ಬಳ್ಳಾರಿ: ದೈಹಿಕ ವಿಶೇಷ ಚೇತನರಿಂದ ತ್ರಿಚಕ್ರ ವಾಹನ ಮೂಲಕ ಮತದಾನ ಜಾಗೃತಿ

0
137

BP NEWS: ಬಳ್ಳಾರಿ: ಫೆಬ್ರವರಿ.23: ಮತದಾನವು ಪ್ರಜಾಪ್ರಭುತ್ವ ದೇಶವನ್ನು ಸದೃಢಗೊಳಿಸಲು ಇರುವ ಒಂದು ಅಸ್ತ್ರ. ಇಲ್ಲಿ ಉತ್ತಮ ನಾಯಕರನ್ನು ಆರಿಸಲು ನಾವೆಲ್ಲರೂ ಜವಾಬ್ದಾರಿಯುತವಾಗಿ ಮತ ಚಲಾಯಿಸಬೇಕು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಹುಲ್ ಶರಣಪ್ಪ ಸಂಕನೂರು ಅವರು ಹೇಳಿದರು.
ಭಾರತ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು, ಮತದಾನಕ್ಕಿಂತ ಇನ್ನೊಂದಿಲ್ಲ ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಧ್ಯೇಯ ವಾಕ್ಯದೊಂದಿಗೆ ನಗರದ ಕನಕದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023 ರ ಮತದಾನ ಜಾಗೃತಿ ಅಂಗವಾಗಿ ದೈಹಿಕ ವಿಶೇಷ ಚೇತನರಿಂದ ಏರ್ಪಡಿಸಲಾದ ತ್ರಿಚಕ್ರ ವಾಹನ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮುಂಬರುವ ರಾಜ್ಯ ವಿಧಾನಸಭಾ ಚುನಾವಣಾ ನಿಮಿತ್ತ ಜಿಲ್ಲೆಯಲ್ಲಿ ಪ್ರತಿಶತ ನೂರರಷ್ಟು ಮತದಾನ ಹೊಂದಲು ಜಾಗೃತಿ ಮೂಡಿಸಲು ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಮಾತನಾಡಿ, ಮತದಾನದ ಜಾಗೃತಿಯು ಕೇವಲ ಇಲ್ಲಿಯೇ ಸೀಮಿತವಾಗಬಾರದು. ಬದಲಾಗಿ ನಿಮ್ಮ ಅಕ್ಕ ಪಕ್ಕದ ಮನೆಯವರಿಗೂ ತಿಳಿಸಬೇಕು. ಯಾವುದೇ ಆಸೆ – ಆಮಿಷಗಳಿಗೆ ಒಳಗಾಗಬಾರದು. ಜವಾಬ್ದಾರಿಯುತವಾಗಿ ಮತ ಚಲಾಯಿಸುವಂತೆ ತಿಳಿಹೇಳಬೇಕು. ಮತದಾನ ಸಂದರ್ಭದಲ್ಲಿ ದೈಹಿಕ ವಿಶೇಷ ಚೇತನರಿಗೆ ಮತದಾನ ಮಾಡಲು ವಿಶೇಷ ವಾಹನ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
ಜಾಗೃತಿ ಮೂಡಿಸುವ ಜಾಥಾದಲ್ಲಿ 18 ವರ್ಷ ಪೂರೈಸಿದ ಎಲ್ಲಾ ಯುವಕ-ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿ, ಮತದಾರರ ಪಟ್ಟಿಯ ಮಾಹಿತಿ ತಿದ್ದುಪಡಿಗಾಗಿ ನಮೂನೆ 8 ಬಳಸಿ, ಬಂದಿತು, ಬಂದಿತು ಚುನಾವಣೆ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹೆಸರು ನೊಂದಾಯಿಸುವುದು ನಮ್ಮೆಲ್ಲರ ಹೊಣೆ, ನಿಮ್ಮ ಹೆಸರು ನೋಂದಾಯಿಸಲು ನಮೂನೆ-6 ಬಳಸಿ, ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು, ಮತದಾರರಾಗಿ ನೊಂದಾಯಿಸಿಕೊಳ್ಳಲು ಈಗ ವರ್ಷಕ್ಕೆ ಒಂದಲ್ಲ 4 ಅವಕಾಶಗಳು, ಚುನಾವಣಾ ಸಂಬಂಧಿತ ಸಂದೇಹಗಳಿಗೆ 1950 ಮತದಾರರ ಸಹಾಯವಾಣಿಗೆ ಕರೆಮಾಡಿ, ಬಳಸಿ.. ಬಳಸಿ.. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಲು VHA App ಬಳಸಿ ಎಂಬ ಘೋಷವಾಕ್ಯಗಳ ಮಾಹಿತಿ ಫಲಕಗಳು ರಾರಾಜಿಸಿದವು.
ಜಾಗೃತಿ ಜಾಥಾ ಕನಕದುರ್ಗಮ್ಮ ದೇವಸ್ಥಾನದಿಂದ ಆರಂಭವಾಗಿ ರಾಯಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಮೋತಿ ವೃತ್ತ ಮಾರ್ಗವಾಗಿ ಸುಧಾ ಕ್ರಾಸ್ ಮೂಲಕ ಇನ್‍ಫ್ಯಾಂಟ್ರಿ ರೋಡ್‍ನಿಂದ ಎಸ್.ಪಿ.ಸರ್ಕಲ್ ಮಾರ್ಗವಾಗಿ ಮರಳಿ ಕನಕದುರ್ಗಮ್ಮ ದೇವಸ್ಥಾನದ ಆವರಣಕ್ಕೆ ಮರಳಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‍ನ ಉಪಕಾರ್ಯದರ್ಶಿ ಶರಣ ಬಸವರಾಜ್, ಜಿ.ಪಂನ ಸಹಾಯಕ ನಿರ್ದೇಶಕ ಬಸವರಾಜ ಹಿರೇಮಠ, ತಾಪಂ ಇ.ಒ ಶ್ರೀಧರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹೆಚ್.ಗೋವಿಂದಪ್ಪ ಸೇರಿದಂತೆ ಜಿಪಂ ಸಿಬ್ಬಂದಿ ಹಾಗೂ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here