ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕನ ಮನೆಗೆ ತೆರಳಿ ಸಾಂತ್ವನ ಹೇಳಿದ ಕಾರ್ಮಿಕ ಸಚಿವರು

0
23

BP NEWS Karnataka: Hubballi: Dec.07:

“ಕಷ್ಟ ಬಂತು ಅಂತ ಯಾರೂ ಹೀಗೆ ಮಾಡಿಕೊಳ್ಳಬೇಡಿ. ನಾನು ನಿಮ್ಮ ಜೊತೆ ಸದಾ ಇದ್ದೇನೆ”

ಹೀಗೆ ಸಾಂತ್ವಾನ ಹೇಳಿದ್ದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು.

ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಬಿಡಿಕೆ ವಾಲ್ವ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಾರ್ಮಿಕ ನಿಂಗನಗೌಡ ಪಾಟೀಲ್‌ ಅವರು ಇಂದು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಮನೆಗೆ ಇಂದು ಭೇಟಿ ನೀಡಿದ ಸಚಿವ ಸಂತೋಷ್‌ ಲಾಡ್‌ ಅವರು ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಕಂಪನಿಯು, ಕಾರ್ಮಿಕರಿಗೆ ವೇತನ ನೀಡದೆ ಸತಾಯಿಸುತ್ತಿದೆ ಎಂದು ಆರೋಪಿಸಿ ಕಂಪನಿಯ ಆಡಳಿತ ಮಂಡಳಿ ವಿರುದ್ಧ ನೌಕರರು ಕೆಲ ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ಅಹವಾಲುಗಳನ್ನು ಲಾಡ್ ಅವರು ಆಲಿಸಿದ್ದರು. ಆದರೆ ಪ್ರತಿಭಟನೆ ನಡೆಸಿದ್ದ ಕಾರ್ಮಿಕರನ್ನು ಇತ್ತೀಚೆಗೆ ಕಂಪನಿ ಕೆಲಸದಿಂದ ತೆಗೆದುಹಾಕಿತ್ತು. ಇದರಿಂದ ಮನನೊಂದ ನಿಂಗನಗೌಡ ಪಾಟೀಲ್‌ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಇಂದು ಜಿಲ್ಲಾ ಪ್ರವಾಸದಲ್ಲಿದ್ದ ಸಚಿವ ಲಾಡ್‌ ಅವರು ನಿಂಗನಗೌಡ ಅವರ ಮನೆಗೆ ಭೇಟಿ ನೀಡಿದ್ದರು.
ಲಾಡ್‌ ಅವರು ಮನೆಗೆ ಭೇಟಿ ನೀಡುತ್ತಿದ್ದಾಗಲೇ ನಿಂಗನಗೌಡ ಕುಟುಂಬದವರು ದುಃಖದ ಮುಡುವಿನಲ್ಲಿದ್ದರು. ಮನೆ ಮಗನನ್ನು ಕಳೆದುಕೊಂಡು ಅವರೆಲ್ಲ ನೋವಿನಲ್ಲಿದ್ದರು. ಅವರ ನೋವನ್ನು ಆಲಿಸಿದ ಸಚಿವರು ನೆಲದ ಮೇಲೆ ಕುಳಿತು ಎಲ್ಲವನ್ನೂ ಕೇಳಿಸಿಕೊಂಡು ಮಮ್ಮಲ ಮರುಗಿದರು.

ಯಾರಿಗಾದರೂ ಕಷ್ಟವಾದರೆ, ಸಮಸ್ಯೆ ಇದ್ದರೆ ನನಗೆ ತಿಳಿಸಿ, ನನ್ನ ಕೈಲಿ ಎಷ್ಟಾಗುತ್ತೆ ಅಷ್ಟು ಸಹಾಯ ಮಾಡುತ್ತೇನೆ. ಸಾರ್ವಜನಿಕ ಜೀವನದಲ್ಲಿ ನಾನು ಬದುಕಿ ಉಳಿದವನು, ಕಷ್ಟವನ್ನು ಎದುರಿಸುವುದನ್ನು ಎಲ್ಲರೂ ಕಲಿಯಬೇಕು. ಬಡವ, ಸಾಹುಕಾರ ಯಾರೇ ಇರಲಿ. ಕಷ್ಟ ಸುಖ ಎಲ್ಲರಿಗೂ ಬಂದೇ ಬರುತ್ತದೆ. ಜೀವ ತೆಗೆದುಕೊಳ್ಳುವುದೇ ಪರಿಹಾರವಾಗಬಾರದು. ಇದೆಲ್ಲ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದಿಲ್ಲ ಎಂದು ಹೇಳಿದರು.

ಕೆಲ ದಿನಗಳ ಹಿಂದೆ ಕಂಪನಿ ವಿರುದ್ಧ ಪ್ರತಿಭಟನೆ ನಡೆಸುತಿದ್ದಾಗ ಅವರನ್ನು ಭೇಟಿ ಮಾಡಿ ಮಾತನಾಡಿದ್ದೆ. ಏನಾದರೂ ಕಷ್ಟವಿದ್ದರೆ ಬನ್ನಿ ಎಂದು ತಿಳಿಸಿದ್ದೆ ಎಂದರು.

ಸಚಿವರ ಈ ಮಾನವೀಯ ನಡೆಗೆ ಅಲ್ಲಿ ಸೇರಿದ್ದ ಜನರು ಮೌನವಾಗಿದ್ದರು. ಇಂತಹ ಜನಪ್ರತಿನಿಧಿಯನ್ನು ಪಡೆದ ನಾವೇ ಪುಣ್ಯವಂತರು ಎಂಬ ಭಾವನೆ ಅವರಲ್ಲಿತ್ತು.