ಬಿಸಿಲೂರ ನಾಡಲ್ಲಿ ಸಂಡೂರೆಂಬ ಸ್ವರ್ಗ.

0
163

BP NEWS: ಬಳ್ಳಾರಿ: ನವೆಂಬರ್.01:  ಬಳ್ಳಾರಿ ಎಂದರೆ ಬಿಸಿಲು ಬಿಸಿಲು ಎಂದರೆ ಬಳ್ಳಾರಿ’. ಕರ್ನಾಟಕ ರಾಜ್ಯದ ಮಟ್ಟಿಗೆ ಬಳ್ಳಾರಿಗೆ ಒಂದು ವಿಶೇಷ ಸ್ಥಾನವಿದೆ, ಈ ಬಳ್ಳಾರಿಗೆ ಸಂಡೂರು ‘ಹೃದಯಭಾಗ’ ಇದ್ದಂತೆ ಶ್ರೀಮಂತ ವಿಜಯನಗರ ಸಾಮ್ರಾಜ್ಯ ಆಳ್ವಿಕೆ ನಡೆಸಿದ ಪೌರಾಣಿಕ ತಾಣ ಇದು. ಸಂಡೂರು ಕಬ್ಬಿಣದ ಅದಿರು ಹೆಚ್ಚಾಗಿ ದೊರೆಯುವ ಸ್ಥಳ. ಯಾವ ಕಾಲವೇ ಇದ್ದರೂ ಸಂಡೂರು ಸದಾ ಕೆಂದೂಳಿನಲ್ಲಿ ಮಿಂದೇಳುತ್ತದೆ ಪ್ರವಾಸಿಗರಿಗೆ ಇಲ್ಲಿನ ರಸ್ತೆಗಳನ್ನು ನೋಡಿದರೆ ಕಬ್ಬಿಣ ಅದಿರಿನ ಮಣ್ಣಿಂದ ನೀರು ಮಿಶ್ರಿತವಾಗಿ ಒಂಥರಾ ರಕ್ತದ ಕೆಂಧೋಳಿಯ ತರವಾಗಿರುತ್ತದೆ. ಕಬ್ಬಿಣದ ಅದಿರಿನ ಮೂಲಕ ಅಪಾರ ಪ್ರಮಾಣದ ಗಣಿಗಾರಿಕೆ ನಡೆಯುತ್ತಿದ್ದು ಕಬ್ಬಿಣ ರಪ್ತು ಮಾಡುವಲ್ಲಿ ಸಿಂಹಪಾಲು ಪಡೆದಿದೆ ನಮ್ಮ ಸಂಡೂರು‌.

ಸಂಡೂರು ಬಿಸಿಲೂರು ಎಂದು ಬಿರುಬಿಸಿಲಿಗೆ ಹೆಸರಾಗಿದ್ದರು ಮಲೆನಾಡಿನ ಬೆಟ್ಟಗಳನ್ನೇ ಹೋಲುವ ಬೆಟ್ಟಗುಡ್ಡಗಳನ್ನ ಮಾನಸ ಸರೋವರವನ್ನ, ನಾರಿಹಳ್ಳ ಜಲಾಶಯವನ್ನು ಮತ್ತು ಜೋಗದಕೊಳ ಪ್ರಸಿದ್ದ ಏಕಶಿಲಾ ಯಾಣಗಳನ್ನು ಹೊಂದಿದೆ. ಹಿಂದೊಮ್ಮೆ ರಾಷ್ಟ್ರಪಿತಾ ಮಹಾತ್ಮ ಗಾಂಧೀಜಿಯವರು ಸಂಡೂರಿಗೆ ಭೇಟಿಯನ್ನಿತ್ತಾಗ ಇಲ್ಲಿನ ಸೌಂದರ್ಯಕ್ಕೆ ಮನಸೋತು “See Sandur In September” ಎಂದು ಉಚ್ಚರಿಸಿದ್ದಾರೆ. ಇಲ್ಲಿನ ಜನಜೀವನ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದು ಬಹುತೇಕ ದುಡಿದುಂಬುವ ಜನವೇ ಇಲ್ಲಿ ನೆಲೆಸಿದ್ದು ಗಣಿಗಾರಿಕೆಯ ಕೆಲಸವನ್ನವಲಂಬಿಸಿ ಬದುಕುತ್ತಾರೆ ಒಂದು ಖುಷಿಯ ವಿಚಾರವೆಂದರೆ ಸಂಡೂರು ಮಲೆನಾಡಲ್ಲದಿದ್ದರೂ ಮಲೆನಾಡಿನ ಸೊಬಗನ್ನೇ ಹೋಲುವುದು ಸಂಭ್ರಮಾಶ್ಚರ್ಯವಾಗಿದೆ.

