ಬಿಸಿಲಿನ ಶಾಖಾಘಾತ: ನಿರ್ಜನ ಪ್ರದೇಶದಲ್ಲಿ ಒಬ್ಬರೇ ಓಡಾಡುವುದು ತಪ್ಪಿಸಿ

0
64

BP NEWS: ಬಳ್ಳಾರಿ: ಏಪ್ರಿಲ್.10:

ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲು ಪ್ರಖರವಾಗಿ ಕಂಡುಬರುತ್ತಿದ್ದು, ಬಿಸಿಲಿನ ಶಾಖಾಘಾತಕ್ಕೆ ಒಳಗಾಗುವ ಸಂಭವ ಹೆಚ್ಚಿದ್ದು, ನಿರ್ಜನ ಪ್ರದೇಶದಲ್ಲಿ ಸಾರ್ವಜನಿಕರು ಒಬ್ಬರೇ ಓಡಾಡುವುದನ್ನು ತಪ್ಪಿಸುವ ಮೂಲಕ ಬಿಸಿಲಿನ ಸೂರ್ಯಘಾತದ ಅನಾಹುತದಿಂದ ಪಾರಾಗಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ವೈ.ರಮೇಶ ಬಾಬು ಕೋರಿದ್ದಾರೆ.
ಮಧ್ಯಾಹ್ನ 01 ರಿಂದ 04 ಗಂಟೆ ಅವಧಿಯಲ್ಲಿ ವಯೋವೃದ್ದರು, ಮಕ್ಕಳು, ಗರ್ಭಿಣಿ ಮತ್ತು ದೀರ್ಘಕಾಲಿನ ಖಾಯಿಲೆಗಳಿಗೆ ಔಷಧಿ ಸೇವಿಸುವ ಪ್ರತಿಯೊಬ್ಬರು ಆದಷ್ಟು ನೆರಳಿನಲ್ಲಿ ಇರುವುದಕ್ಕೆ ಆದ್ಯತೆ ನೀಡಬೇಕು. ಯಾರೂ ನಿರ್ಜನ ಪ್ರದೇಶದಲ್ಲಿ ಒಬ್ಬಂಟಿಗರಾಗಿ ಹೋಗದೇ ಸೂರ್ಯಾಘಾತದ ಅನಾಹುತದಿಂದ ತಪ್ಪಿಸಲು ಪ್ರತಿಯೊಬ್ಬರೂ ಆರೋಗ್ಯ ಇಲಾಖೆಗೆ ಕೈ ಜೋಡಿಸಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಿರ್ಜಲೀಕರಣ ತಡೆಗಟ್ಟಲು ಓ.ಆರ್.ಎಸ್ ಜೀವಜಲ ಪುಡಿಯನ್ನು ಅಗತ್ಯವುಳ್ಳವರಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ರೋಗಿಗಳ ಆರೈಕೆಗಾಗಿ, ಐವಿ ಪ್ಲೂಯಿಡ್ಸ್ ಮತ್ತು ಜೀವರಕ್ಷಕ ಔಷಧಗಳ ದಾಸ್ತಾನು ಇಟ್ಟುಕೊಳ್ಳಲಾಗಿದೆ.
ಓ.ಆರ್.ಎಸ್. ದ್ರಾವಣವನ್ನು 1 ಲೀಟರ್ ನೀರಿಗೆ 1 ಪೊಟ್ಟಣದ ಸಂಪೂರ್ಣ ಪುಡಿಯನ್ನು ಹಾಕಿ 24 ಗಂಟೆಯೊಳಗಡೆ ಕುಡಿಯಲು ಬಳಸುವ ಮೂಲಕ ಬಿಸಿಲಿನ ಪ್ರಖರತೆಯಿಂದ ಉಂಟಾಗುವ ನಿರ್ಜಲೀಕರಣವನ್ನು ತಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಜರುಗುತ್ತಿರುವ ಪ್ರಮುಖ ಜಾತ್ರೆಗಳಲ್ಲಿ ನಿರ್ಜಲೀಕರಣವನ್ನು ತಡೆಗಟ್ಟಲು ತುರ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆದು ಓಆರ್‍ಎಸ್ ಜೀವಜಲವನ್ನು ಸಿದ್ದಪಡಿಸಿ ಜನತೆಗೆ ಒದಗಿಸುವ ಕಾರ್ಯ ಮಾಡಲಾಗುತ್ತಿದೆ.
ಜಿಲ್ಲಾ ಕಾಲರಾ ತಂಡದಿಂದ ಕುಡಿಯುವ ನೀರಿನ ಮೂಲಗಳನ್ನು ನಿರಂತರವಾಗಿ ಪರೀಕ್ಷಿಸಿ ಕುಡಿಯಲು ಯೋಗ್ಯವೆಂದು ಖಚಿತಪಡಿಸಿದ ನಂತರವೇ ಜಾತ್ರೆಯಲ್ಲಿ ಯಾವುದೇ ವಾಂತಿ, ಬೇಧಿ ಪ್ರಕರಣಗಳು ವರದಿಯಾಗದಂತೆ ಕ್ರಮವಹಿಸಲಾಗಿದೆ. ಲೋಕಸಭಾ ಚುನಾವಣೆಯ ಹಿನ್ನಲೆ ಜಿಲ್ಲೆಯ ಗಡಿಭಾಗದಲ್ಲಿ ಹಾಗೂ ಇತರೆಡೆ ತೆರೆದಿರುವ 24 ಚೆಕ್‍ಪೋಸ್ಟ್ ಸಿಬ್ಬಂದಿಯವರಿಗೆ ಓಆರ್‍ಎಸ್ ಪೊಟ್ಟಣಗಳನ್ನು ಹಾಗೂ ತುರ್ತು ಚಿಕಿತ್ಸಾ ಔಷಧಿಗಳನ್ನು ವಿತರಿಸಲಾಗಿದೆ.
ಸಾರ್ವಜನಿಕರು ಮಧ್ಯಾಹ್ನದ ವೇಳೆ ಅಗತ್ಯವೆನಿಸುವ ಸಂದರ್ಭಗಳಲ್ಲಿ ಮನೆಯಿಂದ ಹೊರಗಡೆ ಬರುವಾಗ ಕುಡಿಯುವ ಶುದ್ದವಾದ ನೀರು, ಹಾಗೂ ಛತ್ರಿ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗುವಾಗ ಮಕ್ಕಳಿಗೆ ತಲೆಯ ಮೇಲೆ ನೀರಿನಿಂದ ಒದ್ದೆ ಮಾಡಿದ ಬಟ್ಟೆಯನ್ನು ಹಾಕಬೇಕು. ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗದಂತೆ ಕಾಳಜಿವಹಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here