BP NEWS Karnataka: ಬಳ್ಳಾರಿ: ಸೆಪ್ಟೆಂಬರ್.15:
ಮನುಷ್ಯ ಬದುಕಿನ ತಾಕಲಾಟ,ನಿತ್ಯ ಬದುಕಿನ ತಲ್ಲಣಗಳನ್ನು ಕಥೆಗಾರರು ಕಥೆಗಳಲ್ಲಿ ಸೂಕ್ಷ್ಮ ವಾಗಿ ಹಿಡಿದಿಟ್ಟಿದ್ದಾರೆ ಎಂದು
ಬಿಎಂಸಿಆರ್ ಸಿಯ ಹಿರಿಯ ವೈದ್ಯಾಧಿಕಾರಿಗಳಾದ ಡಾ.ದಿನೇಶ ಗುಡಿ ಅಭಿಪ್ರಾಯ ಪಟ್ಟರು .
ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಒಲವು ಬರೆಹ ಬೆಂಗಳೂರು ಜಂಟಿಯಾಗಿ ಭಾನುವಾರ ಕನ್ನಡ ಭವನದಲ್ಲಿ ಆಯೋಜಿಸಿದ್ದ ‘ “ಹೊಸ ಓದು” ಸರಣಿಯಲ್ಲಿ ಲೇಖಕ ಪ್ರವೀಣಕುಮಾರ ಜಿ ಅವರ ‘ಎಡೆ’ ಕಥಾ ಸಂಕಲನದ ಕುರಿತು ನಡೆದ ಸಂವಾದದಲ್ಲಿ ಮಾತನಾಡಿದರು.
ಸಾಮಾಜಿಕ ಅಸಮಾನತೆ, ವೈಚಾರಿಕ ಪ್ರಜ್ಞೆ
ಕಥೆಗಳುದ್ದಕ್ಕೂ ಹಾಸುಹೊಕ್ಕಾಗಿದೆ . ಬಳ್ಳಾರಿಯ ನೆಲದ ಭಾಷೆಯ ಸೊಗಡು ಕಥೆಗಳಿಗೆ ಮೆರುಗು ತಂದಿದೆ, ಕಥೆಗಳು ಓದಿಸಿಕೊಂಡು ಹೋಗುವ ಗುಣವನ್ನು ಪಡೆದುಕೊಂಡಿವೆ ಎಂದು ಬಣ್ಣಿಸಿದರು.
. ಸಂವಾದದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಗೋಡೆ ಶಿವರಾಜ್ ಇಲ್ಲಿನ ಬಹುಪಾಲು ಕಥೆಗಳು ಬಳ್ಳಾರಿಯ ಸುತ್ತಮುತ್ತಲಿನ ಪ್ರಸಂಗಗಳನ್ನೇ ಒಳಗೊಂಡು ಯಶಸ್ವಿಯಾಗಿವೆ ಎಂದರು.
ಸಂಜೀವಪ್ಪ ಮಾತನಾಡಿ ಪ್ರವೀಣ್ ಅವರ ಕಥೆಗಳಲ್ಲಿ ಗ್ರಾಮೀಣ ಲೋಕದ ಜನಜೀವನ , ಸಂಸ್ಕೃತಿ, ವಿಶಿಷ್ಟವಾಗಿ ತೆರೆದುಕೊಂಡಿದೆ ಎಂದರು.
ಕತೆಗಾರ ಪ್ರವೀಣ್ ಕುಮಾರ್ ಜಿ ಮಾತನಾಡಿ ನಾನು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಲೇ ಕಥೆಗಳನ್ನು ಬರೆಯುತ್ತಿದ್ದೇನೆ. ಕಥೆಗಳನ್ನು ಸಿನಿಮಾ ಮಾಧ್ಯಮದ ಮೂಲಕ ಸಹೃದಯರಿಗೆ ದಾಟಿಸುವ ಕೆಲಸವನ್ನು ಮಾಡುತ್ತಿರುವೆ. ಸಾಹಿತ್ಯ ಓದುಗರಿಗೆ ಖುಷಿಯನ್ನು ಕೊಡುವುದರ ಜೊತೆಗೆ ಅವನನ್ನು ಮನುಷ್ಯನನ್ನಾಗಿ ಮಾಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಮಾತನಾಡಿ ಇಂತಹ ಕಾರ್ಯಕ್ರಮಗಳು ಲೇಖಕರನ್ನು ಪ್ರೋತ್ಸಾಹಿಸುವುದರ ಜೊತೆಗೆ ಲೇಖಕರ ಕೃತಿಗಳ ಒಳನೋಟ, ಆಶಯಗಳನ್ನು ಎತ್ತಿ ಹಿಡಿಯುವ ಕೆಲಸ “ಹೊಸ ಓದು” ಸರಣಿಯದ್ಧಾಗಿದೆ ಎಂದರು.
ವೇದಿಕೆ ಮೇಲೆ ಶಿವಲಿಂಗಪ್ಪ ಹಂದಿಹಾಳು, ಬಸವರಾಜ ಗದುಗಿನ, ವಿನಯ್ ಇದ್ದರು.
ಈ ಸಂದರ್ಭದಲ್ಲಿ ವೀರೇಂದ್ರ ರಾವಿಹಾಳ, ಪಿ.ಆರ್.ವೆಂಕಟೇಶ, ದಸ್ತಗೀರಸಾಬ್ ದಿನ್ನಿ,, ಎನ್.ಡಿ.ವೆಂಕಮ್ಮ ,ಬಸವರಾಜ ಬಿಸ್ಲಳ್ಳಿ ,ಡಾ.ದಿವ್ಯಾ ,ಮಲ್ಲಿಕಾರ್ಜುನ, ಹನುಮಂತಪ್ಪ, ಅರುಣ್ ಭೂಪಾಲ್, ರಾಜೇಶ್ವರಿ ಹಾಜರಿದ್ದರು