BP NEWS: ಬಳ್ಳಾರಿ: ಏಪ್ರಿಲ್.12: ನಗರದ ಒಟ್ಟು 06 ಕೇಂದ್ರಗಳಲ್ಲಿ ಏ.15 ರಿಂದ ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ವತಿಯಿಂದ 2024ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ, ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ನಡೆಯಲಿದ್ದು, ಮೌಲ್ಯಮಾಪನದಲ್ಲಿ ಅವ್ಯವಹಾರಗಳನ್ನು ತಡೆಗಟ್ಟಲು ಮೌಲ್ಯ ಮಾಪನ ಕೇಂದ್ರಗಳ ಸುತ್ತಲೂ 1973ರ ಕಲಂ 144ರಲ್ಲಿನ ಪ್ರದತ್ತವಾದ ಅಧಿಕಾರ ಚಲಾಯಿಸಿ 200 ಮೀಟರ್ ಆವರಣವನ್ನು ನಿರ್ಭಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ ದಂಡಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.
ಮೌಲ್ಯಮಾಪನ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಮೌಲ್ಯಮಾಪನ ಕೇಂದ್ರಗಳಿಗೆ ಬಾಹ್ಯ ಮತ್ತು ಅನ್ಯ ವ್ಯಕ್ತಿಗಳು ಮತ್ತು ಪ್ರಚಾರಕ್ಕಾಗಿ ಬರುವ ಜನಪ್ರತಿನಿಧಿಗಳ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚುನಾವಣಾ ಸಮಯವಾಗಿರುವುದರಿಂದ, ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ರಾಜಕೀಯ ವ್ಯಕ್ತಿಗಳು, ಮೌಲ್ಯಮಾಪನ ಕೆಂದ್ರಕ್ಕೆ ಭೇಟಿ ನೀಡುವ ಸಂಭವವಿರುವುದರಿಂದ, ರಾಜಕೀಯ ವ್ಯಕ್ತಿಗಳು ಮೌಲ್ಯಮಾಪನ ಕೆಂದ್ರಕ್ಕೆ ಭೇಟಿ ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಮೌಲ್ಯಮಾಪನ ಕೇಂದ್ರದ 200 ಮೀಟರ್ ಸುತ್ತ ನಿಷೇಧಿತ ಪ್ರದೇಶವಾಗಿರುವುದರಿಂದ ಯಾವುದೇ ರಾಜಕೀಯ ಪಕ್ಷಕ್ಕಾಗಲಿ ಅಥವಾ ಯಾವುದೇ ಸಂಘಟನೆಯಲ್ಲಿನ ವ್ಯಕ್ತಿಗಳು ಅಥವಾ ಯಾವುದೇ ಅನ್ಯವ್ಯಕ್ತಿಗಳು ಮೌಲ್ಯಮಾಪನ ಕೇಂದ್ರವನ್ನು ಪ್ರವೇಶಿಸುವುದು ನಿಷೇಧಿಸಲಾಗಿದೆ.
*ಮೌಲ್ಯಮಾಪನ ಕೇಂದ್ರಗಳು:*
ಬಳ್ಳಾರಿಯ ವೈ.ನಾಗೇಶ ಶಾಸ್ತ್ರಿ ನಗರದ ಶೆಟ್ಟರ ಗುರುಶಾಂತಪ್ಪ ಪ್ರೌಢಶಾಲೆ, ಗಾಂಧಿನಗರದ ವಿವೇಕಾನಂದ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ, ಅನಂತಪುರ ರಸ್ತೆಯ ಶಾಂತಿನಿಕೇತನ ಇಂಗ್ಲೀಷ್ ಮಾಧ್ಯಮ ಶಾಲೆ, ಕೌಲ್‍ಬಜಾರ್‍ನ ಸೆಂಟ್ ಜೋಸೆಫ್ ಬಾಲಕರ ಪ್ರೌಢಶಾಲೆ, ಕಂಟೋನ್‍ಮೆಂಟ್‍ನ ನಂದಿ ಪ್ರೌಢಶಾಲೆ ಮತ್ತು ಕೌಲ್‍ಬಜಾರ್‍ನ ಸೆಂಟ್ ಜೋಸೆಫ್ ಬಾಲಕಿಯರ ಪ್ರೌಢಶಾಲೆ.
ಈ ಆದೇಶವು ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಮೌಲ್ಯ ಮಾಪನ ಕಾರ್ಯ ನಿರ್ವಹಿಸುವ ಸಿಬ್ಬಂದಿಯವರೆಗೆ ಅನ್ವಯಿಸುವುದಿಲ್ಲ ಎಂದು ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.