ಅಂಕಮನಾಳ್ ಗ್ರಾಮದಲ್ಲಿ ವಾಂತಿಬೇಧಿ ಪ್ರಕರಣ:ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಭೇಟಿ;ರೋಗಿಗಳ ಆರೋಗ್ಯ ವಿಚಾರಣೆ

0
161

BP NEWS: ಬಳ್ಳಾರಿ: ಆಗಸ್ಟ್.07: ಸಂಡೂರು ತಾಲೂಕಿನ ಅಂಕಮನಾಳ್ ಗ್ರಾಮದಲ್ಲಿ 84 ವಾಂತಿಬೇಧಿ ಪ್ರಕರಣಗಳು ಕಂಡುಬಂದ ಹಿನ್ನೆಲೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಭಾನುವಾರ ಅಂಕಮನಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲಿಗೆ ಸಂಡೂರು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ರೋಗಿಗಳಿಗೆ ಗುಣಮಟ್ಟದ ಮತ್ತು ಸಮರ್ಪಕ ಚಿಕಿತ್ಸೆ ನೀಡುವಂತೆ ಸ್ಥಳದಲ್ಲಿ ಉಪಸ್ಥಿತರಿದ್ದ ವೈದ್ಯರಿಗೆ ಸೂಚನೆ ನೀಡಿದರು.


ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬರ ಆರೋಗ್ಯವನ್ನು ವಿಚಾರಿಸಿದ ಸಚಿವ ಬಿ.ಶ್ರೀರಾಮುಲು ಅವರು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದಲ್ಲಿ ಏನಾದರೂ ಏರುಪೇರುಗಳಾದಲ್ಲಿ ತಕ್ಷಣ ವಿಮ್ಸ್‍ಗೆ ಸ್ಥಳಾಂತರಿಸಿ ಗುಣಮಟ್ಟದ ಚಿಕಿತ್ಸೆ ಒದಗಿಸುವಂತೆ ಡಿಎಚ್‍ಒ ಡಾ.ಜನಾರ್ಧನ್ ಅವರಿಗೆ ಸೂಚನೆ ನೀಡಿದರು.
ನಂತರ ವಾಂತಿಬೇಧಿ ಪ್ರಕರಣಗಳು ಕಂಡುಬಂದ ಅಂಕಮನಾಳ್ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಗ್ರಾಮದ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ಆರಂಭಿಸಲಾಗಿರುವ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು;ಸ್ಥಳದಲ್ಲಿದ್ದ ಉಪಸ್ಥಿತರಿದ್ದ ವೈದ್ಯರಿಗೆ ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ಮತ್ತು ಆರೋಗ್ಯದ ಮೇಲೆ ನಿಗಾವಹಿಸಿ ಹಾಗೂ ಗ್ರಾಮದ ಜನರು ವಾಂತಿ-ಬೇಧಿ ಮತ್ತು ಆರೋಗ್ಯ ಸರಿಯಿಲ್ಲವೆಂದು ಚಿಕಿತ್ಸಾ ಕೇಂದ್ರಕ್ಕೆ ಬಂದಲ್ಲಿ ಅವರಿಗೆ ಚಿಕಿತ್ಸೆಗೆ ಕ್ರಮವಹಿಸಿ ಎಂದರು.


ಗ್ರಾಮದ ಪ್ರತಿಯೊಬ್ಬರ ಪ್ರಾಣವೂ ಅಮೂಲ್ಯವಾಗಿದ್ದು;ಹೀಗಾಗಿ ಈ ಚಿಕಿತ್ಸಾ ಕೇಂದ್ರದಲ್ಲಿ ಇನ್ನಷ್ಟು ಬೆಡ್‍ಗಳ ಅಗತ್ಯವಿದ್ದಲ್ಲಿ ಅವುಗಳ ವ್ಯವಸ್ಥೆ ಮಾಡಿ;ಈಗಾಗಲೇ 3 ಆಂಬುಲೆನ್ಸ್‍ಗಳು ಗ್ರಾಮದಲ್ಲಿವೆ;ಇನ್ನೊಂದಿಷ್ಟು ಆಂಬ್ಯುಲೆನ್ಸ್‍ಗಳು ಹಾಗೂ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಅವಶ್ಯವಿದ್ದಲ್ಲಿ ಕೂಡಲೇ ವ್ಯವಸ್ಥೆ ಮಾಡುವಂತೆ ಡಿಎಚ್‍ಒ ಡಾ.ಜನಾರ್ಧನ್ ಅವರಿಗೆ ಸೂಚನೆ ನೀಡಿದರು.

