BP NEWS: ಬಳ್ಳಾರಿ: ಜನೇವರಿ.12: ಯುವಜನಾಂಗ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕರಿಸಿರಿ ಎಂದು ಧಾರವಾಡ ರಾಮಕೃಷ್ಣ ಆಶ್ರಮದ ಯುತ್ ಕಮಿಟಿ ಸದಸ್ಯರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರ ಜೆ.ಸಿ.ರಾಜಶೇಖರ್ ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚಾರಣೆಯ ಪ್ರಯುಕ್ತ ವಿದ್ಯಾರ್ಥಿ ಕಲ್ಯಾಣ ಘಟಕ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದರು ಜ್ಞಾನಕೇಂದ್ರಿತ ವ್ಯಕ್ತಿತ್ವ ಉಳ್ಳವರು. ಹಿಂದೂ ಧರ್ಮದ ತತ್ವಗಳನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಅವರು ಯಾವುದೇ ಒಂದು ರಾಷ್ಟ್ರ, ಜನಾಂಗ, ಧರ್ಮಕ್ಕೆ ಸೀಮಿತವಾದವರಲ್ಲ. ನಮ್ಮ ಭರವಸೆ ಯುವಕರ ಮೇಲಿದೆ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಂತಹ ಶಕ್ತಿ ಯವಕರಲ್ಲಿದೆ. ಯುವಕರು ಸಮಯವನ್ನು ಒಳ್ಳೆಯ ವಿಚಾರಗಳಿಗಾಗಿ ಮೀಸಲಿಡಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ.ಸಿದ್ದು ಪಿ.ಅಲಗೂರ ಅವರು ಮಾತನಾಡಿ, ಯಾರಲ್ಲಿ ಆತ್ಮ ವಿಶ್ವಾಸವಿರುತ್ತದೇಯೊ ಅವರು ಜೀವನದಲ್ಲಿ ಎಲ್ಲವನ್ನು ಸಮರ್ಥವಾಗಿ ಎದುರಿಸಬಲ್ಲರು ಎಂದರು.
ಪ್ರಾಧ್ಯಾಪಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಶ್ರಮಿಸÀಬೇಕು. ವಿವೇಕಾನಂದರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಕೊಳ್ಳುವ ಮೂಲಕ ಯಶಸ್ವಿ ವ್ಯಕ್ತಿಯಾಗಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎಸ್.ಸಿ.ಪಾಟೀಲ್, ಪ್ರೊ.ಜಿ.ಪಿ.ದಿನೇಶ್, ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಶಶಿಧರ ಕೆಲ್ಲೂರ್, ರಸಾಯನಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ.ಅರುಣಕುಮಾರ ಲಗಶೆಟ್ಟಿ,
ವಿದ್ಯಾರ್ಥಿ ಕಲ್ಯಾಣ ಘಟಕದ ನಿರ್ದೇಶಕರಾದ ಪ್ರೊ.ಜಿ.ಪಿ.ದಿನೇಶ್ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.