ವಿಜಯನಗರದಲ್ಲಿ ಡಿ.ದೇವರಾಜ ಅರಸು ಅವರ 107ನೇ ಜನ್ಮ ದಿನ ಆಚರಣೆ

0
118

BP NEWS: ಹೊಸಪೇಟೆ(ವಿಜಯನಗರ): ಆಗಸ್ಟ್.20: ಸ್ವತಂತ್ರ್ಯೋತ್ತರ ಭಾರತ ಇತಿಹಾಸದ ಕರ್ನಾಟಕದ ಪುಟಗಳಲ್ಲಿ ಅರಸುಯುಗವನ್ನು ಸುವರ್ಣಯುಗವೆಂದು ಕರೆಯುತ್ತಿದ್ದರು ಎಂದು ವಿಜಯನಗರ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್ ಅವರು ಹೇಳಿದರು.


ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ಹೊಸಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಹರಿಕಾರ,ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆಯ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.


8ವರ್ಷಗಳ ಕಾಲ ಕರ್ನಾಟಕದ ಮುಖ್ಯ ಮಂತ್ರಿಯಾಗಿ ದೇಶದ ರಾಜಕೀಯಕ್ಕೆ ಮೌನಕ್ರಾಂತಿಯ ನಾಂದಿ ಹಾಡಿದ ಡಿ.ದೇವರಾಜ ಅರಸು ಅವರು ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಸಾಮಾಜಿಕ ನ್ಯಾಯದ ಹರಿಕಾರ ಎಂದೇ ಬಿಂಬಿತವಾಗಿದ್ದ ಡಿ.ದೇವರಾಜ ಅರಸು ಅವರು ರಾಜ್ಯದ ಅಸಂಖ್ಯೆ ಧ್ವನಿ ಇಲ್ಲದ ಜನಾಂಗಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತಂದ ಶ್ರೇಯ ಅವರಿಗೆ ಸಲ್ಲುತ್ತದೆ ಎಂದರು.
ಉಳುವವನೇ ಹೊಲದೊಡೆಯ ಎನ್ನುವ ಭೂ ಸುಧಾರಣೆಕಾಯ್ದೆ, ತಲೆಯ ಮೇಲೆ ಮಲ ಹೋರುವ ಅಮಾನುಷ ಪದ್ಧತಿಯ ನಿಷೇಧ, ಜೀತ ಪದ್ಧತಿ ನಿರ್ಮೂಲನೆ ಮುಂತಾದ ಅನೇಕ ಕ್ರಾಂತಿಕಾರಕ ಕಾಯ್ದೆಗಳನ್ನು ರೂಪಿಸಿ ಜಾರಿಗೊಳಿಸಿ ಸಮಾಜಕ್ಕೆ ಅಂಟಿದ್ದ ಕಳಂಕವನ್ನು ತೊಡೆದು ಹಾಕಿದ ಘನತೆ ಅರಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.


ಡಿ.ದೇವರಾಜ ಅರಸು ಸಾಮಾಜಿಕ ಕಳಕಳಿಯುಳ್ಳ ದಕ್ಷತೆ ಮತ್ತು ಬದ್ದತೆಯುಳ್ಳ ಕೆಲವೇ ವಿಭಿನ್ನ ರಾಜಕಾರಣಿಗಳಲ್ಲೊಬ್ಬರು. ಸಮಾಜದಲ್ಲಿ ಧ್ವನಿಯಿಲ್ಲದವರಿಗೆ ಮಾತಿನ ಬಲಕೊಟ್ಟವರು, ಯಾರನ್ನು ಸಮಜ ನಿರ್ಲಕ್ಷಿಸುತ್ತಿತ್ತೋ ಅಂತಃವರಿಗೆ ಶಕ್ತಿಕೊಟ್ಟು ಅವರನ್ನು ಸಮಾಜ ಗುರುತಿಸಿ ಗೌರವಿಸುವಂತೆ ಮಾಡಿದ್ದು ಅರಸು ಅವರು ದುರ್ಬಲರಿಗೆ ಧೈರ್ಯ ಹಾಗೂ ಆತ್ಮ ಸ್ಥೈರ್ಯತಂದುಕೊಟ್ಟರು. ಇನ್ನೂ ಜಾರಿಗೆ ತಂದ ಅನೇಕ ಸುಧಾರಣಾ ಕಾರ್ಯಕ್ರಮಗಳು ಕರ್ನಾಟಕ ಇತಿಹಾಸದ ಮೈಲುಗಲ್ಲುಗಳಾಗಿವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಸ್ವತಂತ್ರ ಕರ್ನಾಟಕದ ಇತಿಹಾಸದಲ್ಲಿ ಅರಸು ಆಳ್ವಿಕೆಯ ಕಾಲ ನವಸಮಾಜದ ನಿರ್ಮಾಣದತ್ತ ಹೆಜ್ಜೆ ಹಾಕಿದ ಪರ್ವ ಕಾಲ. ಇಂತಹ ಮಹಾನ್ ನಾಯಕ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆದು ಎಲ್ಲಾ ಸಮುದಾಯದವರ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ ಹಾಗೂ ಈ ಸಂದರ್ಭದಲ್ಲಿ ನಾವೆಲ್ಲರೂ ಹಿಂದುಳಿದ, ಶೋಷಿತ, ದಲಿತ ವರ್ಗಗಳ ಜನರ ಮೂಕ ವೇದನೆಯನ್ನು ಹೋಗಲಾಡಿಸಿ, ಅವರೆಲ್ಲರನ್ನು ಸಮಾಜದ ಮುಖ್ಯವಾಹಿನಿಗೆ ತಂದರೆ ಮಾತ್ರ ಪರಿವರ್ತನೆಯ ಹರಿಕಾರ ಡಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆ ಸಾರ್ಥಕ ಹಾಗೂ ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
ಸದರಿ ಕಾರ್ಯಕ್ರಮದಲ್ಲಿ ಹೋರಾಟಗಾರರಾದ ವೈ.ಯಮುನೇಶ್ ಅವರಿಗೆ ಡಿ.ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಕೆ.ಎಂ.ಮೇತ್ರಿ ಅವರು ಡಿ.ದೇವರಾಜ ಅರಸು ತತ್ವ ಮತ್ತು ಚಿಂತನೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಡಿ.ದೇವರಾಜ ಅರಸ್ ಅವರ ಜನ್ಮದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಜಿ.ಪಂ ಸಿಇಒ ಬೋಯೇರ್ ಹರ್ಷಲ್ ನಾರಾಯಣರಾವ್ ಅವರು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ಜಿ.ಪಂ. ಉಪಕಾರ್ಯದರ್ಶಿ ತಿಮ್ಮಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಹೆಚ್.ಸತೀಶ್, ಡಿಡಿಪಿಐ ಕೊಟ್ರೇಶ್ ಸೇರಿದಂತೆ ಜಿಲ್ಲೆಯ ಎಲ್ಲಾ ಸಂಘ/ಸಂಸ್ಥೆಗಳು, ಎಲ್ಲಾ ಸಮುದಾಯದ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಎಲ್ಲಾ ಅಧಿಕಾರಿ/ನೌಕರರು/ಸಿಬ್ಬಂದಿಗಳು ಇದ್ದರು.

LEAVE A REPLY

Please enter your comment!
Please enter your name here