ಬಳ್ಳಾರಿ: ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭ

0
322

BP NEWS: ಬಳ್ಳಾರಿ: ಸೆಪ್ಟೆಂಬರ್.05: ಒಂದು ದೇಶ ಪ್ರಗತಿ ಹೊಂದಬೇಕಾದರೆ ಅಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ. ದೇಶದ ನಿರ್ಮಾಣ ಹಾಗೂ ವಿನಾಶ ಮಾಡುವ ಎರಡೂ ಶಕ್ತಿ ಶಿಕ್ಷಕರಿಗೆ ಇದೆ. ಉತ್ತಮ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.
ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ಬೆಂಗಳೂರು ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗೃಹರಕ್ಷಕದಳದ ಕಚೇರಿ ಪಕ್ಕದಲ್ಲಿನ ಗುರು ಭವನದ ಆವರಣದಲ್ಲಿ ಸೋಮವಾರದಂದು ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ 134ನೇ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಭಾರತದ ಮಹಾ ಶಿಕ್ಷಣತಜ್ಞ, ಮೊದಲ ಉಪರಾಷ್ಟ್ರಪತಿ, 2ನೇ ರಾಷ್ಟ್ರಪತಿ ಹಾಗೂ ಉತ್ತಮ ಶಿಕ್ಷಕರಾದ ಸರ್ವಪಲ್ಲಿ ರಾಧಾಕೃಷ್ಣನ್‍ರವರ 134 ಜನ್ಮದಿನಾಚರಣೆಯ ಅಂಗವಾಗಿ ಸೆ.05ರಂದು “ಶಿಕ್ಷಕರ ದಿನಾಚರಣೆ”ಯನ್ನು ಆಚಸುತ್ತಿದೇವೆ ಎಂದು ತಿಳಿಸಿದರು.
ಸಮಾಜಕ್ಕೆ ಆದರ್ಶ ವ್ಯಕ್ತಿಗಳನ್ನು ರೂಪುಗೊಳಿಸುವ ಹೊಣೆಯೂ ಶಿಕ್ಷಕರ ಮೇಲಿರುತ್ತದೆ. ನಮ್ಮ ಜೀವನದಲ್ಲಿ ನೋವು-ನಲಿವು, ಸುಖ-ದುಃಖ, ಕಷ್ಟ-ಸುಖ ಎಲ್ಲವೂ ಇದೆ. ಇಂತಹ ಜೀವನದಲ್ಲಿ ಭದ್ರ ಬುನಾದಿ ಹಾಕುವವರೇ ಶಿಕ್ಷಕರು ಎಂದು ಅಭಿಪ್ರಾಯ ಪಟ್ಟರು.


ಒಬ್ಬ ಉತ್ತಮ ಶಿಕ್ಷಕ ವಿದ್ಯಾರ್ಥಿಗಳಲ್ಲಿ ಕನಸುಗಳನ್ನು ಬಿತ್ತಬೇಕು, ಬಿತ್ತಿದ ಬೀಜ ಮೊಳೆಯಲು, ಬೆಳೆಯಲು, ಫಲ ದೊರೆಯುವಂತಾಗಲು ಗುರುವಾದವನು ಪ್ರೇರಣೆ ನೀಡಬೇಕು ಅಂತಹ ಗುರುಗಳು ಶಿಕ್ಷಕರಾಗಬೇಕು ಎಂದು ಹೇಳಿದರು.
ಶಿಕ್ಷಕರೇ ನಮ್ಮ ದೇಶದ ಭವಿಷ್ಯದ ಶಿಲ್ಪಿಗಳು, ಏಕೆಂದರೆ ವಿಜ್ಞಾನಿಗಳನ್ನೂ, ತಂತ್ರಜ್ಞರನ್ನೂ, ವೈದ್ಯರನ್ನು, ಸಾಹಿತಿಗಳನ್ನು, ಚಿಂತಕರನ್ನು, ರಾಜಕಾರಣಿಗಳನ್ನೂ ರೂಪಿಸುವ ಶಕ್ತಿ ಇರುವುದು ಶಿಕ್ಷಕರಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು-ಶಿಕ್ಷಣ ಬೆಟ್ಟದಂತೆ ಎಂದಿಗೂ ನಮ್ಮ ಮುಂದೆ ಭಾಗುವುದಿಲ್ಲ. ಆದರೆ ಕಷ್ಟಪಟ್ಟು ಶಿಕ್ಷಣದ ಮೆಟ್ಟಿಲನ್ನು ಏರಿದರೆ ಅದು ನಮ್ಮ ಪಾದ ಕೆಳಗೆ ಇರುತ್ತದೆ ಹಾಗೂ ರಾಜನಾಗುವ ಹಾದಿ ತೋರುತ್ತದೆ ಎಂದು ಅವರು ಹೇಳಿದ್ದಾರೆ.


