BP NEWS: ಬಳ್ಳಾರಿ: ಆಗಸ್ಟ್.04: ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳ್ಳಾರಿ ತಾಲೂಕಿನ ಹೊಸ ಮೋಕಾ,ಗೋಟೂರು,ಇಬ್ರಾಹಿಂಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ಹಾಗೂ ಹಾನಿಗೊಳಗಾದ ಬೆಳೆಯನ್ನು ವೀಕ್ಷಿಸಿದರು. ಅಧಿಕಾರಿಗಳು ಹಾಗೂ ಗ್ರಾಮಸ್ಥರಿಂದ ಈ ಕುರಿತ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಸಂತ್ರಸ್ಥರ ಅಹವಾಲುಗಳನ್ನು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಹಾನಿಗೆ ಸಂಬಂಧಿಸಿದಂತೆ ಪರಿಹಾರ ವಿತರಿಸುವ ನಿಟ್ಟಿನಲ್ಲಿ ನಿಯಮಾನುಸಾರ ಶೀಘ್ರ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಧಾರಕಾರ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿರುವುದನ್ನು ಇದೇ ಸಂದರ್ಭದಲ್ಲಿ ಸಚಿವ ಬಿ.ಶ್ರೀರಾಮಲು ವೀಕ್ಷಿಸಿದರು. ಗೋಟೂರು ಗ್ರಾಮದಲ್ಲಿ ಗುಡಿಸಲು ವಾಸಿಗಳನ್ನು ಖುದ್ದಾಗಿ ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಿದ ಸಚಿವರು ಕೂಡಲೇ ಇವರಿಗೆ ಯಾವುದಾದರೂ ಯೋಜನೆ ಅಡಿ ಮನೆಗಳನ್ನು ನಿರ್ಮಿಸಿಕೊಡುವಂತೆ ಸ್ಥಳದಲ್ಲಿದ್ದ ಜಿಪಂ ಸಿಇಒ ಜಿ.ಲಿಂಗಮೂರ್ತಿ ಅವರಿಗೆ ಸೂಚನೆ ನೀಡಿದರು.
ಗೋಟೂರು ಗ್ರಾಮದಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿಯನ್ನು ಇದೇ ಸಂದರ್ಭದಲ್ಲಿ ಪರಿಶೀಲಿಸಿದ ಅವರು ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಸೂಚನೆ ನೀಡಿದರು.
ಗ್ರಾಮದ ಕೆಲ ಮಹಿಳೆಯರು ಶೌಚಾಲಯಗಳು ನಿರ್ಮಿಸಿಕೊಡುವಂತೆ ಹಾಗೂ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಹಾಗೂ ಮಾಸಾಶನ ಬರುತ್ತಿಲ್ಲ ಎಂಬ ದೂರುಗಳನ್ನು ಸಚಿವರ ಎದುರು ತೋಡಿಕೊಂಡರು.
ಹಾನಿಗೊಳಗಾದ ಮನೆಗಳಿಗೆ ತಕ್ಷಣ ಪರಿಹಾರ ಒದಗಿಸಿಕೊಡುವಂತೆ ಹಾಗೂ ಕೂಡಲೇ ಗ್ರಾಮದ ರಸ್ತೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸಚಿವ ಶ್ರೀರಾಮುಲು ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಜೆ.ಶಾಂತಾ, ಬುಡಾ ಅಧ್ಯಕ್ಷ ಪಾಲನ್ನ, ಎಪಿಎಂಸಿ ಅಧ್ಯಕ್ಷ ಉಮೇಶ, ತಹಸೀಲ್ದಾರ್ ವಿಶ್ವನಾಥ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಇನ್ನೀತರರು ಇದ್ದರು.