BP NEWS: ಬಳ್ಳಾರಿ: ಡಿಸೆಂಬರ್.1: ಶಾಲೆಗಳಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ವಾರ್ಷಿಕ ಫಲಿತಾಂಶದಲ್ಲಿ ಜಿಲ್ಲೆ ಮೂಂಚೂಣಿಯಲ್ಲಿರಲು ಶ್ರಮಿಸಿ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಶಿಕ್ಷಕರಿಗೆ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಕಂಟೋನ್ಮೆಂಟ್‍ನ ಎಸ್.ಕೆ. ಮೋದಿ ನ್ಯಾಷನಲ್ ಸ್ಕೂಲ್ ನಲ್ಲಿ ಆಯೋಜಿಸಲಾಗಿದ್ದ 2022-23 ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳ ಸಮಾರಂಭಕ್ಕೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸ್ಪರ್ಧೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ಅವುಗಳನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆಯಬೇಕು. ಒಂದು ಕಾಲದಲ್ಲಿ ಶಕ್ತಿ ಮತ್ತು ಹಣ ಇದ್ದವರು ಮಾತ್ರ ಆಳುತ್ತಿದ್ದರು. ಆದರೆ ಈಗ ಶಿಕ್ಷಣದಿಂದಲೇ ಇಡೀ ಜಗತ್ತನ್ನೇ ಆಳಬಹುದು. ಆದ್ದರಿಂದ ಈಗಿನ ಮಕ್ಕಳು ಓದುವುದನ್ನು ಮತ್ತು ಎಲ್ಲಾ ರಂಗಗಳಲ್ಲಿ ಭಾಗವಹಿಸುವುದನ್ನು ಸಹ ರೂಢಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರವು ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ, ಪುಸ್ತಕಗಳು, ಸುಸಜ್ಜಿ ಶಾಲಾ ಕಟ್ಟಡದ ಜೊತೆಗೆ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿದ್ದು ಇವುಗಳನ್ನು ಬಳಸಿಕೊಂಡು ಮಕ್ಕಳು ಉನ್ನತಮಟ್ಟಕ್ಕೆ ಬೆಳೆಯಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಮೀಸಲಾತಿಯನ್ನು ಹೆಚ್ಚಿಸಲಾಗಿದ್ದು, ಶಿಕ್ಷಣಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚು ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಶಿಕ್ಷಕರ ಕೊರತೆಯಿದ್ದು ಅದರಲ್ಲಿ ಪೂರ್ಣಕಾಲಿಕ ಮತ್ತು ಅರೆಕಾಲಿಕ ಶಿಕ್ಷರಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಸುಮಾರು 20ಸಾವಿರ ಶಿಕ್ಷಕರ ನೇಮಕಾತಿ ಮತ್ತು ಅರೆಕಾಲಿಕ ಶಿಕ್ಷಕರನ್ನು ಖಾಯಂಗೊಳಿಸುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಅವರು ಹೇಳಿದರು.
ಕೆಎಂಇಆರ್‍ಸಿ ಅನುದಾನದಲ್ಲಿ ಜಿಲ್ಲೆಗೆ ಸುಮಾರು 650ಕೋಟಿ ರೂ.ಗಳನ್ನು ಶಿಕ್ಷಣಕ್ಕೆ ಮೀಸಲಿರಿಸಿದ್ದು, ನೂತನ ತಂತ್ರಜ್ಞಾನದ ಮೂಲಕ ಹೊಸ ಶಾಲಾ-ಕಾಲೇಜುಗಳು, ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‍ಗಳು ಹಾಗೂ ಶಾಲೆಗಳನ್ನು ಉನ್ನತೀಕರಣ ಮಾಡಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಂತರದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೋತ್ಕಾರ್, ರಾಬಕೋವಿ ಜಿಲ್ಲಾ ಹಾಲಿ ಒಕ್ಕೂಟ ನಿಗಮದ ನಿರ್ದೇಶಕರಾದ ವೀರಶೇಖರ ರೆಡ್ಡಿ, ವೀರಶೈವ ವಿದ್ಯಾ ವರ್ಧಕ ಸಂಘದ ಖಜಾಂಚಿ ಹಾಗೂ ಎಸ್.ಕೆ ಮೋದಿ ನ್ಯಾಷನಲ್ ಸ್ಕೂಲ್‍ನ ಅಧ್ಯಕ್ಷ ಗೋನಾಳ ರಾಜಶೇಖರ ಗೌಡ, ಎಸ್.ಕೆ ಮೋದಿ ನ್ಯಾಷನಲ್ ಸ್ಕೂಲ್‍ನ ಪ್ರಾಂಶುಪಾಲರಾದ ಸರಸ್ವತಿ.ಜೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ಉಪನಿರ್ದೇಶಕಿ (ಅಭಿವೃದ್ಧಿ) ಎ.ಹನುಮಕ್ಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ (ಆಡಳಿತ) ಅಂದಾನಪ್ಪ ವಡಗೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.