ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರಿಂದ ಪೈಪ್ ಲೈನ್ ಕಾಮಗಾರಿಗೆ ಭೂಮಿ ಪೂಜೆ

0
185

ಬಳ್ಳಾರಿ,ಸೆ.10-ಕಳೆದ 6 ದಶಕದ ಹಿಂದೆ ಕುಡಿಯುವ ನೀರಿಗಾಗಿ ಅಳವಡಿಸಿದ್ದ ಪೈಪ್ ಇದೀಗ ಬೇರ್ಪಡಿಸಿ ಪರ್ಯಾಯ ಪೈಪ್ ಲೈನ್ ಅಳವಡಿಸಲು ನಿರ್ಧರಿಸಿದ್ದು ಇಂದು ಮಹಾನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.


ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಮತ್ತು ಬಳ್ಳಾರಿ ಮಹಾನಗರ ಪಾಲಿಕೆ ಸಹಯೋಗದಲ್ಲಿ ನಗರದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದಿಂದ ಎನ್.ವೈ.ಹನುಮಂತಪ್ಪ ಮನೆಯವರೆಗೆ ಸುಮಾರು 450 ಎಂ.ಎಂ. ವ್ಯಾಸದ ಎಂಎಸ್.ಪೈಪ್ ಲೈನ್ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು. ಇದೀಗ ಮಳೆ ಇರುವುದರಿಂದ ಮಳೆಯ ವಸ್ತುಸ್ಥಿತಿ ಗಮನಿಸಿ ಕೂಡಲೇ ಕಾಮಗಾರಿ ಆರಂಭಿಸಲಾಗುತ್ತಿದೆ. ಒಂದು ತಿಂಗಳೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ. ನಾಗರಿಕರು ಸಹಕರಿಸಬೇಕೆಂದು ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ ಅವರು ಮನವಿ ಮಾಡಿದರು.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 20ನೇ ವಾರ್ಡಿನ ಗಾಂಧಿನಗರ ಮುಖ್ಯ ರಸ್ತೆಯಲ್ಲಿ ಭೂಮಿ ಪೂಜೆ ನೆರವೇರಿಸಲಾಗಿದೆ. ಮಹಾನಗರ ಪಾಲಿಕೆಯ 18ನೇ ಹಣಕಾಸಿನ ಯೋಜನೆಯಡಿ ಸುಮಾರು 82 ಲಕ್ಷ ರೂ.ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. 1962ರ ಅವಧಿಯಲ್ಲಿ ಅಳವಡಿಸಲಾಗಿದ್ದ ಪೈಪ್ ದುರಸ್ತಿಯಾಗದೇ ಕುಡಿಯುವ ನೀರು ಪೂರೈಸಲು ಅಡಚಣೆ ಉಂಟಾಗಿತ್ತು. ಈ ಕಾರಣಕ್ಕಾಗಿ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

ಕುಣಿ ಬಿದ್ದ ರಸ್ತೆಗಳ ದುರಸ್ತಿ:

ನಗರದಲ್ಲಿ ಹಲವಾರು ರಸ್ತೆಗಳಲ್ಲಿ ಕುಣಿ ಬಿದ್ದಿದೆ. ಪ್ರಮುಖ ರಸ್ತೆಗಳ ಕುಣಿ ಮುಚ್ಚಿಸಲು ರೂ.28 ಲಕ್ಷ ಅನುದಾನದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಮಳೆ ಬಂದಿರುವದರಿಂದ ಈ ಸಮಸ್ಯೆ ಉಲ್ಬಣಗೊಂಡಿದೆ. ನಗರದ 10ನೇ ವಾರ್ಡಿನಲ್ಲಿ 2 ಮನೆಗಳು ಕುಸಿದಿವೆ. ಈ ಬಗ್ಗೆ ಅಧಿಕಾರಿಗಳು ನಗರದಲ್ಲಿ ಸರ್ವೆಕಾರ್ಯ ನಡೆಸಿ ವರದಿ ನೀಡಲಿದ್ದಾರೆ. ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಪರಿಹಾರ ಕಾರ್ಯ ಆರಂಭಿಸಲಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ನಗರದ ಜನಜೀವನ ಸಹಜಸ್ಥಿತಿಗೆ ಬರಲಿದೆ. ಮಳೆ ಬಂದಿರುವುದರಿಂದ ಎಲ್ಲರಿಗೂ ಸಮಸ್ಯೆಯಿದೆ. ಮೂರ್ನಾಲ್ಕು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದರು.

