BP NEWS Karnataka: ಬಳ್ಳಾರಿ: ಜೂನ್.19: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಕ್ರಮ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಎತ್ತಿನ ಬಂಡಿ ಮೆರವಣಿಗೆ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಜೆಡಿಎಸ್ ಕಚೇರಿ ಎದುರು ಜಮಾಯಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ಜಿಲ್ಲಾ ಕಚೇರಿಯಿಂದ ದ್ವಿಚಕ್ರ ವಾಹನಗಳ ಮೂಲಕ ಎತ್ತಿನ ಬಂಡಿಗಳ ಮೆರವಣಿಗೆ ನಡೆಸಲಾಯಿತು. ರಾಯಲ್ ವೃತ್ತದಲ್ಲಿ ಜಮಾಯಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಡಿಸಿ ಕಚೇರಿಗೆ ತೆರಳಿ ನಾನಾ ಬೇಡಿಕೆಗಳ ಮನವಿ ಪತ್ರವನ್ನು ಡಿಸಿ ಅವರ ಮೂಲಕ ರಾಜ್ಯಪಾಲರಿಗೆ ರವಾನಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಬಡವರ ನೆಮ್ಮದಿ ಜೀವನವನ್ನೇ ಹಾಳು ಮಾಡಿದೆ, ಕಳೆದ ವರ್ಷ ಸಮರ್ಪಕ ಮಳೆಯಾಗದ ಹಿನ್ನೆಲೆ ಬರದ ಬವಣೆಗೆ ಸಿಲುಕಿದ್ದ ಬಡಜನರಿಗೆ ಸರ್ಕಾರ ಬೆಲೆ ಹೆಚ್ಚಳ ಮಾಡುವ ಮೂಲಕ ಮತ್ತೆ ಗಾಯದ ಮೇಲೆ ಬರೆ ಎಳೆದಿದೆ, ಕೂಡಲೇ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು, ನಿರ್ಲಕ್ಷ್ಯ ವಹಿಸಿದರೆ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ಸಂಡೂರು ವಿಧಾನಸಭೆ ಕ್ಷೇತ್ರದ ಮುಖಂಡ ಎನ್.ಸೋಮಪ್ಪ ಅವರು ಮಾತನಾಡಿ, ಪೆಟ್ರೋಲ್, ಡೀಸೆಲ್, ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿದ್ದು, ಕೂಡಲೇ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅದ್ದಿಗೇರಿ ರಾಮಣ್ಣ, ಅಶೋಕ್, ಶಿವ ನಾರಾಯಣ, ವoಡ್ರಿ, ನಾಗರಾಜ್, ಬಸಪ್ಪ, ಮುತ್ತು, ಜಮೀಲ, ಭವಾನಿ, ಯಶೋಧ, ನಿಲಾ, ರೇಣುಕಾ, ರಹಿಮ್ಮದ್ ಬೀ, ಬಾಲ ಸುಬ್ರಹ್ಮಣ್ಯ ಚೌದ್ರಿ, ತಳವಾರ್ ಅಂಬಣ್ಣ, ಖಾಜಿ, ಎಸ್.ಹುಸೇನ್ ಭಾಷಾ, ವನ್ನೂರ್ ಅಲಿ, ಶಿವ ನಾರಾಯಣ ಇತರರು ಇದ್ದರು.