ಸಂಡೂರು ತಾಲೂಕಿನ 59 ಕೆರೆಗಳಿಗೆ ನೀರು ತುಂಬಿಸುವ ಅಂದಾಜು ರೂ.1305 ಕೋಟಿ ಯೋಜನೆ ಡಿಪಿಆರ್‍ಗೆ ತಾತ್ವಿಕ ಒಪ್ಪಿಗೆ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು

0
96

BP NEWS: ಬಳ್ಳಾರಿ: ಜನೇವರಿ.10: ಸಂಡೂರು ತಾಲೂಕು ವ್ಯಾಪ್ತಿಯಲ್ಲಿ ಬರುವ ಸುಮಾರು 59 ಕೆರೆಗಳಿಗೆ ಶಾಶ್ವತವಾಗಿ ನೀರು ತುಂಬಿಸಲು ತುಂಗಾಭದ್ರಾ ಡ್ಯಾಂ ನಿಂದ 1.3 ಟಿ.ಎಂ.ಸಿ ನೀರನ್ನು ತರುವುದಕ್ಕೆ ಅಂದಾಜು ರೂ.1305 ಕೋಟಿ ವೆಚ್ಚದ ಡಿಪಿಆರ್‍ಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ತಿಳಿಸಿದರು.
ಅವರು ಸಂಡೂರು ತಾಲೂಕಿನ ಘೋರ್ಪಡೆ ಅವರ ನಿವಾಸದಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಂಡೂರು ಮಳೆಯಾಶ್ರಿತ ತಾಲ್ಲೂಕಾಗಿದ್ದು ಈ ಭಾಗದ ಜನರ ಬಹುದಿನದ ಬೇಡಿಕೆ ಕೆರೆಗಳಿಗೆ ನೀರು ತುಂಬಿಸುವುದಾಗಿತ್ತು. ನೀರಾವರಿ ಇಲ್ಲದ ಕಾರಣ ಕುಡಿಯುವ ನೀರಿನಲ್ಲಿ ಫೆÇ್ಲೀರೈಡ್ ಅಂಶ ಹೆಚ್ಚಾಗಿ ಈ ಭಾಗದ ಮಕ್ಕಳು ಸೇರಿದಂತೆ ಜನರಿಗೆ ಅನಾರೋಗ್ಯದ ಸಮಸ್ಯೆ ಇರುತ್ತಿತ್ತು. ಇದಕ್ಕೆ ಪರಿಹಾರವಾಗಿ ಸರ್ಕಾರ ಇಲ್ಲಿನ ಕೆರೆಗಳಿಗೆ ತುಂಗಭದ್ರ ಜಲಾಶಯದಿಂದ ನೀರು ತುಂಬಿಸುವುದರಿಂದ ಅಂತರ್ಜಲ ಹೆಚ್ಚಳದ ಜೊತೆಗೆ ಕುಡಿಯುವ ನೀರಿಗೂ ಪರಿಹಾರ ಸಿಕ್ಕಂತಾಗುತ್ತದೆ ಎಂದು ಇಲ್ಲಿಗೆ ಮುಖಂಡರ ಅಭಿಲಾಷೆಯಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿತ್ತು.
ಈ ಯೋಜನೆಯನ್ನು ತಯಾರು ಮಾಡಲು ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿ ಒಟ್ಟು 59 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ರೂ.1305 ಕೋಟಿ ವೆಚ್ಚಕ್ಕೆ ಡಿಪಿಆರ್ ಸಿದ್ದಪಡಿಸಲಾಗಿದ್ದು ಇದಕ್ಕೆ ಜನವರಿ 9 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ನೀರಾವರಿ ನಿಗಮದ ಸಭೆಯಲ್ಲಿ ತಾತ್ವಿಕವಾಗಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ ಎಂದರು.
ಸಂಡೂರು ತಾಲ್ಲೂಕಿನಲ್ಲಿ ಬರುವ 59 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಂದಿನ ಕ್ಯಾಬಿನೆಟ್‍ನಲ್ಲಿ ಇದಕ್ಕೆ ಒಪ್ಪಿಗೆ ಪಡೆದು ಟೆಂಡರ್ ಕರೆದ ನಂತರ ಮುಖ್ಯಮಂತ್ರಿಗಳೆ ಇಲ್ಲಿಗೆ ಆಗಮಿಸಿ ಭೂಮಿ ಪೂಜೆಯನ್ನು ನೆರವೇರಿಸುವರು, ಮುಂದಿನ ಎರಡು ವರ್ಷದಲ್ಲಿ ಈ ಕಾಮಗಾರಿ ಪೂರ್ಣಗೊಂಡು ಕೆರೆಗಳಿಗೆ ನೀರು ಹರಿದು ಬರಲಿದೆ ಎಂದು ಸಚಿವರು ತಿಳಿಸಿದರು.
ಸಂಡೂರು ತಾಲೂಕಿನ ನೀಡಗುಂಜಿ ಗ್ರಾಮ ಸೇರಿದಂತೆ 60ಕ್ಕೂ ಹೆಚ್ಚು ಜನ ವಸತಿ ಪ್ರದೇಶಗಳಲ್ಲಿ ಸುಮಾರು ರೂ.148 ಕೋಟಿ ವೆಚ್ಚದ ಜಲ ಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ಕಾಮಗಾರಿ ಮತ್ತು ತೋರಣಗಲ್ಲು ಹಾಗೂ ಇತರೆ ಎರಡು ಜನವಸತಿ ಪ್ರದೇಶಗಳಲ್ಲಿ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ರೂ.125 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ನೀಡಿದೆ.
ತಾಲೂಕು ಆಡಳಿತ ಭವನ; ಸಂಡೂರಿನಲ್ಲಿ ವಿವಿಧ ಇಲಾಖೆಯ ಎಲ್ಲಾ ಕಚೇರಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಡಿಎಂಎಫ್ ಅನುದಾನದಲ್ಲಿ ಸುಮಾರು ರೂ.20 ಕೋಟಿ ವೆಚ್ಚದ ತಾಲೂಕು ಆಡಳಿತ ಭವನ (ಮಿನಿ ವಿಧಾನ ಸೌಧ) ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ 800 ಬಸ್; ರಾಜ್ಯದಲ್ಲಿ ಹಳೆಯ ಬಸ್‍ಗಳು ತುಂಬಾ ಇದ್ದು, ಅವುಗಳನ್ನು ಬದಲಿಸಲು ಸಾರಿಗೆ ಇಲಾಖೆ ವತಿಯಿಂದ ಈಗಾಗಲೇ 3600 ಬಸ್ ಗಳನ್ನು ಖರೀದಿಸಲಾಗುತ್ತಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳಿಗೆ ಸುಮಾರು 800 ಬಸ್‍ಗಳನ್ನು ನೀಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಯು ಮುಗಿದಿದ್ದು, ಇನ್ನೂ ಒಂದು ತಿಂಗಳಲ್ಲಿ ಬಸ್‍ಗಳು ಸಂಚರಿಸಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ಮಾಜಿ ಸಂಸದೆ ಜೆ.ಶಾಂತಾ, ಪಂಪಾಪತಿ ಸೇರಿದಂತೆ ಇತರೆ ಮುಖಂಡರು ಇದ್ದರು.

LEAVE A REPLY

Please enter your comment!
Please enter your name here