ಬಳ್ಳಾರಿ: ರಾಜ್ಯ ಹಿಂದುಳಿದ ವರ್ಗಗಳ ಪ್ರಗತಿ ಪರಿಶೀಲನಾ ಸಭೆ

0
93

BP NEWS: ಬಳ್ಳಾರಿ: ಅಕ್ಟೋಬರ್.11: ಜಿಲ್ಲೆಯ ಹಿಂದುಳಿದ ವರ್ಗಗಳ ಎಲ್ಲಾ ವಿದ್ಯಾರ್ಥಿನಿಲಯಗಳಲ್ಲಿ ಜಿಲ್ಲಾ ಅಧಿಕಾರಿಗಳು, ವೈದ್ಯರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ಪ್ರದರ್ಶಿಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಹಾಗೂ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಕೆ.ಜಯಪ್ರಕಾಶ ಹೆಗ್ಡೆ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಹಮ್ಮಿಕೊಂಡಿದ್ದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು.


ವಸತಿನಿಲಯಗಳಲ್ಲಿ ಡಿಸಿ,ಎಸ್ಪಿ,ಎಡಿಸಿ,ಎಸಿ ಮತ್ತು ಪ್ರಮುಖ ವೈದ್ಯರ ಹಾಗೂ ನಿಲಯ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆಗಳನ್ನು ಸೂಚನಾ ಫಲಕಗಳಲ್ಲಿ ವಿದ್ಯಾರ್ಥಿಗಳಿಗೆ ಕಾಣುವಂತೆ ಆಳವಡಿಸಬೇಕು. ಕುಂದು ಕೊರತೆಗಳಿದ್ದಲ್ಲಿ ಮತ್ತು ಸಮಸ್ಯೆಗಳಿದ್ದಲ್ಲಿ ದೂರು ಸಲ್ಲಿಸಲು ಅನುಕೂಲವಾಗಲಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯ ಬಾಲಕರ ಬಾಲಮಂದಿರ 3, ಬಾಲಕಿಯರ ಬಾಲಮಂದಿರ 3 ಹಾಗೂ ಎಂಆರ್‍ಒ ಬಾಲಮಂದಿರ 3 ಇದ್ದು, 6ರಿಂದ 18ವರ್ಷದೊಳಗಿನ 127 ಮಕ್ಕಳು ಇದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ವಿಜಯಕುಮಾರ್ ಅವರು ಸಭೆಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ನಡೆಯುತ್ತಿದ್ದು, ಪ್ರತಿ ಗ್ರಾಮಪಂಚಾಯಿತಿಗಳ ಮೂಲಕ ಬಾಲ್ಯವಿವಾಹದ ಬಗ್ಗೆ ಅರಿವು-ಜಾಗೃತಿ ಮೂಡಿಸಬೇಕು ಮತ್ತು ಮಕ್ಕಳ ಸ್ನೇಹಿ ಕಾರ್ಯಕ್ರಮ ಮಾಡಬೇಕು ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಬಳ್ಳಾರಿ, ಕುರುಗೋಡು, ಕಂಪ್ಲಿ, ಸಂಡೂರು, ಸಿರುಗುಪ್ಪ ತಾಲೂಕುಗಳು ಸೇರಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳು 22, ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು 27 ಸೇರಿದಂತೆ ಒಟ್ಟು 49 ವಿದ್ಯಾರ್ಥಿನಿಲಯಗಳಿವೆ. ಅದರಲ್ಲಿ 14 ವಿದ್ಯಾರ್ಥಿನಿಲಯಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುರೇಶ್ ಅವರು ಸಭೆಯಲ್ಲಿ ತಿಳಿಸಿದರು.
ಈ ವೇಳೆ ಅಧ್ಯಕ್ಷರು ಮಾತನಾಡಿ, ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾಥಿ ನಿಲಯಗಳು ಮೂಲಭೂತ ಸೌಕರ್ಯಗಳಿಂದ ಕೂಡಿರಬೇಕು. ಅಗತ್ಯಕ್ಕೆ ತಕ್ಕಂತೆ ಶೌಚಾಲಯ, ಸ್ನಾನದ ಗೃಹಗಳು, ಗಾಳಿ-ಬೆಳಕು ವ್ಯವಸ್ಥೆ ಇರಬೇಕು ಎಂದರು.
ಜೊತೆಗೆ ಪ್ರತಿಯೊಂದು ವಸತಿನಿಲಯಗಳಲ್ಲಿ ಗ್ರಂಥಾಲಯಗಳನ್ನು ನಿರ್ಮಿಸಬೇಕು ಹಾಗೂ ಅದರಲ್ಲಿ ಹಿಂದಿನ ವರ್ಷಗಳ ಹಾಗೂ ಪ್ರಸ್ತಕ ಸಾಲಿನ ಪುಸ್ತಕಗಳು ಮತ್ತು ಪ್ರಶ್ನೆ-ಪತ್ರಿಕೆಗಳು ಶೇಖರಣೆ ಮಾಡಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಲಿದೆ ಎಂದು ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ ಹೆಗ್ಡೆ ಅವರು ಹೇಳಿದರು.


