸಲ್ದಾರ್ ಸೇರಿದಂತೆ 25 ಗ್ರಾಮ ಪಂಚಾಯತಿಗಳ ಪಿಡಿಓರವರು, ತಾಲೂಕು ನರೇಗಾ ಸಿಬ್ಬಂದಿಗಳು, ತಾಲೂಕು ಪಂಚಾಯತಿಯ ಸಿಬ್ಬಂದಿಗಳು, ತಾಂತ್ರಿಕ ಸಹಾಯಕರು, ಬಿಎಫ್‍ಟಿಗಳು ಮತ್ತು ಗ್ರಾಮ ಕಾಯಕ ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here