ಜಾಗೃತಿ ನಗರದಲ್ಲಿ ಸೆರೆ ಸಿಕ್ಕ ಮೊಸಳೆ

0
328

ಬಳ್ಳಾರಿ,ಸೆ.13-ಇಲ್ಲಿನ ಜಾಗೃತಿ ನಗರದ ಜಲಮೂಲದಲ್ಲಿ ಕಾಣಿಸಿಕೊಂಡಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಇಂದು ಸೆರೆ ಹಿಡಿದು ಬೇರೆಡೆ ರವಾನಿಸಿದ್ದಾರೆ.
ಕಳೆದ ಒಂದು ವಾರದಿಂದ ಜಾಗೃತಿ ನಗರದ ಜನರಲ್ಲಿ ಆತಂಕವನ್ನುಂಟು ಮಾಡಿದ್ದ ಮೊಸಳೆಯನ್ನು ಸತತ ನಾಲ್ಕು ದಿನಗಳ ಪ್ರಯತ್ನದ ಫಲವಾಗಿ ಸಿಬ್ಬಂದಿಗಳು ಸೆರೆ ಹಿಡಿದಿದ್ದು ಇದೀಗ ಜಾಗೃತಿ ನಗರ, ಭಟ್ಟಿ ಏರಿಯಾ ಮತ್ತು ಶಿಕ್ಷಕರ ಕಾಲೋನಿಯ ನಿವಾಸಿಗಳು ನಿರಾಂತಕಗೊಂಡಿದ್ದು ಅರಣ್ಯ ಇಲಾಖೆಯ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.


ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಜಾಗೃತಿ ನಗರ, ಭಟ್ಟಿ ಪ್ರದೇಶ ಮತ್ತು ಟೀಚರ್ಸ್ ಕಾಲೋನಿಯ ಬಳಿಯ ಖಾಲಿ ನಿವೇಶನದಲ್ಲಿ ವಿಪರೀತ ಪ್ರಮಾಣದ ನೀರು ಸಂಗ್ರಹಗೊಂಡಿತ್ತು. ಈ ಪ್ರದೇಶದಲ್ಲಿ ಮೊಸಳೆ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಈ ಕುರಿತು ಬಿಸಿಲೂರು ಪೋಸ್ಟ್ ಪತ್ರಿಕೆ ವರದಿ ಮಾಡಿ ಅಧಿಕಾರಿಗಳ ಗಮನ ಸೆಳೆದಿತ್ತು. ಅಧಿಕಾರಿಗಳೂ ಸಹ ಸಿಬ್ಬಂದಿಗಳು ಹಾಗೂ ಮೊಸಳೆ ಹಿಡಿಯುವ ಬೇಲಿಯ ಜೊತೆ ಸತತ ಪ್ರಯತ್ನ ನಡೆಸಿದ್ದರು.


ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಹಿಂದೂರಾವ್ ಸೂರ್ಯವಂಶಿ ಅವರ ಮಾರ್ಗದರ್ಶನದಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಮೊಸಳೆ ಹಿಡಿಯುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ವಲಯ ಅರಣ್ಯ ರಕ್ಷಣಾಧಿಕಾರಿ ರಾಘವೇಂದ್ರಯ್ಯ ಆರ್.ಎಚ್. ಅವರ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಸಿಬ್ಬಂದಿಗಳು ಮೊಸಳೆ ಹಿಡಿಯುವ ಪ್ರಯತ್ನ ನಡೆಸಿದ್ದರು. ಕೊನೆಗೂ ಇಂದು ಮೊಸಳೆ ಹಿಡಿಯುವಲ್ಲಿ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳ ಸೂಚನೆಯ ಮೇರೆಗೆ ಸೆರೆ ಹಿಡಿದ ಮೊಸಳೆಯನ್ನು ಇದೀಗ ಬೇರೆಡೆ ರವಾನಿಸಲಾಗಿದೆ. .
——-

LEAVE A REPLY

Please enter your comment!
Please enter your name here