ಹಿಂದುಳಿದ ವರ್ಗಗಳಿಗೆ ಜಾತಿ ಪ್ರಮಾಣ ಪತ್ರ ವಿತರಣೆಯಲ್ಲಿ ಯಾವುದೇ ರೀತಿಯ ತೊಂದರೆಗಳಾಗುತ್ತಿವೆಯೇ? ಎಂದು ವಿಚಾರಿಸಿದ ಅವರು, ಅಂತಹ ಸಮಸ್ಯೆಗಳಿದ್ದಲ್ಲಿ ಆಯೋಗಕ್ಕೆ ಮನವಿ ಸಲ್ಲಿಸಬೇಕು ಹಾಗೂ ಹಿಂದುಳಿದ ವರ್ಗಗಳಲ್ಲಿ ಅಂತರ್ಜಾತಿ ವಿವಾಹವಾಗಿದ್ದಲ್ಲಿ ತಂದೆಯ ಜಾತಿ ಯಾವುದು ಇರುತ್ತದೆಯೋ, ಪತ್ನಿಗೆ ಅದೇ ಜಾತಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ದೇವರಾಜು ಅರಸು ಹಿಂದುಳಿದ ವರ್ಗಗಳಲ್ಲಿ ಅಭಿವೃದ್ಧಿ ನಿಗಮಗಳ 11 ಅಭಿವೃದ್ಧಿ ನಿಗಮಗಳ ಮೂಲಕ ಜನರು ಆರ್ಥಿಕ ಮತ್ತು ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಸಾಲ ಸೌಲಭ್ಯ, ಹಿಂದುಳಿದ ವರ್ಗಗಳಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು ಹಾಗೂ ಸ್ವಯಂ ಉದ್ಯೋಗಕ್ಕೆ ವೃತ್ತಿ ಕುಶಲತೆ ಅಭಿವೃದ್ಧಿಗಾಗಿ ಕೌಶಲ್ಯತೆ ಹೆಚ್ಚಿಸುವ ತರಬೇತಿ ನೀಡುವ ಕುರಿತು ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಸಭೆಯಲ್ಲಿ ವಿವರಿಸಿದರು.
ನಂತರದಲ್ಲಿ ಹಿಂದುಳಿದ ವರ್ಗಗಳ ಸಮುದಾಯವರು ಹಾಗೂ ಪಂಚಮಸಾಲಿ ಸಮುದಾಯದವರಿಂದ ಮನವಿ ಪತ್ರಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಶಾರದ ನಾಯ್ಕ, ಅರುಣ್‍ಕುಮಾರ್, ಕಲ್ಯಾಣ ಕುಮಾರ್, ರಾಜಶೇಖರ್, ಸುವರ್ಣ, ಸಹಾಯಕ ಆಯುಕ್ತರಾದ ಡಾ.ಆಕಾಶ ಶಂಕರ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here