BP NEWS: ಬಳ್ಳಾರಿ: ಜುಲೈ.25:
ಮಕ್ಕಳು ಹೂವಿನ ಮೊಗ್ಗುಗಳಿದ್ದಂತೆ, ಅವರನ್ನು ಜಾಗರೂಕರಾಗಿ ಅರಳಲು ಅವಕಾಶ ಕಲ್ಪಿಸುವುದು ಇಂದಿನ ಸಮಾಜದ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಪುಷ್ಪಾಂಜಲಿ ದೇವೆ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕೋಟೆ ಪ್ರದೇಶದ ಶ್ರೀ ಮೇಧಾ ಪದವಿ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೆÇೀಕ್ಸೋ ಕಾಯ್ದೆ ಮತ್ತು ಮಕ್ಕಳ ರಕ್ಷಣಾ ಕಾನೂನುಗಳ ಅರಿವು ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿದ್ದು, ಮಕ್ಕಳು, ಪಾಲಕರು ಕಾನೂನಿನ ಅರಿವು ಹೊಂದುವುದು ಅವಶ್ಯಕವಾಗಿದೆ. ಒಳ್ಳೆಯ ಮತ್ತು ಕೆಟ್ಟ ಸ್ಪರ್ಶಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು ಪಾಲಕರ ಕರ್ತವ್ಯವಾಗಿದೆ ಎಂದರು.
ಮಕ್ಕಳು ದೇಶದ ಬಹು ದೊಡ್ಡ ಆಸ್ತಿಯಾಗಿದ್ದಾರೆ. ದೌರ್ಜನ್ಯಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು, ದೌರ್ಜನ್ಯಗಳಾದಾಗ ಹಿಂಜರಿಯದೇ ದೂರು ಸಲ್ಲಿಸಿ ತಪ್ಪಿಸ್ಥರಿಗೆ ಶಿಕ್ಷೆ ವಿಧಿಸಲು ಧೈರ್ಯವಾಗಿ ಮುಂದೆ ಬರಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ, ವಕೀಲರಾದ ತ್ರಿವೇಣಿ ಪತ್ತಾರ್, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಅಧಿಕಾರಿ ಎಂ.ಮೌನೇಶ್, ಕಾಲೇಜಿನ ಪ್ರಾಂಶುಪಾಲರಾದ ಕೆ.ರಾಮ್‍ಕಿರಣ್, ಸಿಡಿಪಿಒ ಮೋಹನಕುಮಾರಿ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.