ಬಳ್ಳಾರಿ: ರಾಷ್ಟ್ರೀಯ ಗ್ರಾಹಕರ ದಿನಾಚರಣೆ

0
140

BP NEWS: ಬಳ್ಳಾರಿ: ಡಿಸೆಂಬರ್.27: ದೈನಂದಿನ ಜೀವನದಲ್ಲಿ ನಾವೆಲ್ಲರೂ ಒಂದಲ್ಲ ಒಂದು ರೀತಿಯ ಗ್ರಾಹಕರು. ಈ ವೇಳೆ ವ್ಯವಹರಿಸುವಾಗ ಮೋಸ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸತೀಶ್ ಜೆ.ಬಾಳಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಬಿಡಿಎಎ ಫುಟ್‍ಬಾಲ್ ಮೈದಾನ ಒಳಾಂಗಣ ಸಭಾಂಗಣದಲ್ಲಿ ಮಂಗಳವಾರ ‘ಗ್ರಾಹಕ ಆಯೋಗದಲ್ಲಿ ಪ್ರಕರಣಗಳ ಪರಿಣಾಮಕಾರಿ ವಿಲೇವಾರಿ’ ಘೋಷವಾಕ್ಯದಡಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಹಕರಿಗೆ ಇರುವ ಹಕ್ಕು ಹಾಗೂ ಕಾನೂನುಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಪ್ರತಿಯೊಬ್ಬ ಗ್ರಾಹಕರು ಯಾವುದೇ ಉತ್ಪನ್ನ, ಸರಕುಗಳು ಮತ್ತು ಸೇವೆಯನ್ನು ಪಡೆಯುವಾಗ ಗುಣಮಟ್ಟ, ಶುದ್ಧತೆ, ಮತ್ತು ಬೆಲೆಯ ನಿಖರ ಮಾಹಿತಿಯನ್ನು ಹೊಂದುವ ಹಕ್ಕನ್ನು ಹೊಂದಿರುತ್ತಾನೆ. ಗ್ರಾಹಕರು ಮೋಸ ಹೋದಲ್ಲಿ ಅದರಿಂದ ಪರಿಹಾರ ಕಂಡುಕೊಳ್ಳಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಿ, ಮೋಸ ಮಾಡಿದವರ ಮೇಲೆ ಕಾನೂನು ರೀತಿಯ ಶಿಕ್ಷೆಯನ್ನು ಕೊಡಿಸುವುದಲ್ಲದೇ, ಮೋಸ ಹೋದವರಿಗೆ ಪರಿಹಾರ ಒದಗಿಸಲಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಆನ್‍ಲೈನ್ ಮೂಲಕ ಖರೀದಿ ಮಾಡುತ್ತಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಮುಂಜಾಗ್ರತೆ ಅಗತ್ಯವಾಗಿದೆ. ಆನ್‍ಲೈನ್ ವ್ಯವಹಾರದಲ್ಲಿಯೂ ಸಹ ಮೋಸವಾಗುವ ಸಂಭವವಿದ್ದು, ಯಾವುದೇ ವಸ್ತುವನ್ನು ಖರೀದಿ ಮಾಡಿದಾಗ ಅದರ ನೈಜ ಬಿಲ್ಲನ್ನು ತೆಗೆದುಕೊಳ್ಳಬೇಕು. ಮೋಸಹೋದಾಗ ದೂರು ದಾಖಲಿಸಿ ನ್ಯಾಯ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಗ್ರಾಹಕರ ಪರಿಹಾರ ಆಯೋಗವು ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೋಸಹೋದಾಗ ಗ್ರಾಹಕರು ಆಯೋಗದ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಸುನಿತಾ.ಎಂ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಗ್ರಾಹಕರಿಗೆ 2011ರ ಏಪ್ರೀಲ್ 1ರಿಂದ ಜಾರಿಗೆ ಬಂದಿರುವ ಲೀಗಲ್ ಮೆಟ್ರಾಲಜಿ ಕಾಯ್ದೆ -2009ರ ಹಾಗೂ ಪೊಟ್ಟಣ ಸಾಮಾಗ್ರಿ ನಿಯಮಗಳ 2011ರ ತಿಳುವಳಿಕೆ ನೀಡುವ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಕೀಲರಾದ ಅಂಕಲಯ್ಯ ಅವರು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯರಾದ ಮಾರ್ಲಾ ಶಶಿಕಲಾ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿ ಶಶಿಕಾಂತ ರಜಪೂತ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ನಾಗರಾಜ ನಾಯ್ಕ, ಮುನ್ಸಿಪಲ್ ತಹಶೀಲ್ದಾರ್ ಹರೀಮಾ ಸೇರಿದಂತೆ ಪಡಿತರ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here