ಟವರ್ ಕ್ಲಾಕ್ ಕಾಮಗಾರಿ ಮುಂದುವರಿಲಿದೆ:

ನಗರದ ಹೃದಯ ಭಾಗದಲ್ಲಿರುವ ಟವರ್ ಕ್ಲಾಕ್ ನಿರ್ಮಿಸುವುದು ಬಳ್ಳಾರಿ ನಾಗರಿಕರ ಕನಸಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಹೆದ್ದಾರಿ ಪ್ರಾಧಿಕಾರದ ಸಭೆ ನಡೆಸಿ ಎಲ್ಲರ ಅನುಮತಿ ಮೇರೆಗೆ ಟವರ್ ಕ್ಲಾಕ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಟವರ್ ಕ್ಲಾಕ್ ಅಭಿವೃದ್ಧಿ ಕಾರ್ಯ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. ಇದೀಗ ನಾಗರಿಕರಿಗೆ ರಾಯಲ್ ವೃತ್ತದಲ್ಲಿ ಸಂಚರಿಸಲು ಕೊಂಚ ತೊಂದರೆಯಾಗಬಹುದು. ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಸರ್ವೇಸಾಮಾನ್ಯವಾಗಿ ಕೆಲವು ತೊಂದರೆಗಳು ಬರುತ್ತವೆ. ನಾಗರಿಕರು ಅಭಿವೃದ್ಧಿಯ ವಿಷಯದಲ್ಲಿ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ರಸ್ತೆ ಅಗಲೀಕರಣದ ಯೋಜನೆಯೂ ಮುಂದುವರಿಯುತ್ತಿದೆ ಎಂದರು.


ಈ ಸಂದರ್ಭದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಾರುತಿ ಪ್ರಸಾದ್ ಎಸ್., ಮಹಾನಗರ ಪಾಲಿಕೆಯ ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯುಡು, ಸದಸ್ಯರಾದ ಸುರೇಖಾ ಮಲ್ಲನಗೌಡ, ಶ್ರೀನಿವಾಸ್ ಮೋತ್ಕರ್, ಕೆ.ಹನುಮಂತಪ್ಪ, ಗುಡಿಗಂಟಿ ಹನುಮಂತ, ಕೆಎಂಎಫ್ ನ ನಿರ್ದೇಶಕರು ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ವೀರಶೇಖರರೆಡ್ಡಿ, ಮುಖಂಡರಾದ ಕೆ.ವೇಮಣ್ಣ, ಎಸ್.ಮಲ್ಲನಗೌಡ, ವೆಂಕಟರಾಮಿರೆಡ್ಡಿ, ಸೂರಿ, ಸೊಂತ ಗಿರಿಧರ್, ಡಾ.ಟಿ.ಜಿ.ವಿಠಲ್, ಮುತ್ಯಾಲ ರಮೇಶ್, ವೇಣು, ಎಸ್‍ಜಿಟಿ ಕಾಲೇಜಿನ ಪ್ರಾಚಾರ್ಯ ನಾಗರಾಜ, ಎರಿಸ್ವಾಮಿ, ಗೋಪಾಲ್, ರಾಮಾಂಜಿನಿ, ಲೋಕೇಶ್, ಡಾ.ಅರವಿಂದ ಪಟೇಲ್ ಇನ್ನಿತರರು ಇದ್ದರು.
——

 

LEAVE A REPLY

Please enter your comment!
Please enter your name here