ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ: ಅಪರ ಜಿಲ್ಲಾಧಿಕಾರಿ ಮಂಜುನಾಥ
BP News ಬಳ್ಳಾರಿ,ಜು.28-ಅಲ್ಪಸಂಖ್ಯಾತ ವರ್ಗಗಳ ಕಲ್ಯಾಣಕ್ಕಾಗಿ ರೂಪಿಸಲಾಗಿರುವ ಪ್ರಧಾನಮಂತ್ರಿಗಳ 15 ಹೊಸ ಅಂಶಗಳ ಕಾರ್ಯಕ್ರಮಗಳನ್ನು ನಿಗದಿಪಡಿಸಿದ ಅವಧಿಯೊಳಗೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿಗಳ 15 ಹೊಸ ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಚ್ಚಿನ ಜಾಗೃತಿ ಮೂಡಿಸಬೇಕು. ಇದು ಪ್ರತಿಯೊಬ್ಬ ಅಧಿಕಾರಿಗಳ ಜವಾಬ್ದಾರಿ ಎಂಬುದನ್ನು ಅರಿತುಕೊಂಡು ಕಾರ್ಯನಿರ್ವಹಿಸಿ ಎಂದರು.
——
ವಿಮ್ಸ್‍ನಲ್ಲಿ ಕಿಮೋಥೆರಪಿ ಇನ್ಫೂಶನ್ ಸೆಂಟರ್ ಪ್ರಾರಂಭ
BP News ಬಳ್ಳಾರಿ,ಜು.28-ವಿಮ್ಸ್ ಆಸ್ಪತ್ರೆಯಲ್ಲಿ ಕಿಮೋಥೆರಪಿ ಇನ್ಫೂಶನ್ ಸೆಂಟರ್ ಪ್ರಾರಂಭವಾಗಿದ್ದು, ವಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರಗೌಡ ಉದ್ಘಾಟಿಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಈ ಸೆಂಟರ್ ಪ್ರಾರಂಭಿಸಲು ನೆರವಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್, ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು, ಶಾಸಕರು, ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ನವೀನ್ ರಾಜ್ ಸಿಂಗ್‍ರವರಿಗೆ ಕೃತಜ್ಞತೆ ತಿಳಿಸಿದರು.
——-
ಮನೆ ದರೋಡೆ-ಗಂಡ, ಹೆಂಡತಿ ಮತ್ತು ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿ
BP News ಬಳ್ಳಾರಿ,ಜು.28-ಎತ್ತಿನಬೂದಿಹಾಳ್ ಗ್ರಾಮದ ದೊಡ್ಡ ಬಸಪ್ಪ ಎನ್ನುವರ ಮನೆಯಲ್ಲಿ ದರೋಡೆ ನಡೆಸಿ ಹಣ ಮತ್ತು ಚಿನ್ನದಾಭರಣ ಕಳ್ಳತನ ಮಾಡಿ ಪರಾರಿಯಾಗುವಾಗ ಮನೆಯ ಸದಸ್ಯರು ವಿರೋಧಿಸಿದ್ದಕ್ಕೆ ದರೋಡೆಕೋರರು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ನಿನ್ನೆ ರಾತ್ರಿ ಕುರುಬರ ದೊಡ್ಡಬಸಪ್ಪ(35) ಎನ್ನುವರ ಮನೆಗೆ ನಾಲ್ವರು ಆಗಂತುಕರು ಆಗಮಿಸಿ ಮನೆಯಲ್ಲಿನ ಬೀರು ಮುರಿದು 1 ಲಕ್ಷ 28 ಸಾವಿರ ರೂ., ಮತ್ತು 2 ತೊಲೆ ಚಿನ್ನದ ಆಭರಣ ದೋಚಿ ಪರಾರಿಯಾಗಲು ಯತ್ನಿಸಿದ್ದರು. ಈವೇಳೆ ಕುರಿಗಾಹಿ ಪತ್ನಿ ಲಕ್ಷ್ಮಿ ಹಾಗೂ ಪುತ್ರ ಪ್ರತಾಪ್‍ಗೂ ಹಲ್ಲೆ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ.
——–
ಕನ್ನಡ ವಿಶ್ವ ವಿದ್ಯಾಲಯ ಕುಲಪತಿ ಸ.ಚಿ.ರಮೇಶ್ ಸೈಕಲ್ ಜಾಥಾ
BP News ಬಳ್ಳಾರಿ,ಜು.28-75ನೇ ಸ್ವಾತಂತ್ರ್ಯೋತ್ಸವದ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಕನ್ನಡ ವಿಶ್ವವಿದ್ಯಾಲಯವು ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಆವರಣದಿಂದ ಹಂಪಿಯ ವಿರುಪಾಕ್ಷ ದೇವಸ್ಥಾನದವರೆಗೆ ಸೈಕಲ್ ಜಾಥಾವನ್ನು ಹಮ್ಮಿಕೊಂಡಿತ್ತು.
