BP NEWS: ಬಳ್ಳಾರಿ: ಏಪ್ರಿಲ್.06:
ಮತದಾನ ಜಾಗೃತಿ ಮೂಡಿಸುವ ಕಾರ್ಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ಕಾರ್ಯದಲ್ಲಿ ಪಾಲ್ಗೊಂಡಿರುವ ವಿಕಲಾಂಗ ಚೇತನರ ಕಾರ್ಯ ಶ್ಲಾಘನೀಯ ಎಂದು ಸಂಡೂರು ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಸತೀಶ್ ಅವರು ಹೇಳಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ತಾಲ್ಲೂಕು ಸ್ವಿಪ್ ಸಮಿತಿ, ತಾಲ್ಲೂಕು ಆಡಳಿತ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ವಿಕಲಚೇತನರ ಯಂತ್ರಚಾಲಿತ ತ್ರಿಚಕ್ರ ವಾಹನ (ಬೈಕ್) ಮತದಾನ ಜಾಗೃತಿ ಜಾಥಕ್ಕೆ ಹಸಿರು ಬಾವುಟ ಹಾರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸುಭದ್ರ ದೇಶದ ಭವಿಷ್ಯಕ್ಕಾಗಿ ಪ್ರಜೆಗಳೇ ಪ್ರಭುಗಳು ಆಗಿದ್ದು, ಪ್ರಜೆಗಳು ಯಾವುದೆ ಆಮೀಷಕ್ಕೆ ಒಳಗಾಗದೆ ಮತದಾನ ಮಾಡಿ ಎಂದು ಹೇಳಿದರು.
ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ತಾಲ್ಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರಾದ ಷಡಕ್ಷರಯ್ಯ ಅವರು ಮಾತನಾಡಿ, ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತಚಲಾಯಿಸಿ ಹಾಗೂ ವಿಕಲಚೇತನರು ಸಹ ತಪ್ಪದೇ ಮತಗಟ್ಟೆಗೆ ಬಂದು ಮತ ಚಲಾಯಿಸಲು ಸೌಕರ್ಯ ಕಲ್ಪಿಸಲಾಗಿದೆ ಎಂದರು.
ರ್ಯಾಂಪ್ಸ್, ರೈಲಿಂಗ್ ವ್ಹೀಲ್ ಚೇರ್, ಬೂತ್ ಕನ್ನಡಿ, ವಿಕಲಚೇತನರಿಗೆ ಸಾರಿಗೆ ವ್ಯವಸ್ಥೆ ಶೌಚಾಲಯ ವ್ಯವಸ್ಥೆ ಮಾಡಲಾಗಿದ್ದು, ಮನೆಯಿಂದ ಬಂದು ಮತ ಹಾಕದೆ ಇರುವವರಿಗೆ 12 ಡಿ ನಮೂನೆ ವಿತರಿಸಿ ಮತಹಾಕುವ ವ್ಯವಸ್ಥೆಯನ್ನು ಮಾಡಲಾಗಿದೆ. ಯಾರು ಕೂಡ ಮತದಾನದಿಂದ ವಂಚಿತರಾಗಬಾರದು ಎಂದು ತಿಳಿಸಿದರು ಎಂದರು.
ಬಳಿಕ ಎಲ್ಲರೂ ಮತದಾನದ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಯಣ್ಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಳೆ ನಾಗಪ್ಪ, ಸಹಾಯಕ ನಿರ್ದೇಶಕ ವೆಂಕಟೇಶ್, ವಿಕಲಚೇತನರ ವಿಭಾಗದಿಂದ ಎಂಆರ್‍ಡಬ್ಲ್ಯೂ ಸಿ.ಕರಿಬಸಜ್ಜ ಹಾಗೂ ಎಲ್ಲಾ ವಿಆರ್‍ಡಬ್ಲ್ಯೂ ಮತ್ತು ಯುಆರ್‍ಡಬ್ಲ್ಯೂ ಕಾರ್ಯಕರ್ತರು ಭಾಗವಹಿಸಿದ್ದರು.
ಜಾಗೃತಿ ಜಾಥಾವು ತಾಲ್ಲೂಕು ಪಂಚಾಯಿತಿ ಆವರಣದಿಂದ ಆರಂಭವಾಗಿ ವಿಜಯ ಸರ್ಕಲ್, ಕೃಷ್ಣಾನಗರ ಗ್ರಾಮದ ಬಿಕೆಜಿ ಶಾಲೆ, ಪುರಸಭೆ, ಬಸ್ ನಿಲ್ದಾಣದ ಕೆಎಸ್‍ಆರ್‍ಟಿಸಿ ಬಸ್ ಡಿಪೆÇೀ ಮಾರ್ಗವಾಗಿ ಅರಣ್ಯ ಇಲಾಖೆ ಕಚೇರಿವರೆಗೆ ತಲುಪಿ ಮರಳಿ ಪುರಸಭೆ ಬಸ್ ನಿಲ್ದಾಣದಿಂದ ತಾಲ್ಲೂಕು ಪಂಚಾಯತ್ ಆವರಣದಲ್ಲಿ ಕೊನೆಗೊಂಡಿತು.