BP NEWS: ಹೊಸಪೇಟೆ(ವಿಜಯನಗರ): ನವೆಂಬರ್.03: ವಿಜಯನಗರ ಜಿಲ್ಲೆಯಲ್ಲಿ ನ.6ರಂದು ನಡೆಯಲಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಜಿಲ್ಲೆಯಾದ್ಯಂತ ಒಟ್ಟು 7865 ಅಭ್ಯರ್ಥಿಗಳು ಹಾಜರಾಗುತ್ತಿದ್ದು, ಪರೀಕ್ಷಾ ಕೇಂದ್ರಗಳಿಗೆ ನೇಮಿಸಲಾದ ಪರೀಕ್ಷಾ ನಿಯಂತ್ರಕ ಅಧಿಕಾರಿಗಳು, ಪರೀಕ್ಷಾ ಅಧೀಕ್ಷಕರು, ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಸರ್ಕಾರ ನಿರ್ದೇಶಿಸಿರುವ ಪರೀಕ್ಷಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಓದಿಕೊಂಡು ಪರೀಕ್ಷಾ ಕೇಂದ್ರಗಳಲ್ಲಿ ಅವುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಹೇಳಿದರು.
ಗುರುವಾರದಂದು ವಿಜಯನಗರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷಾ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನ.6ರಂದು ಬೆಳಗ್ಗೆ 9.30ಕ್ಕೆ ಮೊದಲ ಹಂತದ ಪರೀಕ್ಷೆಗೆ 14ಕೇಂದ್ರಗಳಲ್ಲಿ 3380 ಅಭ್ಯರ್ಥಿಗಳು, ಮಧ್ಯಾಹ್ನ 2ರಿಂದ ಎರಡನೇ ಹಂತದ ಪರೀಕ್ಷೆಗೆ 18ಕೇಂದ್ರಗಳಲ್ಲಿ 4485 ಅಭ್ಯರ್ಥಿಗಳು ಸೇರಿ ಒಟ್ಟು 7865 ಅಭ್ಯರ್ಥಿಗಳು ಟಿಇಟಿ ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಾದ ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಗಾಳಿ-ಬೆಳಕಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಇತ್ಯಾದಿಗಳನ್ನು ಪರೀಕ್ಷೆಗೆ ನಿಯೋಜಿಸಿದ ನಿಯಂತ್ರಣಾಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಮುಂಚಿತವಾಗಿ ಭೇಟಿ ನೀಡಿ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದರು.
ಟಿಇಟಿ ಪರೀಕ್ಷಾ ಮಾರ್ಗಧಿಕಾರಿಗಳಾಗಿ ನೇಮಕಗೊಂಡವರು ಮುಂಚಿತವಾಗಿ ಮಾರ್ಗದಲ್ಲಿ ಸಂಚರಿಸಿ ಪರೀಕ್ಷಾ ದಿನದಂದು ಪರೀಕ್ಷಾ ಸಮಾಗ್ರಿಗಳ ಸರಬರಾಜು ಮಾಡುವ ಸಮಯದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.
ಟಿಇಟಿ ಪರೀಕ್ಷಾ ದಿನಂದು ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯವರು ವೈದ್ಯಕೀಯ ಸೇವೆಯನ್ನು, ಪರೀಕ್ಷೆಯ ಬಂದೋಬಸ್ತ್‍ಗಾಗಿ ಬೆಂಗಾವಲು ವಾಹನವನ್ನು ಒದಗಿಸಲು ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಅವರು ಮಾತನಾಡಿ ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತ 200 ಮೀ ಪ್ರದೇಶದ ವ್ಯಾಪ್ತಿಯಲ್ಲಿ ಏನಾದರು ಅಹಿತಕರ ಘಟನೆಗಳು ನಡೆದರೆ ಕಂಟ್ರೋಲ್ ರೂಂ.ಸಂ.112ಗೆ ಕರೆಮಾಡಿ ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಅನ್ನದಾನಯ್ಯಸ್ವಾಮಿ, ಹೊಸಪೇಟೆ ತಹಶೀಲ್ದಾರ್ ವಿಶ್ವಜೀತ್ ಮೆಹತಾ, ಡಿಡಿಪಿಐ ಜಿ.ಕೊಟ್ರೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಬಿಇಒಗಳು ಹಾಗೂ ಪರೀಕ್ಷಾ ಅಧೀಕ್ಷಕರು ಇದ್ದರು.