BP NEWS: ಬಳ್ಳಾರಿ: ನವೆಂಬರ್.22: ಹೆರಿಗೆಯನ್ನು ಸರಕಾರಿ ಆಸ್ಪತ್ರೆ ಅಥವಾ ಸಾಂಸ್ಥಿಕ ಸಂಸ್ಥೆಯಲ್ಲಿಯೇ ಮಾಡಿಸಿ. ನವಜಾತ ಶಿಶುವಿಗೆ ತಕ್ಷಣವೇ ಸ್ಥನ್ಯಪಾನವನ್ನು ಮಾಡುವುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ನವಜಾತ ಶಿಶುವಿನ ಆರೈಕೆಗೆ ಪ್ರತಿಯೊಬ್ಬರು ಕಾಳಜಿವಹಿಸಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸಂತಾನೋತ್ಪತ್ತಿ ಮತ್ತು ಮಕ್ಕಳ ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರೀಯ ನವಜಾತ ಶಿಶು ಆರೈಕೆ ಜಾಗೃತಿ ಸಪ್ತಾಹದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಮಗುವಿನ ಜನನದ ನಂತರ ಸ್ನಾನ ಮಾಡಿಸುವುದು ವಾಡಿಕೆ ರೂಪದಲ್ಲಿ ಕಂಡುಬರುತ್ತಿದ್ದು, ಯಾವುದೇ ಕಾರಣಕ್ಕೂ 8 ದಿನಗಳ ಕಾಲ ಅಥವಾ ವೈದ್ಯರ ಸೂಚನೆಯವರೆಗೂ ಸ್ನಾನ ಮಾಡಿಸದೇ ಕಾಳಜಿ ತೆಗೆದುಕೊಳ್ಳಬೇಕು. ಮಗುವಿನ 6 ತಿಂಗಳವರೆಗೆ ತಾಯಿಯ ಎದೆ ಹಾಲನ್ನು ಮಾತ್ರ ನೀಡಬೇಕು. 6 ತಿಂಗಳ ನಂತರ ಮಗುವಿಗೆ ಸುರಕ್ಷಿತವಾದ ದ್ರವ ರೂಪದ ಪೂರಕ ಪೌಷ್ಠಿಕ ಆಹಾರವನ್ನು ಆರಂಭಿಸಬೇಕು ಎಂದು ಅವರು ತಿಳಿಸಿದರು.
ಮಗುವಿನ ಹತ್ತಿರ ಅನಗತ್ಯವಾಗಿ ಹೆಚ್ಚು ಜನ ಸೇರುವುದು, ಕುಳಿತುಕೊಳ್ಳುವುದು ಮುಂತಾದವುಗಳನ್ನು ಮಾಡದಂತೆ ಜವಾಬ್ದಾರಿ ನಿರ್ವಹಿಸಬೇಕು. ಈ ದಿಶೆಯಲ್ಲಿ ಮಕ್ಕಳ ಮತ್ತು ಪ್ರಸೂತಿ ತಜ್ಞರ ಸಲಹೆಗಳನ್ನು ಪಾಲಿಸುವ ಮೂಲಕ ಮಗುವಿನ ಆರೈಕೆಗೆ ಪ್ರತಿಯೊಬ್ಬ ತಾಯಂದಿರು ಕಾಳಜಿವಹಿಸಬೇಕು ಎಂದು ಹೇಳಿದರು.
————————-