BP NEWS: ಬಳ್ಳಾರಿ: ಸೆಪ್ಟೆಂಬರ್.20: ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಮಾಹಿತಿಯನ್ನು ಪಡೆದುಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ಧನ್ ವಿನಂತಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಶಿಕ್ಷಣಕೋಶ ನಿರ್ದೇಶನಾಲಯ ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರದಂದು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಮತ್ತು ಯೋಜನೆಗಳ ಜನಜಾಗೃತಿಗಾಗಿ ಜಿಲ್ಲೆಯಲ್ಲಿ ವಿವಿಧೆಡೆ ಸಂಚರಿಸುವ ವೀಡಿಯೋ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ವಿಶೇಷ ಅನುದಾನ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಎಲ್ಲಾ ಆರೋಗ್ಯ ಕಾರ್ಯಕ್ರಮಗಳು ಮತ್ತು ಯೋಜನೆಗಳ ಮಾಹಿತಿಯನ್ನು ಜನರಿಗೆ ಮುಟ್ಟಿಸಲು ವಿಭಿನ್ನವಾದ ಪ್ರಯತ್ನವನ್ನು ಮಾಡುತ್ತಿದೆ. ಈ ದಿಸೆಯಲ್ಲಿ ವೀಡಿಯೋ ವಾಹನದ ಮೂಲಕ ಕ್ಷಯರೋಗ, ತಾಯಿ ಮಗುವಿನ ಆರೈಕೆ, ಕುಷ್ಠರೋಗ ಮುಂತಾದವುಗಳ ಕುರಿತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕ್ಷಯಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಎರಡು ವಾರಕ್ಕಿಂತ ಹೆಚ್ಚು ದಿನಗಳ ಕೆಮ್ಮು ಇರುವ ವ್ಯಕ್ತಿಗಳು ಪರೀಕ್ಷೆ ಮಾಡಿಸಲು, ನವಜಾತ ಶಿಶುವಿನ ಆರೈಕೆಗಾಗಿ ಕಾಂಗರೂ ವಿಧಾನ ಹಾಗೂ ತೂಕ ಕಡಿಮೆ ಇರುವ ಮಕ್ಕಳಿಗೆ ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರಗಳಲ್ಲಿ ದಾಖಲಾತಿ ಮಾಡಿಕೊಳ್ಳಲು ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.
ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಗಟ್ಟಲು ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು, ನೀರಿನ ತಾಣಗಳನ್ನು ವಾರದಲ್ಲಿ ಒಮ್ಮೆ ಖಾಲಿ ಮಾಡುವುದು ಮತ್ತು ಯಾರಿಗಾದರೂ ಸ್ಪರ್ಶ ಜ್ಞಾನವಿಲ್ಲದ ತಿಳಿಬಳಿ ತಾಮ್ರ ವರ್ಣದ ಮಚ್ಚೆಗಳು ಕಂಡುಬಂದಲ್ಲಿ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಂಡು ಕುಷ್ಠರೋಗ ನಿರ್ಮೂಲನೆಗೆ ಸಹಕರಿಸಬೇಕು ಎಂದು ತಿಳಿಸಿದರು.
ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷೆ ಹಾಗೂ ಕುಟುಂಬ ಕಲ್ಯಾಣ ವಿಧಾನಗಳನ್ನು ಅನುಸರಿಸಿ ಚಿಕ್ಕ ಕುಟುಂಬ ಹೊಂದಲು ಅಗತ್ಯವಿರುವ ಮಾಹಿತಿಯನ್ನು ಪಡೆದುಕೊಳ್ಳಲು ಜಾಗೃತಿ ವಾಹನದ ಮೂಲಕ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ವಿನಂತಿಸಿದರು.
ಜಾಗೃತಿ ಮೂಡಿಸುವ ವಾಹನವು ಇಂದಿನಿಂದÀ 12 ದಿನಗಳ ಕಾಲ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಸಂಡೂರು, ಕಂಪ್ಲಿ, ಸಿರುಗುಪ್ಪ, ಕುರುಗೋಡು ತಾಲ್ಲೂಕಿನ ತಲಾ 15 ಗ್ರಾಮಗಳಂತೆ ಒಟ್ಟು 60 ಗ್ರಾಮಗಳಲ್ಲಿ ಜನಜಾಗೃತಿ ಮೂಡಿಸಲು ಸಂಚರಿಸುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಎನ್.ಬಸರೆಡ್ಡಿ, ಜಿಲ್ಲಾ ಮಲೇರಿಯಾ ನಿರ್ಮೂಲನಾ ಅಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಆರ್. ಅನಿಲ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ವೀರೇಂದ್ರಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಆಡಳಿತ ಅಧಿಕಾರಿ ಮೆಹಬೂಬ್ ಖಾನ್, ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಮೋಹನಕುಮಾರಿ, ಡಾ.ಈರಣ್ಣ, ಡಾ.ಕುಶಾಲ್, ಡಾ.ರಾಧಿಕಾ, ಡಾ.ಶ್ರೀಕರ್, ಡಾ.ದೇವರಾಜ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ, ಡಿಎನ್‍ಒ ಗಿರೀಶ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಹಾಜರಿದ್ದರು.