ಹಿರಿಯ ಕಲಾವಿದ ಕೆ ಮೌನಾಚಾರಿ ಅವರಿಗೆ ಸಂದ ಅಕಾಡೆಮಿ ಪ್ರಶಸ್ತಿ.

0
132

BP NEWS: ಬಳ್ಳಾರಿ: ಸಪ್ಟೆಂಬರ್.19:  ಬಳ್ಳಾರಿ ಜಿಲ್ಲಾ ಸಂಡೂರು ತಾಲೂಕಿನ ಲಕ್ಷ್ಮಿಪುರ ಗ್ರಾಮದ ಕಲಾವಿದ ಕೆ ಮೌನಾ ಚಾರಿ ಅವರಿಗೆ 2022ನೇ ಸಾಲಿನ ಬಯಲಾಟ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕೃಷಿಕ ಕುಟುಂಬದಲ್ಲಿ ಜನಿಸಿದ ಮೌನಾಚಾರಿ ಅವರು ಬಯಲಾಟ, ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ವಿಭಿನ್ನ ಪಾತ್ರಗಳನ್ನು ಅಭಿನಯಿಸಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಬಹುಮುಖ ವ್ಯಕ್ತಿತ್ವ ಹೊಂದಿದ ಮೌನ ಚಾರಿ ಅವರು ಸ್ವತಃ ಬಯಲಾಟ ಕಲಾವಿದರಲ್ಲದೆ, ಬಯಲಾಟ ಮಾಸ್ಟರ್ ಆಗಿ ಕಲಿಸಿದ ಬಯಲಾಟಗಳು 300ಕ್ಕೂ ಅಧಿಕ. ಬಯಲಾಟದಲ್ಲಿ ದ್ರೌಪದಿ, ಭಾನುಮತಿ, ಕೈಕೆ ಮುಂತಾದ ಸ್ತ್ರೀ ಪಾತ್ರಗಳನ್ನು ಅಭಿನಯಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ. ಮಣ್ಣಿನ, ಕಾಸ್ಟ ಹಾಗೂ ಕಲ್ಲಿನ ಮೂರ್ತಿಗಳನ್ನು ಮೌನಾ ಚಾರಿಯವರು ತಯಾರಿಸಬಲ್ಲರು, ಅಲ್ಲದೆ ಪುರಾಣ ಪ್ರವಚನವನ್ನು ಇವರು ನಡೆಸಿಕೊಡುತ್ತಾರೆ.

ಲಕ್ಷ್ಮಿಪುರದ ಎಂ ಕುಮಾರಸ್ವಾಮಿಯವರಿಂದ ಹಾರ್ಮೋನಿಯಂ, ಸಂಗೀತ ಕಲಿತ ಇವರು ಭಜನೆ ಮಾಡುವುದರ ಮೂಲಕ ಹಾರ್ಮೋನಿಯಂ ನುಡಿಸಲು ಪ್ರಾರಂಭಿಸಿದರು. ಪಾಂಡು ವಿಜಯ, ಪಾರ್ಥ ವಿಜಯ, ಗಿರಿಜಾ ಕಲ್ಯಾಣ, ರತಿ ಕಲ್ಯಾಣ, ಸುಂದೋಪ ಸುಂದರ, ಭೀಮ ಪ್ರತಿಜ್ಞೆ ಮುಂತಾದ ಬಯಲಾಟಗಳನ್ನು ಬಳ್ಳಾರಿ ಜಿಲ್ಲೆಯ ವಿವಿಧಡೆ ನಿರ್ದೇಶಿಸಿ, ಕಲಿಸಿ ಪ್ರದರ್ಶನ ಗೊಳ್ಳುವಂತೆ ಮಾಡಿದ್ದಾರೆ.
ಬಳ್ಳಾರಿಯ ಜನಪ್ರಿಯ ಸುದ್ದಿ ವಾಹಿನಿಯಾದ ಬಿ ಪಿ ನ್ಯೂಸ್ ಅವರು ಪ್ರತಿ ವರ್ಷ ಕೊಡ ಮಾಡುವ ಪ್ರತಿಷ್ಠಿತ ಪ್ರಶಸ್ತಿಯಾದ *ಕಲಾಚರಕ* ಪ್ರಶಸ್ತಿಗೂ ಕೂಡ ಮೌನಾಚಾರಿ ಅವರು ಭಾಜನರಾಗಿದ್ದು ವಿಶೇಷ.

45 ವರ್ಷಗಳಿಂದ ಬಯಲಾಟ ಕಲೆಗಾಗಿ ಸಲ್ಲಿಸಿದ ಸೇವೆಗೆ ಪ್ರತಿಫಲ ದೊರೆತಂತಾಗಿದೆ. ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿದ್ದವು ಆದರೆ ಈಗ ಕರ್ನಾಟಕ ಬಯಲಾಟ ಅಕಾಡೆಮಿಯಿಂದ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ ಎಂದು ಮೌನಾಚಾರಿ ಅವರು ಬಿ ಪಿ ನ್ಯೂಸ್ ಗೆ ತಿಳಿಸಿದರು.

LEAVE A REPLY

Please enter your comment!
Please enter your name here