ಆಗಸ್ಟ್ 1 ರಿಂದ ನಂದಿನಿ ಹಾಲಿನ ದರ ಲೀಟರ್‍ಗೆ ರೂ.3 ದರ ಹೆಚ್ಚಳ: ಎಲ್.ಭೀಮನಾಯ್ಕ

0
172

BP NEWS: ಬಳ್ಳಾರಿ: ಜುಲೈ.25:
ಕರ್ನಾಟಕ ಹಾಲು ಮಹಾಮಂಡಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ ಸಭೆಯಲ್ಲಿ ನಂದಿನಿ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್ ಗೆ ರೂ.3/- ರಂತೆ ಹೆಚ್ಚಳಕ್ಕೆ ಸಮ್ಮತಿ ನೀಡಿ, ಆಗಸ್ಟ್ 01, 2023 ರಿಂದ ದರವು ಜಾರಿಗೆ ಬರಲಿದೆ ಹಾಗೂ ಹೆಚ್ಚುವರಿ ಮಾಡುವ ಮಾರಾಟ ದರದ ಸಂಪೂರ್ಣ ಮೊತ್ತವನ್ನು ರೈತರಿಗೆ ವರ್ಗಾಹಿಸಲಾಗುವುದು ಎಂದು ಕರ್ನಾಟಕ ಹಾಲು ಮಹಾಮಂಡಳಿಯ ಅಧ್ಯಕ್ಷರೂ ಹಾಗೂ ರಾಬಕೊವಿ ಜಿಲ್ಲಾ ಹಾಲು ಸಹಕಾರ ಒಕ್ಕೂದ ಅಧ್ಯಕ್ಷರಾದ ಎಲ್.ಭೀಮನಾಯ್ಕ ಅವರು ತಿಳಿಸಿದರು.
ಅವರು ಮಂಗಳವಾರದಂದು, ಆಗಸ್ಟ್ 01 ರಿಂದ ಹಾಲಿನ ದರ ಹೆಚ್ಚಾಗುತ್ತಿರುವುದರ ಕುರಿತು ನಗರದ ಕೆಎಂಎಫ್‍ನ ಡೈರಿ ಆಡಳಿತ ಮಂಡಳಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರಮುಖವಾಗಿ ಸಣ್ಣ, ಮಧ್ಯಮ ರೈತರು ಹಾಗೂ ಹೆಚ್ಚು ಮಹಿಳಾ ರೈತರೇ ಹೈನೋದ್ಯಮವನ್ನು ಜೀವಪನೋಪಾಯದ ಮೂಲ ಕಸುಬನ್ನಾಗಿ ಅಳವಡಿಸಿಕೊಂಡಿರುವುದು ಹಾಗೂ ಹಾಲು ಉತ್ಪಾದನೆ ವೆಚ್ಚವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮತ್ತು ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಹಾಲು ಸಂಸ್ಕರಣೆ, ಸಾಗಾಣಿಕೆ, ಖರೀದಿ ದರಗಳಂತಹ ಎಲ್ಲಾ ಅಂಶಗಳನ್ನು ಪರಿಗಣಿಸಿ ದರ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ನಂದಿನಿ ಹಾಲಿನ ಮಾರಾಟ ದರವನ್ನು ಪ್ರಸ್ತುತ ರೂ. 3 ನಂತೆ ಪ್ರತಿ ಲೀಟರ್‍ಗೆ ಹೆಚ್ಚಳ ಮಾಡಿದ ನಂತರವು ದೇಶದ ಇತರೆ ಪ್ರಮುಖ ರಾಜ್ಯಗಳಲ್ಲಿನ ಸಹಕಾರಿ ಹಾಗೂ ಇತರೆ ಹಾಲಿನ ಬ್ಯಾಂಡ್‍ಗಳ ಮಾರಾಟ ದರಕ್ಕೆ ಹೋಲಿಸಿದಾಗ್ಯೂ ಸಹ ನಂದಿನಿ ಟೋನ್ಸ್ ಹಾಲಿನ ಮಾರಾಟ ದರ ಕಡಿಮೆ ಇರುವುದನ್ನು ನಾವು ಗಮನಿಸಬಹುದು.
