BP NEWS: ಲಿಂಗಸಗೂರು: ಮೇ.29: ತಾಲೂಕಿನಲ್ಲಿ ಬಿಗಿ ಹಿಡಿತ ಹೊಂದಿರುವ ವಜ್ಜಲ್ ಕುಟುಂಬ. ಕ್ಷೇತ್ರದ ಜನತೆ ಮೂರನೇ ಬಾರಿ ಮಾನಪ್ಪ ಡಿ ವಜ್ಜಲ್ ರವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಪಟ್ಟಣ ಸೇರಿದಂತೆ ತಾಲೂಕಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ನೂತನ ಶಾಸಕರು ಈ ಬಾರಿ ಬದ್ಧತೆ ಪ್ರದರ್ಶಿಸಲಿದ್ದಾರೆ. ಎಂದು ತಾಲೂಕಿನ ಜನರು ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಪಟ್ಟಣದಲ್ಲಿ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳ ಸುರುಳಿ ಬಿಚ್ಚಿಕೊಳ್ಳುತ್ತವೆ. ತಾಲೂಕು ಕೇಂದ್ರವಾದರೂ ಸಹ ಮೂಲ ಸೌಕರ್ಯಗಳ ಕೊರತೆಯಿಂದ ಪಟ್ಟಣ ನರಳುತ್ತಿದೆ. ರಸ್ತೆ, ಕುಡಿಯುವ ನೀರು, ಒಳಚರಂಡಿ ಸ್ವಚ್ಛತೆ, ಆರೋಗ್ಯ,ನೈರ್ಮಲ್ಯ ಎಲ್ಲಾದರಲ್ಲೂ ಸುಧಾರಣೆ ಕಾಣಬೇಕಿದೆ. ಜನರು ಬಾರಿ ಭರವಸೆಯೊಂದಿಗೆ ನೂತನ ಶಾಸಕರನ್ನು ಆಯ್ಕೆ ಮಾಡಿದ್ದು. ಕ್ಷೇತ್ರದ ಅಭಿವೃದ್ಧಿಗೆ ಗರಿಷ್ಠ ಪ್ರಯತ್ನ ಮಾಡಬೇಕು ಎಂಬುದು ಜನರ ಒತ್ತಾಸೆಯಾಗಿದೆ. ಪಟ್ಟಣದಲ್ಲಿ ಬೀದಿ ದೀಪಗಳ ವ್ಯವಸ್ಥೆ, ಅದ್ವಾನದಿಂದ ಕೂಡಿದೆ. ರಾತ್ರಿ ವೇಳೆ ರಸ್ತೆ ಬದಿಯಲ್ಲಿ ನಡೆಯುವುದು ಪಾದಚಾರಿಗಳಿಗೆ ದುಸ್ತರವಾಗಿದೆ. ನಗರ ಬಡಾವಣೆಯಲ್ಲಿ ರಾತ್ರಿ ವೇಳೆ ಓಡಾಡುವುದೇ ಕಷ್ಟವಾಗಿದ್ದು. ಚರಂಡಿಗಳು ಕಟ್ಟಿಕೊಂಡಿದ್ದು ಸಣ್ಣ ಮಳೆಯಾದರೂ ಕೊಳಚೆ ಎಲ್ಲವೂ ರಸ್ತೆಗೆ ಬಂದು ಬೀಳುತ್ತದೆ. ಹಾಗಾಗಿ ಪಟ್ಟಣ ಕರಡಕಲ್ ಕಸಬಾ ಲಿಂಗಸ್ಗೂರು ಸೇರಿದ 23 ವಾರ್ಡ್ ಗಳ ಪ್ರಮುಖ ಚರಂಡಿ ಹಾಗೂ ಬೀದಿ ದೀಪ ಸಿಸಿ ಕ್ಯಾಮೆರಾಗಳ ವ್ಯವಸ್ಥೆ ಸರಿಪಡಿಸಲು ಕ್ರಮವಹಿಸಬೇಕು. ಎಂಬುದು ಜನರ ಆಗ್ರಹವಾಗಿದೆ. ಗ್ರಾಮೀಣ ರಸ್ತೆಗಳ ದುರಸ್ತಿ ಕೆರೆಗಳ ಅಭಿವೃದ್ಧಿ ಹಳ್ಳ -ಕೊಳ್ಳಗಳ ಹೂಳೆತ್ತಿಸುವ ಮೂಲಕ ಜಲ ಮೂಲಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಕ್ಷೇತ್ರದಾದ್ಯಂತ ನೀರಾವರಿಗೆ ಮೊದಲ ಆದ್ಯತೆ ನೀಡಬೇಕು ಎಂಬುದು ಜನರ ಒತ್ತಾಸೆಯಾಗಿದೆ. ಚುನಾವಣೆ ಸಂದರ್ಭದಲ್ಲಿ ಶಾಸಕರಾದ ಬಳಿಕ ನಿಶ್ಚಿತವಾಗಿ ಈಡೇರಿಸುವ ಕೆಲ ಭರವಸೆಗಳನ್ನು ನೀಡಿದ್ದು, ಅವುಗಳ ಕಾರ್ಯ ಪಾಲನೆಗೆ ಬರುವ ದಿನಗಳಲ್ಲಿ ಶಾಸಕರು ಮುಂದಾಗಬಹುದು ಎಂಬುದು ಜನರಲ್ಲಿ ಮೂಡಿದೆ.
