ರಾಷ್ಟ್ರೀಯ ಶಿಕ್ಷಣ ನೀತಿ-2020ರ 3ನೇ ವರ್ಷಾಚರಣೆ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗೆ ಸಹಕಾರಿ: ಎಂ.ವಿಶ್ವನಾಥಂ

0
131

BP NEWS: ಬಳ್ಳಾರಿ: ಜುಲೈ.28:
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ ಮತ್ತು ಮೌಲ್ಯವರ್ಧನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಕಾರಿಯಾಗಿದೆ ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಎಂ.ವಿಶ್ವನಾಥಂ ಅವರು ಹೇಳಿದರು.
ಶುಕ್ರವಾರದಂದು, ರಾಷ್ಟ್ರೀಯ ಶಿಕ್ಷಣ ನೀತಿಯ-2020ರ ಅನುಷ್ಟಾನದ ವರ್ಷಾಚರಣೆ ಕುರಿತು ನಗರದ ಕೌಲ್‍ಬಜಾರ್‍ನ ಬಂಡಿಹಟ್ಟಿ ರಸ್ತೆಯ ಕೇಂದ್ರೀಯ ವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ-2020 ರಲ್ಲಿ ಆಧುನಿಕ ಕಲಿಕೆಯ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಕಲೆ-ಸಂಯೋಜಿತ, ಕ್ರೀಡೆ-ಸಂಯೋಜಿತ, ಆಟಿಕೆ ಆಧಾರಿತ ಶಿಕ್ಷಣ ಮತ್ತು ಅನುಭವದ ಕಲಿಕೆಯ ಪರಿಚಯವು ತರಗತಿಗಳಿಗೆ ಸೃಜನಶೀಲತೆಯನ್ನು ತಂದಿದೆ. ವಿದ್ಯಾರ್ಥಿಗಳಲ್ಲಿ ಜೀವನ ಕೌಶಲ್ಯ, ಮೌಲ್ಯ, ಲಿಂಗ ಸಂವೇದನೆ ಮತ್ತು ಪರಿಸರ ಜಾಗೃತಿಯನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರೀಯ ವಿದ್ಯಾಲಯಗಳು ಹಾಗೂ ಜವಾಹರ ನವೋದಯ ವಿದ್ಯಾಲಯಗಳಲ್ಲಿ ಅಳವಡಿಸಲಾಗಿದೆ. 21 ನೇ ಶತಮಾನದ ಅಗತ್ಯತೆಗಳಿಗೆ ಸೂಕ್ತವಾದ ವಿಶಾಲ-ಆಧಾರಿತ, ಹೊಂದಿಕೊಳ್ಳುವ, ಬಹುಶಿಸ್ತೀಯ ಶಿಕ್ಷಣದ ಮೂಲಕ ಭಾರತವನ್ನು ರೋಮಾಂಚಕ ಜ್ಞಾನ ಸಮಾಜ ಮತ್ತು ಜಾಗತಿಕ ಜ್ಞಾನದ ಸೂಪರ್ ಪವರ್ ಆಗಿ ಪರಿವರ್ತಿಸುವ ತನ್ನ ದೃಷ್ಟಿಕೋನಕ್ಕೆ ಕೇಂದ್ರೀಯ ವಿದ್ಯಾಲಯಗಳು ಬದ್ಧವಾಗಿವೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯ 3ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜುಲೈ 29 ರಂದು ನವದೆಹಲಿಯಲ್ಲಿ ಶಿಕ್ಷಣ ಸಚಿವಾಲಯ ಮತ್ತು ಕೌಶಲ್ಯ ಅಭಿವೃದ್ದಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆಂದು ತಿಳಿಸಿದರು.
ಪಿಎಂ ಕೆವಿವೈ 3 ರ ಅಡಿಯಲ್ಲಿ ಶಿಕ್ಷಣ ಸಚಿವಾಲಯ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಅಡಿಯಲ್ಲಿ ಪ್ರಾಯೋಗಿಕ ಯೋಜನೆಯ ಭಾಗವಾಗಿ ದೇಶದಾದ್ಯಂತ 228 ಕೇಂದ್ರೀಯ ವಿದ್ಯಾಲಯಗಳಲ್ಲಿ ಶಾಲೆಯಿಂದ ಹೊರಗಿರುವ ಮತ್ತು ಶಿಕ್ಷಣದಿಂದ ದೂರ ಉಳಿದಿರುವ ಯುವಕರ ಕೌಶಲ್ಯಕ್ಕಾಗಿ ಶಾಲಾ ಅವಧಿಯ ನಂತರ ಕೌಶಲ್ಯ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪರಿಣಾಮಕಾರಿ ಅನುಷ್ಟಾನಕ್ಕೆ ಶಿಕ್ಷಕರಿಗೆ ದೀಕ್ಷಾ (DIKSHA) ಪೋರ್ಟಲ್‍ನಲ್ಲಿ ಅಗತ್ಯ CPD ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ಕೇಂದ್ರೀಯ ವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಜೀವ ವಿಜ್ಞಾನ ವಿಷಯದ ಶಿಕ್ಷಕಿ ನಿರ್ಮಲಾ C