ಬಳ್ಳಾರಿ: ನಾಳೆ ಸಂಜೆ 5 ಗಂಟೆಗೆ ಕುರುವಳ್ಳಿ ಎನ್‍ಕ್ಲೇವ್ ನಲ್ಲಿ ಪುನೀತ್ ಪುತ್ಥಳಿ ಅನಾವರಣ

0
1522

BP NEWS: ಬಳ್ಳಾರಿ: ಅಕ್ಟೋಬರ್.25: ವರನಟ ಡಾ.ರಾಜಕುಮಾರ್ ಅವರ ವರಪುತ್ರ, ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ನಗರದ ಶ್ರೀಧರಗಡ್ಡೆ ಗ್ರಾಮದ ರಸ್ತೆಯಲ್ಲಿ ಸ್ಥಾಪಿಸಲಾಗಿದ್ದು ನಾಳೆ ಸಂಜೆ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಆರ್‍ಆರ್ ಇನ್ಫ್ರಾ ಕನ್ಸ್ಟ್ರಕ್ಷನ್ ಸುನಿಲ್ ಕುಮಾರ್ ಇವರು ಪತ್ರಿಕಾಗೋಷ್ಠಿ ನಡೆಸಿ, ಗಂಧದ ಗುಡಿ ಬಿಡುಗಡೆಯಾಗುತ್ತಿರುವ ಈ ಶುಭ ಘಳಿಗೆ, ಮಹಾನವಮಿ ಮತ್ತು ದೀಪಾವಳಿ ಹಬ್ಬಗಳ ಸಂಭ್ರಮದ ನಡುವೆ ಪುನೀತ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಮಗೆಲ್ಲ ಹರ್ಷ ತಂದಿದೆ ಎಂದರು. ವಿಶಾಲವಾದ ಸ್ಥಳದಲ್ಲಿ ಪುನೀತ್ ಅವರ ಕುರಿತು ಜನರಲ್ಲಿ ಪ್ರೇರಣೆ ಮತ್ತು ಅನುಕರಣೆ ಮೂಡಲಿ ಎನ್ನುವ ಸದಾಶಯದಿಂದ ಪುನೀತ್ ಚಿತ್ರಪಟಗಳನ್ನೂ ಅಳವಡಿಸಲಾಗಿದ್ದು ಇದೊಂದು ಪವಿತ್ರ ತಾಣವಾಗಲಿದೆ. ಇದಕ್ಕಾಗಿ ಕಳೆದ ಹಲವಾರು ತಿಂಗಳುಗಳಿಂದ ಸಿದ್ಧತೆ ನಡೆಸಿದ್ದೇವೆ ಎಂದರು.


ಬೆಂಗಳೂರಿನ ಕುಶಲ ಕರ್ಮಿಗಳು ಸತತ 6 ತಿಂಗಳುಗಳ ಕಾಲ ಈ ಪುತ್ಥಳಿಯನ್ನು ನಿರ್ಮಾಣ ಮಾಡಿದ್ದು ಕೃಷ್ಣ ಶಿಲೆಯಲ್ಲಿ ಒಡಮೂಡಿದೆ. ಕುರುವಳ್ಳಿ ಎನ್‍ಕ್ಲೇವ್ ಆವರಣದಲ್ಲಿ ಪುನೀತ್ ಜೀವನಗಾಥೆ ಬಿಂಬಿಸುವ ಅನೇಕ ಭಾವಚಿತ್ರಗಳುಳ್ಳ ಈ ಆವರಣವು ನೋಡಲು ಸೋಜಿಗವೆನಿಸುತ್ತಿದ್ದು ನಾಳೆಯ ದಿನ ಸಚಿವ ಬಿ.ಶ್ರೀರಾಮುಲು ಹಾಗೂ ಜನಾರ್ಧನರೆಡ್ಡಿ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇದೀಗ ಗಂಧದ ಗುಡಿ ಚಿತ್ರ ಬಿಡುಗಡೆಯ ಸಮಯವಾದ್ದರಿಂದ ಪುನೀತ್ ಕುಟುಂಬದವರು ಬರುವುದು ಸಾದ್ಯವಿಲ್ಲ. ಈ ಕುರಿತಂತೆ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರೊಂದಿಗೆ ಮಾತನಾಡಿದ್ದೇವೆ. ಅವರಿಂದ ಪುನೀತ್ ಪುತ್ಥಳಿ ಅನಾವರಣಕ್ಕೆ ಅನುಮತಿ ದೊರೆತಿದೆ ಎಂದರು.


ಹೊಸಪೇಟೆಯಲ್ಲಿ ಈಗಾಗಲೇ ಪುನೀತ್ ಪುತ್ಥಳಿ ನಿರ್ಮಾಣಗೊಂಡಿದ್ದು ಜನತೆ ಮತ್ತು ಅಭಿಮಾನಿಗಳು ಅಪ್ಪು ಅವರನ್ನು ದೇವರ ಸ್ವರೂಪದಲ್ಲಿ ಪೂಜಿಸಿ, ಹಣ್ಣು, ಕಾಯಿ, ದೀಪ, ಧೂಪ ಹಾಗೂ ಹೂವುಗಳಿಂದ ಅಲಂಕರಿಸಿ ಆರಾಧಿಸುತ್ತಿರುವುದನ್ನು ಗಮನಿಸಿದ್ದೇವೆ. ಬಳ್ಳಾರಿಯಲ್ಲೂ ಪುನೀತ್ ಪುತ್ಥಳಿಯ ಸ್ಥಳ ದೇವಾಲಯ ಸ್ವರೂಪದಲ್ಲಿ ರೂಪುಗೊಂಡಿದ್ದು ಜನರು ದಿನದ ಯಾವ ಸಮಯದಲ್ಲಾದರೂ ಭೇಟಿ ನೀಡಿ ಪುನೀತ್ ಪುತ್ಥಳಿ ಬಳಿ ವಿರಮಿಸಬಹುದು. ನಾಳೆಯ ದಿನ ನಡೆವ ಕಾರ್ಯಕ್ರಮದಲ್ಲಿ ವಿದ್ಯುದ್ದೀಪಾಲಂಕಾರ ಮತ್ತು ಹೈದರಾಬಾದಿನ ಹಲವಾರು ಕಲಾ ತಂಡಗಳು ಮೆರುಗು ನೀಡಲಿರುವುದು ವಿಶೇಷವಾಗಿದ್ದು ಬಳ್ಳಾರಿಗರು ಪುನೀತ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾರಾಧನೆಯ ಸವಿಯನ್ನು ಆಸ್ವಾದಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಲಾಪೋಷಕರಾದ ಚಂದ್ರಶೇಖರ್ ಆಚಾರ್, ಶೇಖರ್, ಮಂಜುನಾಥ ಮತ್ತು ನಾಗರಾಜ ಕುರುವಳ್ಳಿ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here