BP NEWS: ರಾಯಚೂರು: ಜುಲೈ.25: ಜಿಲ್ಲೆಯಲ್ಲಿ ಇದೇ ಆಗಸ್ಟ್ 1ರಿಂದ 15ರವರೆಗೆ ಜಿಲ್ಲೆಯಾದ್ಯಂತ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ನಡೆಯಲಿದ್ದು, ಓಆರ್‌ಎಸ್ ಮತ್ತು ಝಿಂಕ್ ಮಾತ್ರೆಗಳನ್ನು ವಿತರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಎಲ್.ಚಂದ್ರಶೇಖರ ನಾಯಕ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಜು.25ರ ಸೋಮವಾರ ದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅತಿಸಾರಭೇದಿ ನಿಯಂತ್ರಣ ಪಾಕ್ಷಿಕ-2022ರ ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ಚಿಕ್ಕ ಮಕ್ಕಳಲ್ಲಿ ಅತಿಸಾರ ಭೇದಿ ಉಂಟಾದರೆ ನಿರ್ಜಲೀಕರಣ ತಡೆಯಲು ಓಆರ್‌ಎಸ್ ದ್ರಾವಣ ಕುಡಿಯಬೇಕು. ಅತಿಯಾದ ಭೇದಿಯಿಂದ ಬಳಲುವ ಮಕ್ಕಳಿಗೆ ಝಿಂಕ್ ಮಾತ್ರೆ ನೀಡಬೇಕು. ಈ ಕುರಿತು ಜಾಗೃತಿ ಮೂಡಿಸಲು ಪಾಕ್ಷಿಕದ ಅವಧಿಯಲ್ಲಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು, ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಓಆರ್‌ಎಸ್ ಮತ್ತು ಝಿಂಕ್ ಮಾತ್ರಗಳು ದೊರೆಯುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಅತಿಸಾರ ಭೇದಿಯಿಂದ ಸಾವಿಗೀಡಾಗುವ ಐದು ವರ್ಷದೊಳಗಿನ ಮಕ್ಕಳ ಸಂಖ್ಯೆ ಕಡಿಮೆ ಮಾಡಲು ಜಾಗೃತಿ ಅಭಿಯಾನ ನಡೆಸಬೇಕು. ಓಆರ್‌ಎಸ್ ದ್ರಾವಣದ ತಯಾರಿ ಮತ್ತು ಝಿಂಕ್ ಮಾತ್ರೆಗಳ ಬಳಕೆಯ ಕುರಿತು ಕಾರ್ನರ್‌ಗಳಲ್ಲಿ ಪ್ರಾತ್ಯಕ್ಷಿಕೆ ನೀಡಬೇಕೆಂದು ಹೇಳಿದರು.
ಮನೆ ಮನೆಗೆ ಓ.ಆರ್.ಎಸ್: ಪಾಕ್ಷಿಕದ ಅವಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ಐದು ವರ್ಷದೊಳಗಿನ ಮಕ್ಕಳಿರುವ ಮನೆಗಳಿಗೆ ಭೇಟಿ ನೀಡಲಿದ್ದು, 2,37,396ಮಕ್ಕಳನ್ನು ತಲುಪುವ ಗುರಿ ಹೊಂದಲಾಗಿದೆ. 2662 ಅಂಗನವಾಡಿ ಕಾರ್ಯಕರ್ತೆಯರು, 1461 ಆಶಾ ಕಾರ್ಯಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಇತರರು ಅಭಿಯಾನದ ಯಶಸ್ಸಿಗೆ ಶ್ರಮಿಸಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಹೆಚ್ಚಿನ ಸಂದರ್ಭಗಳಲ್ಲಿ ಕೈ ಶುಚಿಯಾಗಿಲ್ಲದೇ ಇರುವುದು ಅತಿಸಾರ ಭೇದಿಗೆ ಕಾರಣವಾಗುತ್ತದೆ. ಎಳೆಯ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಬಿಸಿಯೂಟ ತಯಾರಕರಲ್ಲಿ ಪಾಕ್ಷಿಕದವಧಿಯಲ್ಲಿ ಈ ಕುರಿತು ಜಾಗೃತಿ ಮಾಡಿಸಬೇಕು. ಎದೆ ಹಾಲುಣಿಸುವುದರ ಮಹತ್ವ ಕುರಿತು ಅರಿವು ಮೂಡಿಸಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ವಿಜಯಶಂಕರ್, ಜಿಲ್ಲಾ ಆರ್.ಸಿ.ಹೆಚ್. ಡಾ.ನಂದಿತಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೃಷಬೇಂದ್ರಯ್ಯ ಸ್ವಾಮಿ, ಆಯುಷ್ ಇಲಾಖೆಯ ಅಧಿಕಾರಿ ಶಂಕರಗೌಡ ಪಾಟೀಲ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮನ್ಸೂರ್ ಅಹ್ಮದ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಆರೋಗ್ಯಾಧಿಕಾರಿಗಳು ಸಭೆಯಲ್ಲಿ ಇದ್ದರು.