ದಾಸರ್ ಅವರು ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು 5+3+3+4 ವಿನ್ಯಾಸಕ್ಕೆ ಪ್ರವೇಶಾತಿ, ವಯಸ್ಸಿನ ಮರುಜೋಡಣೆ ಮತ್ತು NIPUN ನ ಪರಿಚಯ ಉಪಕ್ರಮಗಳು (ಅರ್ಥೈಸುವಿಕೆ ಮತ್ತು ಸಂಖ್ಯಾಶಾಸ್ತ್ರದೊಂದಿಗೆ ಓದುವಲ್ಲಿ ಪ್ರಾವೀಣ್ಯತೆಗಾಗಿ ರಾಷ್ಟ್ರೀಯ ಉಪಕ್ರಮ) ವಿದ್ಯಾರ್ಥಿಗಳ ಪ್ರಗತಿಯನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಕೊಡುಗೆ ನೀಡಿದೆ ಎಂದರು.
ಎನ್‍ಇಪಿ ವ್ಯವಸ್ಥೆಯಲ್ಲಿ ತರಗತಿ 1 ರ ಪ್ರವೇಶ ಹಂತದ ವಿದ್ಯಾರ್ಥಿಗಳು ಮತ್ತು ಗ್ರೇಡ್ 2 ಮತ್ತು 3 ರ ಗುರಿ ಮಟ್ಟದ ವಿದ್ಯಾರ್ಥಿಗಳಿಗೆ ಓದುವುದು, ಬರೆಯುವುದು, ಮೌಖಿಕ ಭಾಷಾ ಸಾಮಥ್ರ್ಯ ಮತ್ತು ಸಂಖ್ಯಾ ಕೌಶಲ್ಯಗಳ ಮೇಲೆ ಕೇಂದ್ರೀಕರಿಸಿ, ಸ್ಥಳೀಯ ಭಾಷೆಯಲ್ಲಿ ಭಾಷಾ ಪ್ರಾವೀಣ್ಯತೆಯ ವಾತಾವರಣ ರಚಿಸುವುದಾಗಿದೆ ಎಂದು ತಿಳಿಸಿದರು.
ವಿದ್ಯಾಲಯಗಳಲ್ಲಿ ಶಾಲಾ ತಯಾರಿ ಮಾದರಿ, ಪೂರ್ವ-ಸಾಕ್ಷರತೆ, ಪೂರ್ವ-ಸಂಖ್ಯಾಶಾಸ್ತ್ರ, ಅರಿವಿನ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನ ಅನುಷ್ಟಾನವು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಶಿಕ್ಷಣಶಾಸ್ತ್ರದೊಂದಿಗೆ ಹೊಂದಿಕೆಯಾಗುತ್ತದೆ, ಇದು ಕಲಿಯುವವರಿಗೆ ಕೇಂದ್ರಿತ ವಿಧಾನವನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದರು.
ವೃತ್ತಿಪರ ಶಿಕ್ಷಣದ ಅನುಷ್ಟಾನಗೊಳಿಸಲು ಮತ್ತು ಮಕ್ಕಳ ಶಾಲಾ ಅವಧಿಯಲ್ಲಿ ಕೌಶಲ್ಯ ಅಭಿವೃದ್ಧಿಪಡಿಸಲು, ಎಲ್ಲಾ ಕೇಂದ್ರೀಯ ವಿದ್ಯಾಲಯಗಳಲ್ಲಿ 8 ನೇ ತರಗತಿಯಿಂದ ಕೃತಕ ಬುದ್ಧಿಮತ್ತೆಯನ್ನು ವೃತ್ತಿಪರ ವಿಷಯವಾಗಿ ಪರಿಚಯಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರೀಯ ವಿದ್ಯಾಲಯವು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಮತ್ತು ವಿದ್ಯಾಲಯದ ಸವಾರ್ಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ ವಿಷಯಗಳ ಕುರಿತು ಚರ್ಚಿಸಲು ಮಧ್ಯಂತರದಲ್ಲಿ ಪೋಷಕ-ಶಿಕ್ಷಕರ ಸಭೆಯನ್ನು ಏರ್ಪಡಿಸುತ್ತಿದೆ ಎಂದು ತಿಳಿಸಿದರು.
ದಾಖಲಾತಿ ವಿಭಾಗದ ರಾಜಶೇಖರ್ ಅವರು ಶಿಕ್ಷಣ ರಚನೆಯ ಬಗ್ಗೆ ವಿವರಿಸಿದರು. ಕೇಂದ್ರೀಯ ವಿದ್ಯಾಲಯಗಳು ದೀಕ್ಷಾ ಪೋರ್ಟಲ್, ಟಿವಿ ಚಾನೆಲ್‍ಗಳಲ್ಲಿ (ಸ್ವಯಂ ಪ್ರಭಾ), ರೇಡಿಯೋ ಪಾಡ್‍ಕ್ಯಾಸ್ಟ್ (ಶಿಕ್ಷಾ ವಾಣಿ) ಮತ್ತು ಇ-ಕಲಿಕೆಯ ವಿಷಯಗಳ ಮೂಲಕ ಡಿಜಿಟಲ್ ಶಿಕ್ಷಣಕ್ಕೆ ಬಹುಆಯ್ಕೆಯ ಪ್ರವೇಶವನ್ನು ಒದಗಿಸುತ್ತದೆ (ದೃಷ್ಟಿ ಮತ್ತು ಶ್ರವಣದೋಷವುಳ್ಳವರಿಗೆ ವಿಶೇಷ ಇ-ವಿಷಯ) ವೈವಿಧ್ಯಮಯ ಹಿನ್ನೆಲೆ, ಬಹುಭಾಷಾ ಅಗತ್ಯತೆಗಳನ್ನು ರೂಪಿಸಿಕೊಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾಲಯದ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಇದ್ದರು.

LEAVE A REPLY

Please enter your comment!
Please enter your name here