BP NEWS: ಬಳ್ಳಾರಿ: ಜನವರಿ.18:
ಭಾರತ ಸಂವಿಧಾನ ಆಶಯ ಮತ್ತು ಅದರ ಮೌಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜನವರಿ 26 ರಿಂದ ಜಿಲ್ಲೆಯಾದ್ಯಂತ ಸಂವಿಧಾನ “ಜಾಗೃತಿ ಜಾಥಾ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಗ್ರಾಮಪಂಚಾಯತಿಗಳಲ್ಲಿ ಸ್ಥಬ್ಧಚಿತ್ರ ವಾಹನದ ಮೂಲಕ ಮೆರವಣಿಗೆ ನಡೆಸಿ ಜನರಿಗೆ ಸಂವಿಧಾನ ಪರಿಕಲ್ಪನೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸತೀಶ್ ಅವರು ಮಾತನಾಡಿ, ಸಂವಿಧಾನ ಜಾಥಾ ಕಾರ್ಯಕ್ರಮದ ಸ್ಥಬ್ದಚಿತ್ರ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವರು ಜನವರಿ 26ರಂದು ಚಾಲನೆ ನೀಡಲಿದ್ದಾರೆ. ಮೆರವಣಿಗೆಯು ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಸಂಚರಿಸಲಿದೆ. ಪ್ರತಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಸ್ಥಬ್ದಚಿತ್ರ ವಾಹನ ಆಗಮಿಸಿದಾಗ ಜನಪ್ರತಿನಿಧಿಗಳು ಮೆರವಣಿಗೆಯನ್ನು ಸ್ವಾಗತಿಸುವರು. ಸ್ಥಳೀಯ ಸಂಸ್ಥೆಗಳು ಎಲ್ಲಾ ರೀತಿಯ ಬೆಂಬಲ ನೀಡಬೇಕು. ಸಂಜೆ ವೇಳೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ಮೆರವಣಿಗೆಯ ಉದ್ದಕ್ಕೂ ಭಾರತ ಸಂವಿಧಾನದ ಬಗ್ಗೆ ಕಿರು ಮಾಹಿತಿ ಪುಸ್ತಕವನ್ನು ಮುದ್ರಿಸಿ ಪ್ರತಿಗಳನ್ನು ಜನಸಾಮಾನ್ಯರಿಗೆ ವಿತರಿಸುವ ವ್ಯವಸ್ಥೆ ಮಾಡಬೇಕೆಂದು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಸಹಾಯಕ ಆಯುಕ್ತರಾದ ಹೇಮಂತ್.ಎನ್, ಎಎಸ್ಪಿ ಕೆ.ಪಿ.ರವಿಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.