ಹರ್ ಘರ್ ತಿರಂಗಾ ಅಭಿಯಾನ ನಿಮಿತ್ತ ಎರಡು ದಿನಗಳ ಕಾಲ ಜಿಲ್ಲೆಯಾದ್ಯಂತ ಬೃಹತ್ ಜಾಥಾ: ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್

0
90

BP NEWS: ಹೊಸಪೇಟೆ(ವಿಜಯನಗರ): ಆಗಸ್ಟ್.10: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನವನ್ನು ಇಡೀ ಜಿಲ್ಲೆಯಾದ್ಯಂತ ವೈವಿಧ್ಯಮಯ/ವರ್ಣರಂಜಿತವಾಗಿ ಹಾಗೂ ಹಬ್ಬದ ರೀತಿಯಲ್ಲಿ ಆಚರಿಸಲು ವಿಜಯನಗರ ಜಿಲ್ಲಾಡಳಿತ ನಿರ್ಧರಿಸಿದೆ.
ಹರ್ ಘರ್ ತಿರಂಗಾ ಅಭಿಯಾನದ ಹಿನ್ನೆಲೆಯಲ್ಲಿ ಪ್ರತಿ ಮನೆ-ಮನೆಯಲ್ಲೂ ರಾಷ್ಟ್ರೀಯ ಧ್ವಜ ಅಭಿಯಾನವನ್ನು ಇದೇ ಆ.13ರಿಂದ ಆ.15ರವರೆಗೆ ಆಚರಿಸಲಾಗುತ್ತಿದ್ದು,ಸಾರ್ವಜನಿಕರು ತಮ್ಮ ಮನೆಯ ಅಂಗಳದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ದೇಶಭಕ್ತಿ,ದೇಶಾಭಿಮಾನವನ್ನು ಬಿಂಬಿಸುವ ಮೂಲಕ ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಗೊಳಿಸಬೇಕು ಎಂದು ತಿಳಿಸಿರುವ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಹರ್ ಘರ್ ತಿರಂಗಾ ಅಭಿಯಾನದ ನಿಮಿತ್ತ ಜಿಲ್ಲೆಯಾದ್ಯಂತ ಆ.11 ಮತ್ತು ಆ.12ರಂದು ಎರಡು ದಿನಗಳ ಕಾಲ ಪ್ರತಿ ಗ್ರಾಮಗಳಲಿ,ನಗರ,ಪಟ್ಟಣಗಳಲ್ಲಿ ಬೃಹತ್ ಜಾಥಾ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.


ಹರ್ ಘರ್ ತಿರಂಗಾ ಅಭಿಯಾನ ಹಾಗೂ ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಪೂರ್ವಸಿದ್ಧತೆಗಳ ಕುರಿತು ವರ್ಚುವಲ್ ಮೂಲಕ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ರಾಷ್ಟ್ರಧ್ವಜಗಳ ಬೃಹತ್ ಜಾಥಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿದ ವಿದ್ಯಾರ್ಥಿಗಳು ಸಾಗಬೇಕು ಮತ್ತು ದೇಶಭಕ್ತಿ ಗೀತೆಗಳು ಪ್ರಸಾರವಾಗಬೇಕು. ಸ್ಥಳೀಯ ಶಾಸಕರು,ನಗರ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷರು,ಗ್ರಾಪಂ ಅಧ್ಯಕ್ಷರು,ತಹಸೀಲ್ದಾರರು,ತಾಪಂ ಇಒಗಳ ಮೂಲಕ ಚಾಲನೆ ನೀಡಬೇಕು; ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಜಾಥಾಗಳಲ್ಲಿ ಪಾಲ್ಗೊಳ್ಳುವಂತೆ ಕ್ರಮವಹಿಸಬೇಕು. ಹರ್ ಘರ್ ತಿರಂಗಾ ಅಭಿಯಾನ ಹಾಗೂ ದೇಶಕ್ಕ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಈ ಸಂಭ್ರಮಮವನ್ನು ಜಿಲ್ಲೆಯಾದ್ಯಂತ ಹಬ್ಬದ ರೀತಿಯಲ್ಲಿ ನಾವೆಲ್ಲ ಸಂಭ್ರಮಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಾದ್ಯಂತ ನಿಗದಿಪಡಿಸಿದ ಗುರಿ ಅನುಸಾರ ರಾಷ್ಟ್ರಧ್ವಜಗಳು ಬಂದಿದ್ದು,ಅವುಗಳನ್ನು ಸಮರ್ಪಕವಾಗಿ ಎಲ್ಲ ಕಡೆಯೂ ವಿತರಿಸಬೇಕು. ಜಿಲ್ಲೆಯಲ್ಲಿ ರಸ್ತೆ ಬದಿಗಳ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಬೃಹತ್ ಜಾಥಾ,ಪ್ರಭಾತ್ ಪೇರಿ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಎರಡು ದಿನಗಳ ಕಾಲ ಏರ್ಪಡಿಸಿ ಎಂದು ಹೇಳಿದ ಡಿಸಿ ಅನಿರುದ್ಧ ಶ್ರವಣ್ ಅವರು ಅಧಿಕಾರಿಗಳು ಈ ಅಭಿಯಾನವನ್ನು ಅತ್ಯಂತ ಆದ್ಯತೆ ಮೇರೆಗೆ ಮಾಡಬೇಕು ಎಂದರು.