ತಜ್ಞರ ತಂಡದ ವರದಿ ನಾಳೆ ಲಭ್ಯ: ಅಂಕಮನಾಳು ಗ್ರಾಮದಲ್ಲಿ ಉಂಟಾಗಿರುವ ವಾಂತಿ-ಬೇಧಿ ಪ್ರಕರಣದಲ್ಲಿ ಮೇಲ್ನೋಟಕ್ಕೆ ಕಲುಷಿತ ಕುಡಿಯುವ ನೀರು ಸೇವನೆಯೆ ಕಾರಣವೆಂದು ತಿಳಿದುಬಂದಿದ್ದು, ಈಗಾಗಲೇ ತಜ್ಞರ ತಂಡ ಗ್ರಾಮಕ್ಕೆ ಆಗಮಿಸಿ ಅಧ್ಯಯನ ನಡೆಸಿ ಸ್ಯಾಂಪಲ್‍ಗಳೊಂದಿಗೆ ತೆರಳಿದ್ದು,ಸೋಮವಾರ ಸಂಜೆಯೊಳಗೆ ವರದಿ ಲಭಿಸಲಿದ್ದು,ಅದರ ಆಧಾರದ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಬಿ.ಶ್ರೀರಾಮುಲು ಅವರು ಸುದ್ದಿಗಾರರಿಗೆ ತಿಳಿಸಿದರು.


2700 ಮನೆಗಳಿರುವ ಈ ಗ್ರಾಮದಲ್ಲಿ 84 ಜನರಿಗೆ ವಾಂತಿ-ಬೇಧಿ ಪ್ರಕರಣಗಳು ಕಂಡುಬಂದಿದ್ದು;ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ ಪರಿಣಾಮ ಈಗಾಗಲೇ 32 ಜನರು ಗುಣಮುಖರಾಗಿದ್ದು ಉಳಿದವರು ಶೀಘ್ರ ಗುಣಮುಖರಾಗಲಿದ್ದಾರೆ ಎಂದರು.
ಈ ಗ್ರಾಮದಲ್ಲಿ ಕಳೆದ 3 ದಿನಗಳಿಂದಲೂ ಟ್ಯಾಂಕರ್ ಮೂಲಕ ಸರಬರಾಜಾಗುತ್ತಿರುವ ನೀರು ಸೇವಿಸಿದರೂ ಸಹ ಜನರು ವಾಂತಿ-ಬೇಧಿ ಅಂತ ತಾತ್ಕಾಲಿಕ ಚಿಕಿತ್ಸಾ ಕೇಂದ್ರಕ್ಕೆ ಬಂದು ಅಡ್ಮಿಟ್ ಆಗುತ್ತಿದ್ದಾರೆ;ಇದರ ನಿಜವಾದ ಅಧ್ಯಯನ ನಡೆಸಿ ವರದಿ ನೀಡುವಂತೆ ಮತ್ತು ವಿಮ್ಸ್‍ನಿಂದ ತಜ್ಞರ ತಂಡ ಕರೆಯಿಸಿ ಅಧ್ಯಯನ ನಡೆಸುವಂತೆ ಡಿಎಚ್‍ಒ ಅವರಿಗೆ ಸೂಚನೆ ನೀಡಲಾಗಿದೆ ಎಂದರು.
ಗ್ರಾಮದಲ್ಲಿ ಕುಡಿಯುವ ನೀರನ್ನು ಕಾಯಿಸಿ ಆರಿಸಿ ಕುಡಿಯುವಂತೆ ಹಾಗೂ ಸಾಂಕ್ರಾಮಿಕ ರೋಗಗಳಿಂದ ಮುನ್ನಚ್ಚೆರಿಕೆ ವಹಿಸುವಿಕೆ ಕುರಿತು ಜಾಗೃತಿ ಮೂಡಿಸಬೇಕು ಮತ್ತು ಪ್ರತಿ ಮನೆ-ಮನೆಗೂ ಭೇಟಿ ನೀಡಿ ಆಶಾ-ಅಂಗನವಾಡಿ ಕಾರ್ಯಕರ್ತೆಯರ ಮೂಲಕವೂ ಜನರಿಗೆ ತಿಳಿವಳಿಕೆ ಮೂಡಿಸುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.