ಭಾರತ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಯಲ್ಲಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ, ಡಾ. ಸರ್ವಪಲ್ಲಿ ರಾಧಾಕೃಷ್ಣನ್, ಪ್ರಸ್ತುತ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಮುಂತಾದವರು ಮೂಲತಃ ಶಿಕ್ಷಕರಾಗಿದ್ದರು ಎಂಬುದನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು.
ಕೋವಿಡ್-19 ಎಂಬ ಮಹಾಮಾರಿ ಜಗತ್ತನ್ನೇ ತಲ್ಲಣಿಸುತ್ತಿರುವ ಸಂದರ್ಭದಲ್ಲಿ ಮಕ್ಕಳ ಶಿಕ್ಷಣದ ಮೇಲೆ ಹೆಚ್ಚು ಪ್ರಭಾವ ಬೀರಿತು. ಆ ಸಂದರ್ಭದಲ್ಲಿ ಶಿಕ್ಷಕರು ಆನ್‍ಲೈನ್‍ನಲ್ಲಿ ಪಾಠ ಮಾಡುವ ಸಂದರ್ಭ ಬಂದೊದಗಿತು. ಕೊರೋನಾ ಸಂದರ್ಭದಲ್ಲಿ ಆನ್‍ಲೈನ್ ತರಗತಿ ಬಿಟ್ಟು ಬೇರೆ ಮಾರ್ಗವಿರಲಿಲ್ಲ. ಆದರೂ ಶಿಕ್ಷಕರೆಲ್ಲರೂ ತಮ್ಮ-ತಮ್ಮ ಕರ್ತವ್ಯವನ್ನು ನಿಭಾಯಿಸಿದರು ಎಂದು ತಿಳಿಸಿದರು.


ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಮ್ಮ ದೇಶದಲ್ಲಿ ಶಿಕ್ಷಕರ ವೃತ್ತಿಗೆ ಹೆಚ್ಚು ಮನ್ನಣೆ ಕೊಡುವ ನಿಟ್ಟಿನಲ್ಲಿ ಶ್ರಮ ವಹಿಸುತ್ತಿದ್ದಾರೆ. ಆದ್ದರಿಂದ ಸಮಗ್ರ ಶಿಕ್ಷಣ ನೀತಿ ರೂಪಿಸಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದರು ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ: ಶಿಕ್ಷಣವು ಸಮಾನತೆಯನ್ನೂ ಉನ್ನತೀಕರಿಸುವ ಒಂದು ಅಂಶ.ಆರ್ಥಿಕ ಮತ್ತು ಸಾಮಾಜಿಕ ಚಲನಶೀಲತೆ, ಸಮಗ್ರತೆ ಹಾಗೂ ಸಮಾನತೆಯನ್ನು ಸಾಧಿಸುವ ಒಂದು ಅತ್ಯುತ್ತಮ ಸಾಧನವಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರವೇಶ, ಸಮಾನತೆ, ಗುಣಮಟ್ಟ,
ಕೈಗೆಟುಕುವಿಕೆ ಮತ್ತು ಹೊಣೆಗಾರಿಕೆ ಎಂಬ ಬುನಾದಿಯ ಮೇಲೆ ನಿಂತಿದೆ. ಆದ್ದರಿಂದ ಕೇಂದ್ರ ಸರ್ಕಾರವು ಈ ನೀತಿಯನ್ನು ಜಾರಿಗೊಳಿಸಿದೆ ಎಂದು ಹೇಳಿದರು.
ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಣ ಮಾಡುವುದು ಮತ್ತು ಅದನ್ನು ಜಾಗತೀಕ ಮಟ್ಟಕ್ಕೆ ಉನ್ನತೀಕರಿಸುವುದು.
ಮಕ್ಕಳು ಅಭಿವೃದ್ಧಿ ಹೊಂದುವುದನ್ನೂ ಖಾತ್ರಿಪಡಿಸಿಕೊಳ್ಳಲು ಶೈಕ್ಷಣಿಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಅಗತ್ಯವಿರುವುದರಿಂದ ಇಂದಿನ ರಾಷ್ಟ್ರೀಯ ಶಿಕ್ಷಣ ನೀತಿ ಸಹಾಯ ಮಾಡುತ್ತದೆ ಎಂದು ತಿಳಿಸಿಕೊಟ್ಟರು.
ಸರ್ಕಾರದಿಂದ ಶಿಕ್ಷಕರಿಗೆ ನೆರವು: ಶಿಕ್ಷಕರಿಗೆ ಹಾಗೂ ಅವರ ಕುಟುಂಬಕ್ಕೆ ಸರ್ಕಾರವು ನೆರವನ್ನು ನೀಡುತ್ತಿದೆ. ಅದರಲ್ಲಿ ವೈದ್ಯಕೀಯ ಧನ ಸಹಾಯ, ಮೃತ ಹೊಂದಿದ ಶಿಕ್ಷಕರ ಕುಟುಂಬಕ್ಕೆ ಧನ ಸಹಾಯ, ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನ ಸಹಾಯ, ಪ್ರತಿಭಾ ವಿದ್ಯಾರ್ಥಿ ವೇತನ, ಲ್ಯಾಪ್‍ಟ್ಯಾಪ್‍ಖರೀದಿಗಾಗಿ ಬಡ್ಡಿರಹಿತ ಸಾಲ, ಶಿಕ್ಷಕರಿಗೆ ಸುರಕ್ಷಾ ಪರಿಹಾರ ಯೋಜನೆ, ಗುರು ಭವನ ನಿರ್ಮಾಣಕ್ಕೆ ಅನುದಾನ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಸರಕಾರವು ನೀಡುತ್ತಿದೆ ಎಂದು ಅವರು ತಿಳಿಸಿದರು.