ವಿವಿಧ ಸಮಿತಿಗಳು ವಹಿಸಿದ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸಿ: 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲಾಡಳಿತದ ವತಿಯಿಂದ ಅತ್ಯಂತ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ವಿವಿಧ ಸಮಿತಿಗಳಿಗೆ ವಹಿಸಲಾದ ಜವಾಬ್ದಾರಿಗಳು ಹಾಗೂ ಇದುವರೆಗಿನ ಪ್ರಗತಿ ಕುರಿತು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಪರಿಶೀಲನೆ ನಡೆಸಿದರು.
ಸ್ವಾಗತ ಸಮಿತಿ,ಪರೇಡ್ ಸಮಿತಿ,ವೇದಿಕೆ ಸಮಿತಿ,ಸ್ವಚ್ಛತೆ ಮತ್ತು ಕುಡಿಯುವ ನೀರಿನ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ಇದುವರೆಗೆ ಕೈಗೊಂಡಿರುವ ಸಿದ್ಧತೆ ಪರಿಶೀಲಿಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹೇಶಬಾಬು, ಸಹಾಯಕ ಆಯುಕ್ತರಾದ ಸಿದ್ಧರಾಮೇಶ್ವರ, ಪ್ರಕಾಶ ಸೇರಿದಂತೆ ತಹಸೀಲ್ದಾರರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
ಹೊಸಪೇಟೆ ಸಹಾಯಕ ಆಯುಕ್ತರಿಂದ ಸಿದ್ಧತೆ ಪರಿಶೀಲನೆ: ವಿಜಯನಗರ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಸಿದ್ಧತೆಗಳನ್ನು ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಅವರು ಬುಧವಾರ ಸಂಜೆ ಪರಿಶೀಲನೆ ನಡೆಸಿದರು.


ದೇಶದ ಅತಿದೊಡ್ಡ ಧ್ವಜಸ್ತಂಭದ ನಿರ್ಮಾಣ ಕಾಮಗಾರಿ ಹಾಗೂ ಅದರ ಸಮೀಪ ನಿರ್ಮಿಸಲು ಉದ್ದೇಶಿಸಲಾಗಿರುವ ವೇದಿಕೆ,ವಿದ್ಯಾರ್ಥಿಗಳು,ಸಾರ್ವಜನಿಕರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ,ಪಥಸಂಚಲನ ಹಾಗೂ ಇನ್ನೀತರ ವ್ಯವಸ್ಥೆಗಳನ್ನು ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಅವರು ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ವಿಶ್ವಜಿತ್ ಮೆಹತಾ, ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ,ಡಿಡಿಪಿಐ ಕೋಟ್ರೇಶ್,ತಾಪಂ ಇಒ ರಮೇಶ ಸೇರಿದಂತೆ ಇನ್ನೀತರ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here