BP NEWS: SUPER FAST: NOVEMBER:14.

0
190

ಹಗರಿ ಕೆವಿಕೆಯಲ್ಲಿ ರೈತ ವಸತಿ ನಿಲಯ ಅಡಿಗಲ್ಲು ಸಮಾರಂಭ
BP NEWS: ಬಳ್ಳಾರಿ: ನವೆಂಬರ್.14: ನಮ್ಮ ಆರೋಗ್ಯ ಉತ್ತಮವಾಗಿರಲು ಸಿರಿ ಧಾನ್ಯಗಳನ್ನು ಬಳಸುವಂತೆ ನಮ್ಮ ಪೂರ್ವಜರೇ ಹೇಳಿದ್ದರು. ಆದರೆ, ನಾವು ಪಾಶ್ಚಿಮಾತ್ಯ ಕಡೆ ಸಾಗಿ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದು ಸಿರಿಧಾನ್ಯ ಕಾಳುಗಳನ್ನು ಬಳಸಿ ಆರೋಗ್ಯದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬೇಕೆಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಹಗರಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಗರಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ರೈತರ ವಸತಿ ನಿಲಯ ನಿರ್ಮಾಣದ ಅಡಿಗಲ್ಲಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.


ಸ್ವಾತಂತ್ರ್ಯ ಬಂದ ಮೇಲೆ ಸರ್ಕಾರಗಳು ಕೃಷಿಯ ಜೊತೆಗೆ ಕಾರ್ಖಾನೆಗಳ ಅಭಿವೃದ್ಧಿಗೆ ಪ್ರಯತ್ನ ನಡೆಯಿತು. ಆದರೆ ಇಂದು ಸಾವಿರಾರು ಕಾರ್ಖಾನೆಗಳು ಮುಚ್ಚಿಹೋಗಿವೆ. ಕೋರೊನಾ ಸಂದರ್ಭದಲ್ಲಿ ಎಲ್ಲರಿಗೂ ಕೃಷಿ ಮಾಡುವ ರೈತರು ಆರೋಗ್ಯದ ಬಗ್ಗೆ ಪಾಠ ಕಲಿಸಿದರು, ಅಂದು ಸಿರಿಧಾನ್ಯಗಳನ್ನು ನೀಡಿದರು. ನಮ್ಮ ದೇಶಕ್ಕೆ ಮಾತ್ರವಲ್ಲದೆ ವಿದೇಶಕ್ಕೆ ಕೂಡ ಕಳುಹಿಸಿಕೊಟ್ಟಿದ್ದು ಇದು ದೊಡ್ಡ ಪ್ರಯತ್ನ ಎಂದು ಹೇಳಿದರು.
ಐಸಿಎಆರ್ ಹಗರಿಯ ಕೃಷಿ ಕಾಲೇಜಿನಲ್ಲಿ ಸುಮಾರು 105 ಕೋಟಿ ರೂ.ವೆಚ್ಚದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣವಾಗಲಿದ್ದು, ಇದು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ರೈತರಿಗೆ ತರಬೇತಿ ನೀಡಲು ಅನುಕೂಲವಾಗಲಿದೆ. ಕೇಂದ್ರ ಸರ್ಕಾರವು ರೈತರ ನೆರವಿಗಾಗಿ ಕೃಷಿ ಸಮ್ಮಾನ್ ನಿಧಿ ಯೋಜನೆ, ಬೆಳೆ ವಿಮೆಯಂತಹ ಯೋಜನೆಗಳನ್ನು ಜಾರಿ ತಂದಿದೆ. ಬಳ್ಳಾರಿ ಜಿಲ್ಲೆಗೆ 245 ಕೋಟಿ.ರೂ ಬೆಳೆ ವಿಮಾ ಪರಿಹಾರ ಮೊತ್ತ ನೀಡಿದೆ ಎಂದರು.


