ಜನವರಿ 21 ಮತ್ತು 22ರಂದು ಬಳ್ಳಾರಿ ಉತ್ಸವ ಆಚರಿಸಲು ಜಿಲ್ಲಾಡಳಿತ ನಿರ್ಧಾರ.

0
63

BP NEWS: ಬಳ್ಳಾರಿ: ಡಿಸೆಂಬರ್.17: ಬಳ್ಳಾರಿ ಜಿಲ್ಲೆ ವಿಭಜನೆಯಾದ ನಂತರ, ಮೊದಲ ಬಾರಿಗೆ ‘ಬಳ್ಳಾರಿ ಉತ್ಸವ’ವನ್ನು ಬರುವ ಜನವರಿ 21 ಮತ್ತು 22 ರಂದು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಸಭೆಯಲ್ಲಿ ಅವರು ತಿಳಿಸಿದರು.


ಉತ್ಸವ ಆಚರಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಒಂದೊಂದು ಜವಾಬ್ದಾರಿಯನ್ನು ತೆಗೆದುಕೊಂಡು ಅದ್ದೂರಿ ಆಚರಣೆಗೆ ಕ್ರಮ ವಹಿಸಬೇಕು ಎಂದು ಹೇಳಿದರು.
ಹಂಪಿ ಉತ್ಸವದಂತೆ ಬಳ್ಳಾರಿ ಜಿಲ್ಲೆಯಲ್ಲಿ ‘ಬಳ್ಳಾರಿ ಉತ್ಸವ’ವನ್ನು 2 ದಿನಗಳ ಕಾಲ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಾಲ್ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗುವುದು ಎಂದು ತಿಳಿಸಿದರು.
ಪ್ರಥಮ ಬಾರಿಗೆ ಆಚರಿಸುವ ಜಿಲ್ಲಾ ಉತ್ಸವ ಆಚರಿಸುತ್ತಿದ್ದು ಎರಡು ದಿನಗಳ ಮಟ್ಟಿಗೆ ಸೀಮಿತವಾಗಿರಲಿ. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾಡಳಿತವು ಕೈಗೊಂಡಿದೆ ಎಂದರು.
ಜನವರಿ ಮೊದಲ ವಾರದಿಂದಲೇ ಶಾಲಾ-ಕಾಲೇಜುಗಳಲ್ಲಿ ಕ್ವಿಜ್ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆಗಳನ್ನು ಆಯೋಜಿಸಬೇಕು. ಸ್ಥಳೀಯ ಮತ್ತು ಹೊರರಾಜ್ಯಗಳಿಂದ ಕಲಾವಿದರನ್ನು ಕರೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಮಾತನಾಡಿ, ತೋಟಗಾರಿಕೆ ಇಲಾಖೆ ವತಿಯಿಂದ ನೂತನ ಜಿಲ್ಲಾಡಳಿತ ಭವನದಲ್ಲಿ ಹೂಗಳ ಪ್ರದರ್ಶನ, ಮಹಾನಗರ ಪಾಲಿಕೆ ವತಿಯಿಂದ ಓಟಸ್ಪರ್ಧೆ, ಗಾಳಿಪಟ ಸ್ಪರ್ಧೆ, ವಾಟರ್ ಸ್ಪರ್ಧೆ, ರಂಗೋಲಿ ಸ್ಪರ್ಧೆಯನ್ನು ಆಯೋಜಿಸಬೇಕು ಎಂದು ತಿಳಿಸಿದರು.
ಬಳ್ಳಾರಿ ಉತ್ಸವದಲ್ಲಿ ಲೇಸರ್ ಶೋ ಆಯೋಜನೆ, ಕುಸ್ತಿ ಪಂದ್ಯಾವಳಿ, ಹಳ್ಳಿಗಳ ಎತ್ತಿನ ಬಂಡಿ ಉತ್ಸವ, ಆಹಾರ ಪ್ರದರ್ಶನ, ಸಿರಿಧಾನ್ಯಗಳ ಪ್ರದರ್ಶನ, ಮಕ್ಕಳ ಉತ್ಸವ, ಮಹಿಳಾ ಉತ್ಸವ ಸೇರಿದಂತೆ ನಾನಾ ಕ್ರೀಡೆಗಳನ್ನು ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗುವುದು ಮತ್ತು ನಗರದ ಕೋಟೆಗೆ ಲೈಟ್ ವ್ಯವಸ್ಥೆ ಇರಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಯುವಕರಿಗೆ ಬಳ್ಳಾರಿ ಉತ್ಸವಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಮತ್ತು ಸಲಹೆಗಳಿದ್ದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮತ್ತು ಖಾತೆಗಳನ್ನು ರಚಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್‍ಕುಮಾರ್ ಅವರು ಸಲಹೆ ನೀಡಿದರು.


ಸಭೆಯಲ್ಲಿ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ ಮತ್ತು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಜಿಪಂ ಸಿಇಒ ಜಿ.ಲಿಂಗಮೂರ್ತಿ, ಸಹಾಯಕ ಆಯುಕ್ತರಾದ ಹೇಮಂತ್‍ಕುಮಾರ್, ಪ್ರೊಬೆಷನರಿ ಐಎಎಸ್ ಅಧಿಕಾರಿ ರೂಪಿಂದರ್ ಕೌರ್, ಎಡಿಸಿ ಮಂಜುನಾಥ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here