ಚುನಾವಣಾ ಸಂದರ್ಭದಲ್ಲಿ ಕೊಟ್ಟ ಭರವಸೆಗಳು
(1) ಮುದಗಲ್ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ (2)ಮುದಗಲ್ ಕೋಟೆ ಉತ್ಸವ ಪ್ರತಿ ವರ್ಷ ನೆರವೇರಿಸುವುದು. (3)ನಂದವಾಡಗಿ ಏತ ನೀರಾವರಿ ಯೋಜನೆ ಬಾಕಿ ಉಳಿದ 35 ಹಳ್ಳಿಗಳನ್ನು ಸಂಪೂರ್ಣವಾಗಿ ನೀರಾವರಿ ಮಾಡುವುದು. (4)ಪಟ್ಟಣದಲ್ಲಿ ಗಾರ್ಮೆಂಟ್ ತೆರೆದು 2000 ಮಹಿಳೆಯರಿಗೆ ಉದ್ಯೋಗ ಕಲ್ಪಿಸುವುದು. (5)ಗುಡ್ಡ ಗಾಡು ಪ್ರದೇಶದ ಪ್ರೌಢಶಾಲೆಗಳಿಗೆ ವಿಶೇಷವಾಗಿ ಬಾಲಕಿಯರಿಗೆ ವಸತಿ ನಿಲಯಗಳನ್ನು ಪ್ರಾರಂಭಿಸುವುದು. (6)ರೈತರ ಪಂಪ್ ಸೆಟ್ ಗಳಿಗೆ ಸತತ 7ರಿಂದ 8 ತಾಸು ವಿದ್ಯುತ್ ಒದಗಿಸುವುದು. (7)ಪಟ್ಟಣದ ಪ್ರತಿ ಮನೆಗೂ ನಿರಂತರ 24×7 ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು. (8)ಪ್ರತಿ ಮನೆಗೂ 24 ಗಂಟೆ ವಿದ್ಯುತ್ ಪೂರೈಕೆ ಮಾಡುವುದು. (9)ಪ್ರತಿ ಹಳ್ಳಿ -ತಾಂಡಕ್ಕೂ ರಸ್ತೆ ಸಂಪರ್ಕ ಕಲ್ಪಿಸುವುದು. (10)ಗುರುಗುಂಟ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡುವುದು ಸೇರಿದಂತೆ ಕ್ಷೇತ್ರದ ಎಲ್ಲರಿಗೂ ಉದ್ಯೋಗ ಶಾಸಕರಾದ ಬಳಿಕ ಕ್ಷೇತ್ರದ ಜನರಿಗೆ ಮಾಡಿಕೊಡುವುದಾಗಿ ಮಾನಪ್ಪ ವಜ್ಜಲ್ ಚುನಾವಣಾ ಸಮಾರಂಭದಲ್ಲಿ ಜನರಿಗೆ ಕೊಟ್ಟ ನಿಶ್ಚಿತ ಭರವಸೆಗಳು. ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರ, ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ರೈತಾಪಿ ಕುಟುಂಬಗಳಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಜನರ ಆಶಯವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ನೆಲಕಚ್ಚಿದ್ದರೂ ಅದರ ಮಧ್ಯೆ ಮಾನಪ್ಪ ವಜ್ಜಲ್ ಮೀಸಲು ಲಿಂಗಸ್ಗೂರು ಕ್ಷೇತ್ರದಲ್ಲಿ ಕಮಲ ಅರಳಿಸಿ ಜನ ಮೆಚ್ಚುಗೆ ಪಡೆದ ಶಾಸಕ ಎನಿಸಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿಯೇ ಶಿಕ್ಷಣ ನೀರಾವರಿ ಸೌಲಭ್ಯಗಳಲ್ಲಿ ಅತ್ಯಂತ ಹಿಂದುಳಿದ ಕ್ಷೇತ್ರವಾದ ಲಿಂಗಸ್ಗೂರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕ್ಷೇತ್ರದ ನೂತನ ಶಾಸಕ ಮಾನಪ್ಪ ಡಿ ವಜ್ಜಲ್ ಯಾವ ರೀತಿಯ ಕಾರ್ಯಯೋಜನೆ ರೂಪಿಸಲಿದ್ದಾರೆ. ಎಂಬುದು ಜನರಲ್ಲಿ ಸದ್ಯದ ಕುತೂಹಲವಾಗಿದೆ.