ಶಿಕ್ಷಕರ ಬೇಡಿಕೆಗಳಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು: ಎನ್.ಪಿ.ಎಸ್. ರದ್ದುಪಡಿಸಿ ಒ.ಪಿ.ಎಸ್. ಜಾರಿಗೆ ತರುವಂತೆ ಒತ್ತಾಯಿಸುತ್ತಿದ್ದೀರಿ;ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಎನ್.ಪಿ.ಎಸ್ ರದ್ದುಪಡಿಸುವಲ್ಲಿ ನಾನು ಸಹ ನಿಮ್ಮ ಜೊತೆಗೆ ಇರುತ್ತೇನೆ. 7ನೇ ವೇತನ ಆಯೋಗದಲ್ಲಿ ಶಿಕ್ಷಕರಿಗೆ ಉತ್ತಮ ವೇತನ ಸಿಗುವಂತೆ ಅತ್ಯಂತ ಪ್ರಾಮಾಣಿಕತೆಯಿಂದ ಈ ಕೆಲಸದಲ್ಲಿ ನಾನು ನಿಮ್ಮ ಜೊತೆಯಲ್ಲಿ ಇರುತ್ತೇನೆ. ವರ್ಗಾವಣೆ ನ್ಯೂನತೆಗಳನ್ನು ಸರಿಪಡಿಸುವಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ ಹಾಗೂ ಸುಮಾರು 2 ಲಕ್ಷ ಅಧಿಕ ಶಿಕ್ಷಕರ ಜೊತೆಯಲ್ಲಿ ಸಂಪೂರ್ಣವಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಜೊತೆಯಲ್ಲಿ ಇರುತ್ತೇನೆ ಎಂದು ಭರವಸೆ ನೀಡಿದರು.
ಬಳ್ಳಾರಿ ಜಿಲ್ಲೆಯು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ 28 ಸ್ಥಾನದಲ್ಲಿದ್ದು, ಅದನ್ನು 10ನೇ ಸ್ಥಾನದೊಳಗೆ ಬರುವಂತೆ ಮಾಡಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲಿದ್ದೇನೆ ಎಂದು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.
ಬಳ್ಳಾರಿ ಜಿಲ್ಲೆಯಲ್ಲಿನ ಎಲ್ಲಾ ಶಾಲೆಗಳ ಅಭಿವೃದ್ಧಿಗಾಗಿ ಕೆಎಂಇಆರ್‍ಸಿ ಅನುದಾನದಲ್ಲಿ 440 ರೂ.ಕೋಟಿಯನ್ನು ಮೀಸಲಿಡಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಮಾದರಿಯಾಗುವಂತಹ ಗುರುಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಎಂಇಆರ್‍ಸಿ ಅಡಿಯಲ್ಲಿ 10ಕೋಟಿ ರೂ.ಗಳನ್ನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿ, ಆದಷ್ಟು ಶೀಘ್ರದಲ್ಲಿಯೇ ಭೂಮಿಪೂಜೆಯನ್ನು ನೇರವೇರಿಸಲಿದ್ದೇವೆ ಎಂದು ತಿಳಿಸಿದರು.
ಹಂಪಿ ಸಾವಿರ ದೇವರ ಮಠದ ಪೀಠಾಧಿಪತಿಗಳಾದ ಎಮ್ಮಿಗನೂರು ವಾಮದೇವ ಶಿವಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಅಂದಾನಪ್ಪ ಎಂ.ವಡಗೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ 2018-19ರಿಂದ ಇಲ್ಲಿಯವರೆಗೆ ಎಲ್ಲಾ 896 ಕೊಠಡಿ ನಿರ್ಮಾಣ ಮಾಡುತ್ತಿದ್ದು, ಇದರಲ್ಲಿ 677 ಕೊಠಡಿಗಳು ಪೂರ್ಣಗೊಂಡಿವೆ. 20.47 ಕೋಟಿ ರೂ.ವೆಚ್ಚದಲ್ಲಿ 156 ಶಾಲೆ ಕೊಠಡಿಗಳ ದುರಸ್ಥಿ ನಡೆಯುತ್ತಿದೆ ಎಂದು ತಿಳಿಸಿದರು.
ಕೋವಿಡ್‍ನಿಂದ 18 ತಿಂಗಳು ಶಾಲೆಗೆ ಹೋಗಿರಲಿಲ್ಲ. ಆ ಕೊರತೆಯನ್ನು ಈಗ ರಜೆ ಹಾಕದೇ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ 12 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಮಹಾನಗರ ಪಾಲಿಕೆಯ ಮೇಯರ್ ಎಂ.ರಾಜೇಶ್ವರಿ, ಬುಡಾ ಅಧ್ಯಕ್ಷರಾದ ಪಿ.ಪಾಲಣ್ಣ, ಮಾಜಿ ಸಂಸದೆ ಜೆ.ಶಾಂತಾ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರಾದ ಕೆ.ಹನುಮಂತಪ್ಪ, ಡಯಟ್‍ನ ಉಪನಿರ್ದೇಶಕರಾದ ಎ.ಹನುಮಕ್ಕ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಡಯಟ್‍ನ ಎಲ್ಲಾ ಸದಸ್ಯರು ಮತ್ತು ಶಿಕ್ಷಕರು, ಇನ್ನೀತರರು ಉಪಸ್ಥಿತರಿದ್ದರು.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ:2022-23ನೇ ಸಾಲಿನಡಿ 12ಜನರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಪ್ರದಾನ ಮಾಡಿ ಗೌರವಿಸಿದರು.

LEAVE A REPLY

Please enter your comment!
Please enter your name here