ಕುಲಪತಿ ಡಾ.ಸ.ಚಿ. ರಮೇಶ ಅವರು ಮಾತನಾಡಿ, ಸರಳತೆ ಮೂಲಕ ರಾಷ್ಟ್ರದ ಸೌಂದರ್ಯವನ್ನು ಕಾಣಬೇಕು. ಸೈಕಲ್ ಸವಾರಿಯು ಪರಿಸರ ಸ್ನೇಹಿಯಾದುದು. ನಮ್ಮ ಆರೋಗ್ಯಕ್ಕೂ ಉತ್ತಮವಾದುದು. ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸೌಹರ್ದ ಮನೋಭಾವವನ್ನು ಮೂಡಿಸುವಲ್ಲಿ ಸಹಕಾರಿಯಾಗುತ್ತವೆ ಎಂದರು.
———
ಯಾರ ಬಳಿಯೂ ನಾನು ದುಡ್ಡು ಪಡೆದಿಲ್ಲ ವಿನಾಕಾರಣ ಆರೋಪ ಮಾಡಬೇಡಿ-ವನ್ನೂರಪ್ಪ
BP News ಬಳ್ಳಾರಿ,ಜು.28-ಕಳೆದ 2013ರ ಚುನಾವಣೆಯಲ್ಲಿ ಶ್ರೀರಾಮುಲು ವಿರುದ್ಧ ಸ್ಪರ್ಧಿಸಿದ್ದಾಗ ರಾಮುಲು ಬಳಿ ಹಣ ಪಡೆದಿದ್ದಾರೆಂಬ ಆರೋಪ ನನ್ನ ಮೇಲಿದೆ. ನಾನು ಯಾರ ಬಳಿಯೂ ಹಣ ಪಡೆದಿಲ್ಲ. ಹಣ ನೀಡಿದ್ದಿದ್ದರೆ ಅಂಥವರು ಸುಂಕ್ಲಮ್ಮ ಗುಡಿಗೆ ಬಂದು ಪ್ರಮಾಣ ಮಾಡಲಿ ಎಂದು ಕಾಂಗ್ರೆಸ್ ಎಸ್‍ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಸುಂಡಿ ವನ್ನೂರಪ್ಪ ಸವಾಲೆಸೆದಿದ್ದಾರೆ.
ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ತಮ್ಮ 50ನೇ ದಿನದ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಡವನ ಮೇಲೆ ಆರೋಪ ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ.
—–
ಎಸ್‍ಎನ್ ಪೇಟೆಯಲ್ಲಿ ಧರೆಗೆ ಉರುಳಿದ್ದ ಆಲದ ಮರದಲ್ಲೀಗ ಕೊನರುವಿಕೆ ಆರಂಭ
BP News ಬಳ್ಳಾರಿ,ಜು.28-ಸತ್ಯನಾರಾಯಣ ಪೇಟೆಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ ಸರ್ಕಲ್ ಬಳಿ ಜೂನ್ 2 ರಂದು ಗಾಳಿ, ಮಳೆ ತಾಳದೇ ಉರುಳಿ ಬಿದ್ದಿದ್ದ ಬೃಹತ್ ಗಾತ್ರದ ಆಲದ ಮರವನ್ನು ಅದೇ ಸ್ಥಳದಲ್ಲಿ ಮರಳಿ ನೆಟ್ಟಿದ್ದು ಇದೀಗ ಹಸಿರು ಕೊರುತ್ತಿದೆ.
ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯ ಡಾ.ಕೆಎಸ್ ಅಶೋಕ್ ಕುಮಾರ್ ಅವರ ನೆರವಿನೊಂದಿಗೆ ಉರುಳಿ ಬಿದ್ದಿದ್ದ ಮರ ಮರಳಿ ಅದೇ ಜಾಗದಲ್ಲಿ ಊರಲಾಗಿತ್ತು. ಇದೀಗ ಮರು ಜೀವ ಬಂದಿದೆ. ಆಲದೆಲೆಯ ಚಿರುಗು ಕೊರುತ್ತಿದೆ. ಇದಕ್ಕಾಗಿ ಶ್ರಮಿಸಿದ ಡಾ.ಕೆಎಸ್ ಅಶೋಕ್ ಕುಮಾರ್ ಮತ್ತು ಸ್ನೇಹಿತರಲ್ಲಿ ಮಂದಹಾಸ ಮೂಡಿಸಿದೆ.
—–