ಬಳ್ಳಾರಿಯಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ; ಶೂನ್ಯ ಮೊತ್ತದ ಬಿಲ್ ವಿತರಿಸಿದ ಸಚಿವ ನಾಗೇಂದ್ರ.

0
72

BP NEWS: ಬಳ್ಳಾರಿ: ಆಗಸ್ಟ್.05:
ಸರ್ಕಾರವು ಅನುಷ್ಠಾನಗೊಳಿಸುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಮನೆಯ ಕುಟುಂಬಗಳು ಬೆಳಗುವಂತಾಗಬೇಕು ಎಂದು ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದರು
ನಗರದ ನಲ್ಲಚೇರುವು ಪ್ರದೇಶದ ವಾಲ್ಮೀಕಿ ಭವನದಲ್ಲಿ ಏರ್ಪಡಿಸಲಾದ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹ ಜ್ಯೋತಿ ಯೋಜನೆಯ (ಉಚಿತ ಬೆಳಕು, ಸುಸ್ಥಿರ ಬದುಕು ಎಂಬ ಆಶಯದಂತೆ) ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ಜನರಲ್ಲಿ ಆರ್ಥಿಕ ಸ್ಥಿರತೆ ಸಾಧಿಸಲು ಈ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ “ಗೃಹ ಜ್ಯೋತಿ” ಯೋಜನೆಯು ಇಂದು ಚಾಲನೆಗೊಳ್ಳುತ್ತಿದೆ. ಇದರಿಂದ ಪ್ರತಿ ಮನೆಯ ಕುಟುಂಬಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಉಜ್ವಲ ದೀಪದಂತೆ ಬೆಳಗಬೇಕು ಎಂದು ಹೇಳಿದರು.
ಸರ್ಕಾರದ ಪಂಚ ಯೋಜನೆಗಳನ್ನು ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವುದೇ ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಬಡವರಿಗೆ ಉಪಯೋಗವಾಗುವಂತಹ ಯೋಜಗಳನ್ನೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲೆಯ ಜನರ ಅಭಿಪ್ರಾಯಗಳನ್ನು ತೆಗೆದುಕೊಂಡು ಎಲ್ಲ ಶಾಸಕರು ಒಡಗೂಡಿ, ಜಿಲ್ಲೆಯ ಅಭಿವೃದ್ಧಿಗೆ ಪಂಚ ಪಾಂಡವರಂತೆ ಶ್ರಮಿಸುವೆವು ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಗೃಹ ಜ್ಯೋತಿ ಯೋಜನೆಯಡಿ ಜೆಸ್ಕಾಂ ವ್ಯಾಪ್ತಿಯ ಬಳ್ಳಾರಿ ಜಿಲ್ಲೆಯಲ್ಲಿ ನೋಂದಣಿ ಮಾಡಿಕೊಂಡದವರೆಲ್ಲರಿಗೂ ಯೋಜನೆಯ ಲಾಭ ಸಿಗಲಿದೆ. ಆಗಸ್ಟ್ ಮಾಹೆಯಲ್ಲಿ ನೊಂದಣಿ ಮಾಡಿಕೊಂಡವರಿಗೆ ಮುಂದಿನ ತಿಂಗಳು ಸೌಲಭ್ಯ ದೊರೆಯಲಿದೆ ಎಂದರು.
ಗೃಹ ಜ್ಯೋತಿ ಯೋಜನೆಯಡಿ ಜುಲೈ 1 ರಿಂದ ಬಳಕೆ ಮಾಡಿದ ವಿದ್ಯುತ್ ಗೆ ಆಗಸ್ಟ್ ಮಾಹೆಯ ಬಿಲ್‍ನಲ್ಲಿ ಅರ್ಹ ಫಲಾನುಭವಿಗಳಿಗೆ ಶೂನ್ಯ ದರದ ವಿದ್ಯುತ್ ಬಿಲ್ಲು ನೀಡಲಾಗುತ್ತದೆ ಎಂದು ತಿಳಿಸಿದರು.
ಸಂಡೂರು ಶಾಸಕ ಈ.ತುಕಾರಾಂ ಅವರು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್, ವಿಶ್ವಜ್ಯೋತಿ ಬಸವಣ್ಣ ಹಾಗೂ ಬುದ್ಧನಂತಹ ಮಹನೀಯರ ತತ್ವಗಳನ್ನು ಅಳವಡಿಸಿಕೊಂಡಿರುವ ನಮ್ಮ ಸರ್ಕಾರ ಸರ್ವರನ್ನು ಒಳಗೊಂಡ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಸಾಧಿಸಬೇಕು ಎಂಬುದು ನಮ್ಮ ಮಹಾದಾಸೆಯಾಗಿದೆ. ಇದಕ್ಕಾಗಿಯೇ ಇಂತಹ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.
ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಮಾತನಾಡಿ, ಯಾವುದೇ ಒಂದು ಭರವಸೆ ನೀಡಿದಾಗ, ಅದನ್ನು ಕೊಟ್ಟ ಮಾತಿನಂತೆ ಈಡೇರಿಸಿದಾಗ ಸಿಗುವ ಸಂಭ್ರಮಕ್ಕೆ ಈ ದಿನ ನಮ್ಮ ಸರ್ಕಾರವು ಅಭೂತಪೂರ್ವ ಸಾಕ್ಷಿಯಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬ ಜನಪ್ರತಿನಿಧಿಯು ಜನರ ಮಧ್ಯೆ ಇದ್ದು, ಅವರ ಸಂಕಷ್ಟಗಳನ್ನು ಅರಿತು, ಕೆಲಸ ಮಾಡಬೇಕು. ಅಂದಾಗ ಮಾತ್ರ ಪ್ರಜಾಪ್ರಭುತ್ವದ ಆಶಯಕ್ಕೆ ಚಿರಋಣಿಯಾಗಿರುತ್ತಾನೆ ಎಂದರು.


ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿ, ನಮ್ಮ ಸರ್ಕಾರ ಅಧಿಕಾರ ವಹಿಸಿದ ತಿಂಗಳೊಳಗೆ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ “ಶಕ್ತಿ” ಯೋಜನೆಗೆ ಚಾಲನೆ ನೀಡಲಾಯಿತು. ಪ್ರತಿದಿನ ಲಕ್ಷಾಂತರ ಮಹಿಳೆಯರು ಸಾರಿಗೆ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಎಂದರು.
ಇತ್ತೀಚೆಗೆ “ಅನ್ನ ಭಾಗ್ಯ” ಯೋಜನೆಯಡಿ 10 ಕೆ.ಜಿ. ಆಹಾರ ಧಾನ್ಯದಲ್ಲಿ 5 ಕೆ.ಜಿ. ಅಕ್ಕಿ ಜೊತೆಗೆ ಉಳಿದ 5 ಕೆ.ಜಿ. ಅಕ್ಕಿಯ ಮೊತ್ತವನ್ನು ಡಿ.ಬಿ.ಟಿ. ಮೂಲಕ ಪಾವತಿಸಲಾಗುತ್ತಿದೆ. “ಗೃಹ ಲಕ್ಷ್ಮೀ” ಯೋಜನೆಯಡಿ ಮಾಸಿಕ 2,000 ರೂ. ಆರ್ಥಿಕ ಸೌಲಭ್ಯ ಪಡೆಯಲು ಈಗಾಗಲೆ ನೋಂದಣಿ ಶುರುವಾಗಿದೆ. ಆಗಸ್ಟ್ 15ಕ್ಕೆ ಇದಕ್ಕೆ ಚಾಲನೆ ನೀಡಲಾಗುತ್ತದೆ. ಇಂದು ಗೃಹ ಜ್ಯೋತಿ ಯೋಜನೆಗೆ ಚಾಲನೆ ದೊರೆತಿದೆ. ಉಳಿದಂತೆ ನಿರುದ್ಯೋಗಿಗಳಿಗೆ ಮಾಸಿಕ 1500 ರೂ., 3,000 ರೂ. ಭತ್ಯೆ ನೀಡುವ “ಯುವ ನಿಧಿ” ಯೋಜನೆ ಜಾರಿಗೆ ಅನುಷ್ಠಾನಕ್ಕೆ ಸಜ್ಜಾಗುತ್ತಿದೆ. ಒಟ್ಟಾರೆಯಾಗಿ ನಮ್ಮ ಸರ್ಕಾರ ಅಧಿಕಾರ ವಹಿಸಿದ ಮೂರು ತಿಂಗಳ ಅವಧಿಯಲ್ಲಿಯೇ ಪ್ರಮುಖ 4 ಗ್ಯಾರಂಟಿ ಜಾರಿಗೆ ಬರುತ್ತಿವೆ. ನುಡಿದಂತೆ ನಡೆಯುತ್ತಿರುವ ಸರ್ಕಾರ ನಮ್ಮದಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಐದು ಫಲಾನುಭವಿಗಳಿಗೆ ಶೂನ್ಯ ಮೊತ್ತದ ಬಿಲ್ ನ್ನು ಜಿಲ್ಲಾ ಉಸ್ತುವಾರಿ ಸಚಿವರು ಸಾಂಕೇತಿಕವಾಗಿ ವಿತರಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಡಿ.ತ್ರಿವೇಣಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಸಹಾಯಕ ಆಯುಕ್ತ ಹೇಮಂತ್ ಕುಮಾರ್ ಸೇರಿದಂತೆ ಬಳ್ಳಾರಿ ಜೆಸ್ಕಾಂ ವೃತ್ತ ಕಚೇರಿಯ ಅಧೀಕ್ಷಕ ಅಭಿಯಂತರರ ವೆಂಕಟೇಶುಲು, ಬಳ್ಳಾರಿ ವಲಯ ಜೆಸ್ಕಾಂ ಮುಖ್ಯ ಅಭಿಯಂತರರ ಲಕ್ಷ್ಮಣ ಚವ್ಹಾಣ್, ಬಳ್ಳಾರಿ ನಗರ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರ ಹುಸೇನ್‍ಬಾಬ್, ಬಳ್ಳಾರಿ ಗ್ರಾಮೀಣ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರ ಜೆ.ರಂಗನಾಥಬಾಬು ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here