ಅಂಕಮನಾಳು ಗ್ರಾಮಕ್ಕೆ ಶಾಶ್ವತವಾಗಿ ಕುಡಿಯುವ ನೀರಿನ ಸೌಕರ್ಯ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಜವಾಬ್ದಾರಿ ಗ್ರಾಪಂಗಳಿಗೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಗ್ರಾಪಂಗೆ ವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದರು.
ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮತ್ತು ಕುಡಿಯುವ ನೀರಿನ ಸರಬರಾಜು ಮಾಡುವ ಸಂದರ್ಭದಲ್ಲಿ ವಹಿಸಬೇಕಾದ ಕ್ರಮಗಳ ಕುರಿತು ಸೋಮವಾರ ಮಧ್ಯಾಹ್ನ ಜಿಲ್ಲೆಯ ಎಲ್ಲ ಪಿಡಿಒಗಳ ಸಭೆಯನ್ನು ಜಿಪಂನಲ್ಲಿ ಕರೆಯಲಾಗಿದ್ದು,ಅಲ್ಲಿ ಎಲ್ಲ ಪಿಡಿಒಗಳಿಗೆ ಅನುಸರಿಸಬೇಕಾದ ಕ್ರಮಗಳ ಕುರಿತು ತಿಳಿಸಲಾಗುವುದು ಎಂದು ವಿವರಿಸಿದ ಸಚಿವರು ಈ ಕುರಿತು ಬಳ್ಳಾರಿಯಲ್ಲಿ ಸಭೆ ಕರೆದು ಚರ್ಚಿಸಿ ಕ್ರಮಕೈಗೊಳ್ಳುವುದಾಗಿಯೂ ಅವರು ತಿಳಿಸಿದರು.
ಪ್ರತಿಯೊಬ್ಬ ಅಧಿಕಾರಿಗಳು ಅವರವರ ಜವಾಬ್ದಾರಿಗಳನ್ನು ಫಿಕ್ಸ್ ಮಾಡಲಾಗಿದ್ದು;ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಮಾಧ್ಯಮದವರಿಗೆ ಸ್ಪಷ್ಟಪಡಿಸಿದರು.

ಹೊರಗಡೆ ಚೀಟಿ ಬರೆದುಕೊಡಬೇಡಿ: ತಾಲೂಕು ಆಸ್ಪತ್ರೆಗೆ ಚಿಕಿತ್ಸಗೆಂದು ಆಗಮಿಸುವ ರೋಗಿಗಳಿಗೆ ಯಾವುದೇ ಕಾರಣಕ್ಕೂ ಔಷಧವಿಲ್ಲವೆಂದು ಹೇಳಿಕೊಂಡು ಹೊರಗಡೆ ಚೀಟಿ ಬರೆದುಕೊಡದಂತೆ ಡಿಎಚ್‍ಒ ಡಾ.ಜನಾರ್ಧನ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಸೂಚನೆ ನೀಡಿದರು.
ಔಷಧಿ ತರಲು ಹೊರಗಡೆ ಚೀಟಿ ಬರೆದುಕೊಡಲಾಗುತ್ತಿದೆ ಎಂಬ ರೋಗಿಗಳ ದೂರಿಗೆ ಸೂಚನೆ ನೀಡಿದ ಸಚಿವ ಬಿ.ಶ್ರೀರಾಮುಲು ಅವರು ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ;ಏನಾದ್ರೂ ಸಮಸ್ಯೆಗಳಿದ್ದಲ್ಲಿ ತಿಳಿಸಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಗೆ ಆಗಮಿಸಿದ ರೋಗಿಗಳ ಅಹವಾಲುಗಳನ್ನು ಆಲಿಸಿದರು.

ಜೋಳ ಅಕ್ರಮ;ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ: 10500 ಕ್ವಿಂಟಾಲ್ ಪಡಿತರ ಜೋಳ ಅಕ್ರಮವೆಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆಯುತ್ತಿದ್ದು,ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಸ್ಪಷ್ಟಪಡಿಸಿದರು.
ಅಕ್ರಮವೆಸಗಿರುವವರಿಂದ ವಸೂಲಾತಿ ಕೂಡ ಮಾಡಲಾಗುವುದು ಎಂದರು.


ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಲಿಂಗಮೂರ್ತಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜನಾರ್ಧನ್,ತಹಸೀಲ್ದಾರ್ ಗುರುಬಸವರಾಜ, ಕಾಳಂಗೇರಾ ಗ್ರಾಪಂ ಅಧ್ಯಕ್ಷೆ ಸೀತಮ್ಮ, ಉಪಾಧ್ಯಕ್ಷ ಗಂಡಿಕುಮಾರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ಸೇರಿದಂತೆ ಮುಖಂಡರು,ಗ್ರಾಮಸ್ಥರು ಇದ್ದರು.

LEAVE A REPLY

Please enter your comment!
Please enter your name here