ಸ್ವಾತಂತ್ರ್ಯದ ನಂತರ ಮಿಂಚೇರಿ ಗುಡ್ಡದಲ್ಲಿ ಮೊದಲಬಾರಿಗೆ ಧ್ವಜಾರೋಹಣ: ನವೀಕೃತ ಬ್ರಿಟೀಷ್ ಜಡ್ಜ್ ಬಂಗ್ಲೆ ಉದ್ಘಾಟನೆ

0
119

BP NEWS: ಬಳ್ಳಾರಿ: ಆಗಸ್ಟ್.14: ಅಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ದೇಶ ಸ್ವಾತಂತ್ರ್ಯಗೊಂಡ 75 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಿಂಚೇರಿ ಗುಡ್ಡದಲ್ಲಿ ರಾಷ್ಟ್ರಧ್ವಜಾರೋಹಣವನ್ನು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಭಾನುವಾರ ನೆರವೇರಿಸಿದರು. ಇದೇ ಸಂದರ್ಭದಲ್ಲಿ 60ಲಕ್ಷ ರೂ.ವೆಚ್ಚದಲ್ಲಿ ನವೀಕರಣಗೊಳಿಸಲಾದ ಬ್ರೀಟಿಷ್ ಜಡ್ಜ್ ಬಂಗ್ಲೆಯನ್ನು ಸಹ ಇದೇ ಸಂದರ್ಭದಲ್ಲಿ ಅವರು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಐತಿಹಾಸಿಕ ಕುರುಹುಳ್ಳ,ಹಚ್ಚಹಸಿರಿನ ಸುಂದರ ತಾಣವಾಗಿರುವ ಬಳ್ಳಾರಿ ತಾಲೂಕಿನ ಮಿಂಚೇರಿ ಬೆಟ್ಟವನ್ನು ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.
ಮಿಂಚೇರಿ ಬೆಟ್ಟದಲ್ಲಿ ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರವಾಸಿಗರಿಗೆ ಉಪಹಾರದ ವ್ಯವಸ್ಥೆ,ತಂಗುವಿಕೆ ಸೇರಿದಂತೆ ಇನ್ನೀತರ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಂದಾಜುಪಟ್ಟಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ ಸಚಿವ ಶ್ರೀರಾಮುಲು ಅವರು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸಿ ಸ್ಥಳಗಳನ್ನು ಗುರುತಿಸುವ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ ಎಂದರು.


ಬಳ್ಳಾರಿ ವೈಟ್‍ಹೌಸ್‍ನಂತಿರುವ ನವೀಕೃತ ಬ್ರೀಟಿಷ್ ಜಡ್ಜ್ ಬಂಗ್ಲೆಗೆ ಹಾಗೂ ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಮಿಂಚೇರಿಬೆಟ್ಟಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು,ಅತ್ಯಂತ ಸಂತಸವಾಗಿದೆ ಎಂದು ಹೇಳಿದ ಅವರು ಬ್ರೀಟಿಷ್ ಜಡ್ಜ್ ಬಂಗ್ಲೆಗೆ ಅಮೃತಮಹಲ್ ಎಂದು ನಾಮಕರಣ ಮಾಡುವ ನಿಟ್ಟಿನಲ್ಲಿ ಪ್ರಸ್ತಾವನೆ ಕಳುಹಿಸಿದ್ದಲ್ಲಿ ಸಚಿವರೊಂದಿಗೆ ಮಾತನಾಡಿ ಕ್ರಮವಹಿಸುವುದಾಗಿ ಅವರು ಭರವಸೆ ನೀಡಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ನಿಟ್ಟಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಹನೀಯರು ನಡೆಸಿದ ಹೋರಾಟ,ತ್ಯಾಗ,ಬಲಿದಾನಗಳು ಅಪಾರವಾಗಿದ್ದು,ಏನೇ ಸಾಧಿಸಬೇಕಾದರೂ ಶ್ರಮವಹಿಸಬೇಕಾಗುತ್ತದೆ ಎಂಬುದಕ್ಕೆ ನಿದರ್ಶನವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು,ಮಹನೀಯರ ಕುರಿತು ಸ್ಮರಿಸಿಕೊಳ್ಳುವ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ ಮತ್ತು ಯುವಜನರು ಇತಿಹಾಸವನ್ನು ತಿಳಿದುಕೊಳ್ಳಬೇಕಿದೆ ಎಂದರು.


ಜಿಲ್ಲಾ ಉಪಅರಣ್ಯ ಸಂರಕ್ಷಾಣಾಧಿಕಾರಿಗಳಾದ ಸಂದೀಪ್ ಸೂರ್ಯವಂಶಿ ಅವರು ಮಾತನಾಡಿ, ಮಿಂಚೇರಿ ಗುಡ್ಡದಲ್ಲಿ ದೇಶ ಸ್ವತಂತ್ರಗೊಂಡ ನಂತರ ನಡೆಯುತ್ತಿರುವ ಮೊದಲ ಧ್ವಜಾರೋಹಣ ಇದಾಗಿದೆ.ಬ್ರೀಟಿಷರು ಜಡ್ಜ್ ಬಂಗ್ಲೆಯನ್ನು 1894ರ ಅವಧಿಯಲ್ಲಿ ನಿರ್ಮಿಸಿದ್ದರು. ಸ್ವಾತಂತ್ರ್ಯ ನಂತರ ಅದನ್ನು ರೆಂಜ್ ಫಾರೆಸ್ಟ್ ಆಫೀಸರ್ ವಸತಿಗೃಹವನ್ನಾಗಿ ಮಾಡಲಾಗಿತ್ತು;2015ರಲ್ಲಿ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ವಿಶೇಷ ಮುತುವರ್ಜಿಯ ಫಲವಾಗಿ ಮೂಲಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ನವೀಕರಣ ಕೆಲಸ ಆರಂಭಿಸಿ ಪೂರ್ಣಗೊಳಿಸಲಾಗಿದೆ ಎಂದರು.
ಪರಿಸರ ಪ್ರವಾಸೋದ್ಯಮ,ಪ್ರವಾಸೋದ್ಯಮಕ್ಕೆ ಉತ್ತೇಜನ, ಮ್ಯೂಸಿಯಂ ಸೇರಿದಂತೆ ಇನ್ನೀತರ ಚಟುವಟಿಕೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದ್ದು,2-3 ತಿಂಗಳಲ್ಲಿ ಅನುಷ್ಠಾನಗೊಳ್ಳಲಿವೆ ಎಂದರು.


ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಎಂಎಲ್ಸಿ ವೈ.ಎಂ.ಸತೀಶ, ಬಳ್ಳಾರಿ ಮೇಯರ್ ರಾಜೇಶ್ವರಿ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ಜಿ.ಲಿಂಗಮೂರ್ತಿ,ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಸಹಾಯಕ ಆಯುಕ್ತ ಡಾ.ಆಕಾಶ ಶಂಕರ್, ತಹಸೀಲ್ದಾರ್ ವಿಶ್ವನಾಥ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ನೌಕರರು,ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು,ಸಾರ್ವಜನಿಕರು ಇದ್ದರು.

LEAVE A REPLY

Please enter your comment!
Please enter your name here