BP NEWS: ಬಳ್ಳಾರಿ: ಜನೇವರಿ.19: ವಿದ್ಯಾರ್ಥಿಗಳು ಓದುವುದರ ಜೊತೆಗೆ ಪಠ್ಯೇತರ ಜ್ಞಾನ ಮತ್ತು ಕೌಶಲ್ಯತೆಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಕರೆ ನೀಡಿದರು.
ಜಿಲ್ಲಾಡಳಿತ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ನಗರದ ಪ್ರಧಾನ ಅಂಚೆ ಕಚೇರಿ ಹತ್ತಿರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಬರೀ ಓದುವುದಲ್ಲ, ಜೊತೆಗೆ ಇತರೆ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಜ್ಞಾನವು ಹೇಗಿರಬೇಕೆಂದರೆ ಬಾಬಾ ಸಾಹೇಬರ ರೀತಿ ಅಭ್ಯಾಸಿಸಬೇಕು. ವಿದ್ಯೆಯು ಯಾರ ಸ್ವತ್ತಲ್ಲ, ಪ್ರತಿಯೊಬ್ಬರಿಗೂ ಶೈಕ್ಷಣಿಕವಾಗಿ ಮುಂದುವರೆಯಲು ಸರ್ಕಾರವು ಹಲವು ಸೌಲಭ್ಯಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬಳ್ಳಾರಿ ನಗರ ಶಾಸಕರಾದ ಸೋಮಶೇಖರ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ರಾಜೇಶ್ವರಿ ಸುಬ್ಬರಾಯುಡು, ಬುಡಾ ಅಧ್ಯಕ್ಷರಾದ ಮಾರುತಿ ಪ್ರಸಾದ್, ಪಾಲಿಕೆಯ ಉಪಮೇಯರ್ ಮಾಲನ್ ಬಿ, ಪಾಲಿಕೆಯ 2ನೇ ವಾರ್ಡ್ ಸದಸ್ಯೆ ಈರಮ್ಮ ಸುರೇಂದ್ರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಅಂದಾನಪ್ಪ ವಡಗೇರಿ, ಕಾಲೇಜಿನ ಪ್ರಾಚಾರ್ಯರಾದ ಸುಲೇಖಾ.ಬಿ ಅವರು ಸೇರಿದಂತೆ ಕಾಲೇಜಿನ ಉಪನ್ಯಾಸಕ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.