ನೆಹರು ಯುವ ಕೇಂದ್ರದ ಸಂಸ್ಥಾಪನಾ ದಿನ ಆಚರಣೆ
BP NEWS: ಬಳ್ಳಾರಿ: ನವೆಂಬರ್.14: ನೆಹರು ಯುವ ಕೇಂದ್ರ ಹಾಗೂ ಆಶಾ ಜ್ಯೋತಿ ಮಹಿಳಾ ಅಭಿವೃದ್ಧಿ ಸೊಸೈಟಿ ಇವರ ಸಹಯೊಗದಲ್ಲಿ ಸೋಮವಾರ ಶ್ರೀಮತಿ ಗಾಲಿರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನೆಹರು ಯುವ ಕೆಂದ್ರದ ಸಂಸ್ಥಾಪನಾ ದಿನ ಆಚರಿಸಲಾಯಿತು.
ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸದಸ್ಯರಾದ ಎಚ್.ಸಿ.ರಾಘವೇಂದ್ರ ಅವರು ಮಾತನಾಡಿ, ಇಂದಿನ ಮಕ್ಕಳು ಮುಂದಿನ ಪ್ರಜೆಗಳು, ಆದರೆ ಇಂದಿನ ದಿನಗಳಲ್ಲಿ ಮಕ್ಕಳ ಭವಿಷ್ಯ ತುಂಬಾ ಅಪಾಯದಲ್ಲಿದೆ. ಮಕ್ಕಳ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾಗುತ್ತಿದೆ. ಅದರಿಂದ ಹೆಚ್ಚು ನಕರಾತ್ಮಕ ಮನೋಭಾವ ಬೆಳಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.


ಶಾಸಕ ಸೋಮಶೇಖರ ರೆಡ್ಡಿ ಅವರಿಂದ ಭೂಮಿಪೂಜೆ
BP NEWS: ಬಳ್ಳಾರಿ: ನವೆಂಬರ್.14: ಬಳ್ಳಾರಿ ನಗರದ ವಾರ್ಡ್ ನಂ.38ರ ಉರ್ದು ಬಾಲಕೀಯರ ಸರ್ಕಾರಿ ಪ್ರೌಢಶಾಲೆಗೆ 10 ಶಾಲಾ ಕೊಠಡಿ ಮತ್ತು ತಡೆಗೋಡೆ ನಿರ್ಮಾಣಕ್ಕೆ ಸೋಮವಾರ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ ಅವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಒಂದು ಕೊಠಡಿಗೆ ರೂ.12 ಲಕ್ಷ ವೆಚ್ಚವಾಗಲಿದ್ದು, 1.20 ಕೋಟಿ ರೂ. ಕಾಮಗಾರಿ ಇದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯ ಕುಬೇರ ಸೇರಿದಂತೆ ಇತರರು ಇದ್ದರು.


ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಅಭಿಯಾನ
BP NEWS: ಬಳ್ಳಾರಿ: ನವೆಂಬರ್.14: “ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಅಭಿಯಾನ ನಿಮಿತ್ತ ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು 3ನೇ ಶನಿವಾರದಂದು ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಆ ಗ್ರಾಮದ ಸಮಸ್ಯೆ, ಮನವಿಗಳ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.
ಬಳ್ಳಾರಿ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಹೋಬಳಿಯ ನಡವಿ ಗ್ರಾಮದಲ್ಲಿ ನ.19ರಂದು ಗ್ರಾಮವಾಸ್ತವ್ಯ ನಡೆಸಿ ಗ್ರಾಮಸ್ಥರ ದೂರು-ದುಮ್ಮಾನ ಆಲಿಸಲಿದ್ದಾರೆ.
*ವಿವಿಧೆಡೆ ಗ್ರಾಮ ವಾಸ್ತವ್ಯದ ವಿವರ: ನ.19ರಂದು ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಹೋಬಳಿಯ ನಡವಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಸಿರುಗುಪ್ಪ ತಾಲೂಕಿನ ತಹಶೀಲ್ದಾರರು ವಾಸ್ತವ್ಯ ನಡೆಸಲಿದ್ದಾರೆ.
ಬಳ್ಳಾರಿ ತಾಲೂಕಿನ ಮೋಕಾ ಹೋಬಳಿಯ ಎಂ.ಗೋನಾಳ್ ಗ್ರಾಮದಲ್ಲಿ ಬಳ್ಳಾರಿ ತಹಶೀಲ್ದಾರರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಕುರುಗೋಡು ತಾಲೂಕಿನ ಕೋಳೂರು ಹೋಬಳಿಯ ಬೈಲೂರು ಗ್ರಾಮದಲ್ಲಿ ಕುರುಗೋಡು ತಾಲೂಕಿನ ತಹಸೀಲ್ದಾರರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಸಂಡೂರು ತಾಲೂಕಿನ ತಹಸೀಲ್ದಾರರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಕಂಪ್ಲಿ ತಾಲೂಕಿನ ಕಂಪ್ಲಿ ಹೋಬಳಿಯ ಮಾವಿನಹಳ್ಳಿ ಗ್ರಾಮದಲ್ಲಿ ಕಂಪ್ಲಿ ತಾಲೂಕಿನ ತಹಶೀಲ್ದಾರರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮ ವ್ಯಾಸ್ತವ್ಯ ಮಾಡಲಿದ್ದಾರೆ.
ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿಗಳು, ತಹಸೀಲ್ದಾರರು ಹಾಗೂ ಅಧಿಕಾರಿಗಳು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಜನರ ಅಹವಾಲುಗಳನ್ನು ಆಲಿಸಲಿದ್ದಾರೆ.


ಕನ್ನಡ ಪುಸ್ತಕಗಳ ಪ್ರದರ್ಶನ
BP NEWS: ಹೊಸಪೇಟೆ(ವಿಜಯನಗರ): ನವೆಂಬರ್.14: 2020ನೇ ಹಾಗೂ 2022ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಏಕಗವಾಕ್ಷಿ ಮತ್ತು ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಡಿಯಲ್ಲಿ ರಾಜ್ಯ ಮಟ್ಟದ ಪುಸ್ತಕ ಅಯ್ಕೆ ಸಮಿತಿಯಿಂದ ಆಯ್ಕೆಯಾದ ಹಾಗೂ ಆಯ್ಕೆಯಾಗದ ಕನ್ನಡ ಪುಸ್ತಕಗಳ ಪ್ರದರ್ಶನವನ್ನು ನ.22ರಿಂದ ನ.24ರವರಗೆ ಬೆಂಗಳೂರಿನ ಹಂಪಿನಗರ ಪಶ್ಚಿಮ ವಲಯದ “ಗ್ರಂಥಾಂಗಣ” ನಗರ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಲಾಗಿದೆ ಎಂದು ಹೊಸಪೇಟೆ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ವಿನೋದರಾಜ ಎಸ್. ಅವರು ತಿಳಿಸಿದ್ದಾರೆ.
ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಆಯ್ಕೆಗಾಗಿ ಸಲ್ಲಿಸಿದ ಲೇಕಕರು, ಲೇಖನ-ಪ್ರಕಾಶಕರು, ಪ್ರಕಾಶಕರು, ವಿತರಕರು ಮತ್ತು ಪುಸ್ತಕ ಮಾರಾಟಗಾರರು ಆಕ್ಷೇಪಣೆಗಳಿದ್ದಲ್ಲಿ ನ.30ರೊಳಗಾಗಿ ನಿರ್ದೇಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆ ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ.ಬಿ.ಆರ್.ಅಂಬೇಡ್ಕರ ವಿಧಿ ಬೆಂಗಳೂರು-560001 ಇಲ್ಲಿಗೆ ಲಿಖಿತವಾಗಿ ಮನವಿಗಳನ್ನು ಸಲ್ಲಿಸಬಹುದಾಗಿದೆ. ನಂತರ ಬಂದ ಮನವಿಗಳನ್ನು ಯಾವುದೆ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here