ಬಳ್ಳಾರಿ ಉತ್ಸವ ಯಶಸ್ವಿಗೊಳಿಸಲು ಎಲ್ಲಾ ಅಧಿಕಾರಿಗಳು ಕ್ರಮವಹಿಸಿ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು

0
90

BP NEWS: ಬಳ್ಳಾರಿ: ಡಿಸೆಂಬರ್.24: ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ‘ಬಳ್ಳಾರಿ ಉತ್ಸವ’ವನ್ನು ಆಚರಿಸಲಾಗುತ್ತಿದ್ದು, ವಿವಿಧ ಇಲಾಖೆಗಳಿಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಉತ್ಸವ ಉತ್ಸಾಹಿಗಳಾಗಿ ಯಶಸ್ವಿಗೊಳ್ಳುವಂತೆ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಅಧಿಕಾರಿಗಳಿಗೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ವಿವಿಧ 16 ಉಪ ಸಮಿತಿಗಳನ್ನು ರಚಿಸಿದ್ದು, ಆಯಾ ಉಪ ಸಮಿತಿಗಳಿಗೆ ವಹಿಸಿದ ಜವಾಬ್ದಾರಿ ಮತ್ತು ಕಾರ್ಯಕ್ರಮ ಅನುಷ್ಟಾನಗೊಳಿಸಿ ಉತ್ಸವ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಜಿಲ್ಲೆ ವಿಭಜನೆಯಾದ ನಂತರ ಇದೇ ಮೊದಲ ಬಾರಿಗೆ ಬಳ್ಳಾರಿ ಉತ್ಸವ ಆಚರಿಸಲು ಜಿಲ್ಲಾಡಳಿತವು ನಿರ್ಧರಿಸಿದ್ದು, ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು. ಉತ್ಸವ ಯಶಸ್ವಿಯಾಗಲು ಎಲ್ಲರ ಪರಿಶ್ರಮ ಬಹಳ ಮುಖ್ಯವಾಗಿರುತ್ತದೆ. ಇದು ಸಾಮಾನ್ಯ ಉತ್ಸವದಂತಿರದೇ, ವಿಶೇಷತೆಯಿಂದ ಕೂಡಿರಬೇಕು. ಅಂದಹಾಗೆ ಮಾತ್ರ ಜನರ ಹತ್ತಿರ ಕೊಂಡೊಯ್ದು ಕಾರ್ಯಕ್ರಮ ಯಶಸ್ವಿಗೊಳ್ಳಲು ಸಾಧ್ಯ ಎಂದರು.
ಸಮಿತಿಗಳ ರಚನೆ: ಸ್ವಾಗತ ಮತ್ತು ಶಿಷ್ಟಾಚಾರ ಸಮಿತಿ, ಸಾರಿಗೆ ಸಮಿತಿ, ವಸತಿ ಸಮಿತಿ, ಆಹಾರ ಸಮಿತಿ, ಮಾಧ್ಯಮ ಮತ್ತು ಪ್ರಚಾರ ಸಮಿತಿ, ಜಾಹೀರಾತು ಸಮಿತಿ, ಬ್ಯಾನರ್, ಆಹ್ವಾನ ಪತ್ರಿಕೆ, ನೆನಪಿನ ಕಾಣಿಕೆ, ಪ್ರಮಾಣ ಪತ್ರಗಳು ವಿತರಣಾ ಸಮಿತಿ, ವೇದಿಕೆ ಮೂಲಭೂತ ಸೌಕರ್ಯಗಳ ಸಮಿತಿ, ಆರೋಗ್ಯ ಮತ್ತು ನೈರ್ಮಲ್ಯೀಕರಣ ಸಮಿತಿ, ಕಾನೂನು ಸುವ್ಯವಸ್ಥೆ ಸಮಿತಿ, ವಸ್ತುಪ್ರದರ್ಶನ ಸಮಿತಿ, ವೇದಿಕೆ ಸಮಿತಿ, ಛಾಯಾಚಿತ್ರ, ಚಿತ್ರಕಲಾ ಶಿಬಿರ ಸಮಿತಿ, ಕಲಾವಿದರ ಆಯ್ಕೆ ಸಮಿತಿ, ಗ್ರಾಮೀಣ ಕಲೆ, ಕ್ರೀಡಾ ಸಮಿತಿ, ರಂಗೋಲಿ-ಮೆಹಂದಿ ಸ್ಪರ್ಧೆ ಸಮಿತಿ, ವಿದ್ಯುತ್ ದೀಪಾಲಂಕಾರ ಸೇರಿದಂತೆ ಇತರೆ ಸಮಿತಿಗಳನ್ನು ರಚಿಸಲಾಗಿದೆ. ಉಪ ಸಮಿತಿಯವರು ಮೂರು ದಿನಗಳಲ್ಲಿ ಸಮಿತಿಯಲ್ಲಿ ಪರಾಮರ್ಶಿಸಿ ಆಯೋಜಿಸಬಹುದಾದ ಕಾರ್ಯಕ್ರಮಗಳು ಮತ್ತು ವೆಚ್ಚದ ವಿವರವನ್ನು ನೀಡಲು ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದರು.
ಉತ್ಸವದಲ್ಲಿ ಸಾವಯವ ಸಿರಿಧಾನ್ಯಗಳ ಪ್ರದರ್ಶನ, ಆಹಾರ ಮೇಳ, ಪುಸ್ತಕ ಪ್ರದರ್ಶನ, ಬಂಡಿಗಳ ಪ್ರದರ್ಶನ, ವಿಮ್ಸ್ ನಿಂದ ಕಲಾತಂಡಗಳೊಂದಿಗೆ ನಗರದಲ್ಲಿ ಬೃಹತ್ ಮೆರವಣಿಗೆ ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲು ಬೇಕಾದ ವ್ಯವಸ್ಥೆ ಮತ್ತು ಪ್ರಚಾರ ಕೈಗೊಳ್ಳಬೇಕು ಎಂದರು.
ಜನವರಿ 4 ರಂದು ಬಳ್ಳಾರಿಗೆ ಮುಖ್ಯಮಂತ್ರಿಗಳು; ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯಲ್ಲಿನ ವಿವಿಧ ಇಲಾಖೆಗಳ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮವನ್ನು 2023 ರ ಜನವರಿ 4 ರಂದು ಏರ್ಪಡಿಸಲಿದ್ದು ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುವರು. ಇದಕ್ಕಾಗಿ ಎಲ್ಲಾ ಅಭಿವೃದ್ದಿ ಇಲಾಖೆಯವರು ಉದ್ಘಾಟನೆಗೆ ಬೇಕಾದ ಎಲ್ಲಾ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು.
ಈ ಸಂರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್‍ಕುಮಾರ್ ಬಂಡಾರು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ಸಹಾಯಕ ಆಯುಕ್ತರಾದ ಹೇಮಂತ್‍ಕುಮಾರ್.ಎನ್, ಪ್ರೊಬೆಷನರಿ ಐಎಎಸ್ ಅಧಿಕಾರಿ ರೂಪಿಂದರ್ ಕೌರ್, ಎಡಿಸಿ ಮಂಜುನಾಥ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
——–

LEAVE A REPLY

Please enter your comment!
Please enter your name here