*ನಂದಿನಿ ಹಾಲು (ದರ ರೂ./ಪ್ರತಿ ಲೀಟರ್‍ಗೆ):* ಕರ್ನಾಟಕ-42 ರೂ., ಕೇರಳ-50 ರೂ., ದೆಹಲಿ-54 ರೂ., ಗುಜರಾತ್-54 ರೂ., ಮಹಾರಾಷ್ಟ್ರ-54 ರೂ., ಆಂಧ್ರಪ್ರದೇಶ-56 ರೂ. ಇರುತ್ತದೆ.
2022ನೇ ಸಾಲಿನಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಮೇವಿನ ಲಭ್ಯತೆ ತೊಂದರೆಯಿಂದ, ರಾಜ್ಯದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಂಡುಬಂದಿರುವುದರಿಂದ, ಹಾಲಿನ ಮಾರಾಟ ದರ ಹೆಚ್ಚಳದ ವಿಳಂಬ ಹಾಗೂ ಪಶು ಆಹಾರ ಬೆಲೆ ಹೆಚ್ಚಳದಿಂದಾಗಿ ಪಶುಸಾಕಾಣಿಕೆ ವೆಚ್ಚ ಹೆಚ್ಚಾಗಿ ಹೈನುಗಾರಿಕೆ ಲಾಭದಾಯಕ ವೃತ್ತಿಯಲ್ಲವೆಂದು ರಾಜ್ಯವ್ಯಾಪ್ತಿಯಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಹೈನುಗಾರರು ಹೈನುಗಾರಿಕೆಯಿಂದ ವಿಮುಖರಾಗಿ, ಹಾಲು ಸರಬರಾಜನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಕಳೆದ ಸಾಲಿಗೆ ಹೋಲಿಸಿದರೆ ಹಾಲಿನ ಶೇಖರಣೆಯು ದಿನವಹಿ 94 ಲಕ್ಷ ಲೀಟರ್‍ಗಳಿಂದ 84 ಲಕ್ಷ ಲೀಟರ್‍ಗಳಿಗೆ ಇಳಿಕೆಯಾಗಿದ್ದು, ದಿನವಹಿ ಅಂದಾಜು 10 ಲಕ್ಷ ಲೀಟರ್ ಕಡಿಮೆಯಾಗಿರುತ್ತದೆ ಎಂದು ಹೇಳಿದರು.
ಕರ್ನಾಟಕ ಹಾಲು ಮಂಡಳಿ ಸಂಸ್ಥೆಯು ಮಾರುಕಟ್ಟೆಯಲ್ಲಿರುವ ಇತರೆ ಎಲ್ಲಾ ಹಾಲಿನ ಮಾರಾಟ ದರಕ್ಕಿಂತ ಅತೀ ಕಡಿಮೆ ದರದಲ್ಲಿ ನಂದಿನಿ ಹಾಲನ್ನು ಒದಗಿಸುತ್ತಿರುವುದನ್ನು ರಾಜ್ಯದ ಸಮಸ್ತ ಗ್ರಾಹಕರು ಗಮನಿಸಿ ಈ ಹಿಂದಿನಂತೆಯೇ ಸಹಕರಿಸಿ ಪೆÇ್ರೀತ್ಸಾಹಿಸಬೇಕು ಎಂದು ಅವರು ಕೋರಿದ್ದಾರೆ.
ರಾಬಕೋವಿ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ತಿರುಪತಪ್ಪ, ರಾಬಕೋವಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ (ಡೈರಿ) ಜಿ.ಬಿ.ಉದಯಕುಮಾರ್, ಹಾಲು ಒಕ್ಕೂಟದ ವ್ಯವಸ್ಥಾಪಕ (ಶೇಖರಣೆ) ಲಕ್ಕಣ್ಣನವರು, ಒಕ್ಕೂಟದ ಮಾರುಕಟ್ಟೆ ಅಧಿಕಾರಿ ಎಸ್.ವೆಂಕಟೇಶ್ ಗೌಡ, ಉಪ ವ್ಯವಸ್ಥಾಪಕರಾದ (ಮಾರುಕಟ್ಟೆ) ಸಿ.ಎನ್.ಮಂಜುನಾಥ, ಬಾಬು ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here