ಬರೀ ಬೆಟ್ಟಗುಡ್ಡಗಳಲ್ಲದೇ ಚಾಲುಕ್ಯರ ಕಾಲದ ಶ್ರೀ ಕುಮಾರಸ್ವಾಮಿ ಮತ್ತು ಪಾರ್ವತಿ ದೇವಾಲಯವಿರುವುದು ಇಲ್ಲಿನ ಚಾರಿತ್ರ್ಯಾರ್ಹ ಸಂಗತಿಗೆ ಹಿಡಿದ ಕನ್ನಡಿಯಾಗಿದೆ. ಈ ದೇವಾಲಯವು ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ್ದು ಕಟ್ಟಡ ನಿರ್ಮಾಣ ಶೈಲಿ ಆಕರ್ಷಕವಾಗಿದೆ. ದೇವಾಲಯದ ಮುಂದಿನ ಪುಷ್ಕರಣಿ ಮತ್ತು ಸಾಲಾಗಿ ಇರುವ ಈಶ್ವರ ಲಿಂಗಗಳು ಅಲ್ಲಿನ ದೈವಾಂಶದ ಸಾರವನ್ನು ತಿಳಿಸುತ್ತವೆ. ಶ್ರೀ ಗಂಡಿನರಸಿಂಹನರಸಿಂಹಸ್ವಾಮಿ ದೇವಾಲಯವು ಪುರಾತನವಾಗಿದ್ದು ಉಧ್ಭವಮೂರ್ತಿ ಇದ್ದು ಎತ್ತರದ ಪ್ರದೇಶದ ವೀಕ್ಷಣಾ ಸ್ಥಳದ ಸಮೀಪದಲ್ಲಿಯೇ ಇದೆ.

ಪಕ್ಕದಲ್ಲಿಯೇ ಮಾನಸ ಸರೋವರ ಎಂದು ಕರೆಯಲ್ಪಡುವ ನಾರಿಹಳ್ಳವು ಹರಿಯುತ್ತಿದ್ದು ಸಪ್ಪಳ ಬಲು ಮೋಹಕವಾಗಿ ಕರ್ಣಕುಂಡಲಗಳಿಗೆ ಕೇಳಸಿಗುತ್ತದೆ.ಗಂಡಿಮಲಿಯಮ್ಮ ದೇವಾಲಯ, ಶ್ರೀ ಹರಿಶಂಕರ ದೇವಾಲಯವಿದ್ದು ಇಲ್ಲಿರುವ ಬಸವ ಮೂರ್ತಿಯ ಬಾಯಿಂದ ವರ್ಷಪೂರ್ತಿ ನೀರು ಸುರಿಯುವ ವೈಶಿಷ್ಟ್ಯತೆ ಇದ್ದು ಹತ್ತಿರದಲ್ಲಿಯೇ ಶ್ರೀ ನವಿಲುಸ್ವಾಮಿ ದೇವಾಲಯವಿದ್ದು ಯಥೇಚ್ಛವಾಗಿ ಪುರಾಣ ಕೂಪಗಳು, ಕೊಳಗಳು ಕಾಣಸಿಗುತ್ತವೆ. ಸಂಡೂರು ಮತ್ತೊಂದು ವಿಶೇಷವೆಂದರೆ ಸುತ್ತಮುತ್ತಲೂ ಉಬ್ಬಲಗಂಡಿಯೊಳಗೊಂಡಂತೆ ಯಾಣಗಳು ಜಾಸ್ತಿ ಕಾಣ ಸಿಗುತ್ತವೆ ಚಾರಣದ ಅಭಿರುಚಿಗರಿಗೆ ಅತ್ಯದ್ಭುತ ತಾಣವಾಗಿದೆ ಎಂದು ಯುವ ಸಾಹಿತಿಯಾದ ಕೆ. ಶ್ರೀಧರ್ ( ಸಿರಿ) ಅವರು ಬಣ್ಣಿಸಿದ್ದಾರೆ.

 

LEAVE A REPLY

Please enter your comment!
Please enter your name here